Belagavi NewsBelgaum NewsKannada NewsKarnataka News

*ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮದುವೆಯಾದ ವ್ಯಕ್ತಿ: 36 ಲಕ್ಷ ಪಡೆದು ಪರಾರಿ*

ಪ್ರಗತಿವಾಹಿನಿ ಸುದ್ದಿ : ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಆಕೆ ಜತೆ ಸಂಸಾರ ನಡೆಸಿ ಮಗು ಜನಿಸಿದ ಬಳಿಕ, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂಪಾಯಿ ಪಡೆದು ಬಳಿಕ ವ್ಯಕ್ತಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿಯ ಮೋಹನ್ ರಾಜ್ ಎಂಬಾತನ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಳೆದ 10 ವರ್ಷಗಳಿಂದ ಮೋಹನ್ ರಾಜ್ ಪರಿಚಯವಿದ್ದು, 2022ರಲ್ಲಿ ಇಬ್ಬರ ನಡುವೆ ಮದುವೆ ನಡೆದಿತ್ತು. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮದುವೆಯಾದ ಬಳಿಕ ಹೊಸ ಮನೆ ಕಟ್ಟೋಣ, ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದಿದ್ದಾನೆ ಎಂಬ ಆರೋಪವಿದೆ. ಚಿನ್ನಾಭರಣ ಅಡವಿಟ್ಟು, ಸಾಲ ಪಡೆದು ಒಟ್ಟು 36 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮಹಿಳೆ ದೂರಿದ್ದಾರೆ. ಈಗ ಹಣ ಕೇಳಿದರೆ ನೀನು ಯಾರು ಅಂತಲೇ ಗೊತ್ತಿಲ್ಲ ಎಂದು ಹೇಳುತ್ತಾನೆ ಎಂದು ಆರೋಪಿಸಿದ್ದಾರೆ.

ನ್ಯಾಯ ಕೇಳಲು ಮೋಹನ್ ರಾಜ್ ಮನೆ ಬಳಿ ಹೋದಾಗ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಈವರೆಗೆ ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನ್ಯಾಯ ಸಿಗುತ್ತಿಲ್ಲ. ಮತ್ತೊಮ್ಮೆ ದೂರು ನೀಡಿದರೆ ನಿನ್ನನ್ನೇ ಒಳಗೆ ಹಾಕ್ತೀವಿ ಎಂದು ಪೊಲೀಸರು ಹೆದರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. 

Home add -Advt

ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ, ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ. ಮೊಬೈಲ್‌ನಲ್ಲಿ ಫೋಟೋಗಳನ್ನೂ ನೋಡಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮದುವೆಗೆ ಮುಂಚೆಯೂ ನಂತರವೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ತನ್ನ ಹೆಣ್ಣು ಮಗು ಹಾಗೂ ಮೊದಲ ಪತಿಯ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾರೆ. 

ಪೊಲೀಸರೊಂದಿಗೆ ಆರೋಪಿಗೆ ನಂಟಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೊನೆಗೆ ಇದೀಗ ಆರೋಪಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Related Articles

Back to top button