Belagavi NewsBelgaum NewsKannada NewsKarnataka News

*ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ*

ಮೇಲ್ಚಾವಣಿ ಕಾಂಕ್ರೀಟ್ ಕಾಮಗಾರಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದ ಮೃಣಾಲ್ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಧಾರ್ಮಿಕ ಶ್ರದ್ಧೆ, ಭಕ್ತಿ ಹಾಗೂ ಗ್ರಾಮದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ದೇವಸ್ಥಾನಗಳು ಗ್ರಾಮೀಣ ಜನಜೀವನದಲ್ಲಿ ವಿಶೇಷ ಸ್ಥಾನ ಹೊಂದಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳ್ಳಿ ಗ್ರಾಮದಲ್ಲಿ ಭವ್ಯ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಮತ್ತೊಂದು ಮಹತ್ವದ ಹಂತ ಸೇರ್ಪಡೆಯಾಗಿದೆ.


ಗ್ರಾಮದಲ್ಲಿ ಸುಮಾರು ₹1.70 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಮಾರುತಿ ದೇವಸ್ಥಾನದ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ (ಸ್ಲ್ಯಾಬ್) ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಅವರು ಪೂಜೆ ನೆರವೇರಿಸಿ ಚಾಲನೆ ನೀಡಿದರು.


ಗ್ರಾಮಸ್ಥರ ಧಾರ್ಮಿಕ ಭಾವನೆ ಹಾಗೂ ಬಹುದಿನಗಳ ಆಶಯಕ್ಕೆ ಅನುಗುಣವಾಗಿ ದೇವಸ್ಥಾನದ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು, ಭವ್ಯವಾದ ದೇವಾಲಯ ನಿರ್ಮಾಣದ ಮೂಲಕ ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹೊಸ ಮೆರುಗು ನೀಡುವ ಉದ್ದೇಶ ಹೊಂದಲಾಗಿದೆ. ದೇವಸ್ಥಾನವು ಪೂರ್ಣಗೊಂಡ ಬಳಿಕ ಗ್ರಾಮಸ್ಥರಿಗೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ-ಹರಿದಿನಗಳು ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಉತ್ತಮ ವ್ಯವಸ್ಥೆ ದೊರೆಯಲಿದೆ ಎಂದು ಮೃಣಾಲ್‌ ಹೆಬ್ಬಾಳಕರ್ ಹೇಳಿದರು.


ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಲ್ಲ; ಅವು ಗ್ರಾಮಸ್ಥರ ಒಗ್ಗಟ್ಟು, ಪರಸ್ಪರ ಬಾಂಧವ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ಕೇಂದ್ರಗಳಾಗಿವೆ. ಇಂತಹ ಧಾರ್ಮಿಕ ಕೇಂದ್ರಗಳ ನಿರ್ಮಾಣ ಮತ್ತು ಅಭಿವೃದ್ಧಿಯಿಂದ ಮುಂದಿನ ಪೀಳಿಗೆಗೂ ನಮ್ಮ ಸಂಪ್ರದಾಯ, ಆಚಾರ-ವಿಚಾರ ಹಾಗೂ ಧಾರ್ಮಿಕ ಮೌಲ್ಯಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮಸ್ಥರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯದ ಮುಂದಿನ ಹಂತಕ್ಕೆ ಶುಭ ಹಾರೈಸಿದರು.

Related Articles

Back to top button