*ಮನುಷ್ಯ ಮನುಷ್ಯನನ್ನು ದ್ವೇಷಿಸುವುದನ್ನು ಬಿಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಮನುಷ್ಯ ಮನುಷ್ಯನನ್ನು ದ್ವೇಷಿಸುವುದನ್ನು ಬಿಡಬೇಕು, ಆಗಷ್ಟೇ ನಾವು ನಿಜವಾದ ಭಾರತೀಯರಾಗುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
‘ತರಳಬಾಳು ಹುಣ್ಣಿಮೆ ಮಹೋತ್ಸವ – 2026’ ರ ಸಂಭ್ರಮದಲ್ಲಿ ಮಾತನಾಡಿದ ಸಚಿವರು, ಮನುಷ್ಯರು ಪರಸ್ಪರ ಪ್ರೀತಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದರು.
ತರಳಬಾಳು ಹುಣ್ಣಿಮೆ ಉತ್ಸವಕ್ಕೆ 76 ವರ್ಷದ ಇತಿಹಾಸವಿದೆ. ಸಿರಿಗೆರೆ ಸ್ವಾಮಿಗಳು ಕಾಯಕವೇ ಕೈಲಾಸ ಎಂದು ನಂಬಿದವರು, ಶಿಕ್ಷಣ, ವಿಜ್ಞಾನ, ಕ್ರೀಡಾ, ನೀರಾವರಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಈ ಮೂಲಕ ಮಠದಿಂದ ಸಾರ್ಥಕ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸರ್ಕಾರಕ್ಕೆ ಸಮಾನಾಂತರವಾದ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಿವೆ. ನಿಸ್ವಾರ್ಥವಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಸ್ವಾಮಿಗಳಿಂದಲೇ ನಮ್ಮ ಭಾರತ ಸಮೃದ್ಧಿಯಾಗಿದೆ, ಪುಣ್ಯ ಭೂಮಿ ಎನಿಸಿದೆ ಎಂದು ಸಚಿವರು ಹೇಳಿದರು.
ನಾವೆಲ್ಲ ಬಸವಣ್ಣನ ಮಕ್ಕಳು, ಅವರ ತತ್ವ ಸಿದ್ದಾಂತಗಳ ಅಡಿ ಜೀವನ ಸಾಗಿಸುತ್ತಿದ್ದೇವೆ. ಎಲ್ಲರನ್ನೂ ಮನೆಯ ಮಕ್ಕಳಂತೆ ಕಾಣಿ ಎಂದು ಶಾಂತಿ ಮಂತ್ರ ಜಪಿಸಿದ್ದರು. ಅವರಂತೆಯೇ ಎಲ್ಲಾ ಧರ್ಮ ಗುರುಗಳ ಆಶಯ ಕೂಡ ಶಾಂತಿ ಒಂದೇ ಆಗಿತ್ತು. ಇದನ್ನು ಗಾಂಧಿ, ಅಂಬೇಡ್ಕರ್ ಅಂತಹ ಮಹನೀಯರು ಕೂಡ ಜಪಿಸಿದರು. ಎಲ್ಲರೂ ಹೇಳುವುದು ಒಂದೇ ದೇವನೊಬ್ಬ ನಾಮ ಹಲವು. ಎಲ್ಲರೂ ಒಳ್ಳೆಯದನ್ನು ಮಾಡಬೇಕು ಎಂದರು.
84 ಲಕ್ಷ ಜೀವ ರಾಶಿಗಳ ಬಳಿಕ ಶ್ರೇಷ್ಠವಾದ ಮಾನವ ಜಾತಿಯನ್ನು ಕೊಟ್ಟಿದ್ದಾನೆ. ಮಾನವ ಧರ್ಮವನ್ನು ಮರೆಯದೇ ಮನುಷ್ಯರಾಗಿ ಬಾಳೋಣ. ಎಲ್ಲರೂ ಕೂಡ ಒಳ್ಳೆಯದನ್ನು ಕಲಿಯಬೇಕು, ಒಳ್ಳೆಯದನ್ನು ಮಾಡಬೇಕು. ನಾವು ಇಂದಿನ ಆಧುನಿಕ ಜೀವನ ಶೈಲಿಗೆ ಸಿಲುಕಿ ಒಳ್ಳೆತನವನ್ನು ಮರೆಯುತ್ತಿದ್ದೇವೆ. ಎಲ್ಲರೂ ಮನುಷ್ಯರಾಗಿ ಬಾಳೋಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವ ಮಠಾಧೀಶರ ಮಾರ್ಗದರ್ಶನದಲ್ಲಿ ಎಲ್ಲರೂ ಬೆಳೆಯೋಣ, ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಚಿಂತನೆಯನ್ನು ಕಲಿಸೋಣ, ನಾಳೆಯ ದಿನ ನಮ್ಮ ಮಕ್ಕಳು ಈ ದೇಶವನ್ನು ಪೂಜಿಸುವಂತೆ ಮಾಡಬೇಕು. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಮನೆಯಲ್ಲಿ ಉತ್ತಮ ಸಂಸ್ಕೃತಿ ಕಲಿಸೋಣ ಎಂದು ಹೇಳಿದರು.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮಿಗಳು, ಬೆಂಗಳೂರಿನ ಬೌದ್ಧ ಮಹಾ ಬೋಧಿ ಸಮಾಜದ ಶ್ರೀ ಭಿಕ್ಷು ನ್ಯಾನನಂದಜಿ, ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಚರ್ಚ್ ನ ಫಾದರ್ ಸ್ಟ್ಯಾನಿ ಡಿಸೋಜ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಬಸವರಾಜ್ ಶಿವಗಂಗಾ, ಮಾಜಿ ಸಚಿವರಾದ ಸಿಎಂ ಇಬ್ರಾಹಿಂ, ಮುಖಂಡರಾದ ಬಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




