*ಬಡತನದ ಹೊಡೆತಕ್ಕೆ ತುತ್ತಾದ ಜನ*: *ಸಾಲ ತೀರಿಸಲು ದೇಹದ ಅಂಗಾಂಗಗಳನ್ನೇ ಆನ್ಲೈನ್ನಲ್ಲಿ ಮಾರಾಟ*

ಪ್ರಗತಿವಾಹಿನಿ ಸುದ್ದಿ: ಆರ್ಥಿಕ ಬಿಕ್ಕಟ್ಟು ಮನುಷ್ಯನನ್ನು ಎಂತಹ ಹತಾಶ ಸ್ಥಿತಿಗೆ ತಳ್ಳಬಹುದು ಎಂಬುದಕ್ಕೆ ಇರಾನ್ನಿಂದ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಸಾಲದ ಹೊರೆ ಮತ್ತು ದಿನನಿತ್ಯದ ಖರ್ಚು ಭರಿಸಲಾಗದೆ ಜನರು ತಮ್ಮ ದೇಹದ ಅಂಗಾಂಗಗಳನ್ನೇ ಮಾರಾಟಕ್ಕೆ ಮುಂದಾಗಿದ್ದಾರೆ. ಕುಟುಂಬದ ಅಗತ್ಯಗಳನ್ನು ಪೂರೈಸಲು ಜೀವಕ್ಕೆ ಅಪಾಯ ತರುವ ನಿರ್ಧಾರಕ್ಕೂ ಕೆಲವರು ಸಿದ್ಧರಾಗಿದ್ದಾರೆ. ಈ ಪರಿಸ್ಥಿತಿ ಇದೀಗ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.
ಇರಾನ್ನಲ್ಲಿ ಈ ಬೆಳವಣಿಗೆ ತೀವ್ರಗೊಂಡಿದ್ದು, ‘ಇರಾನ್ ಇಂಟರ್ನ್ಯಾಷನಲ್’ ನಡೆಸಿದ ತನಿಖಾ ವರದಿಯಲ್ಲಿ ಆನ್ಲೈನ್ ಅಂಗಾಂಗ ಮಾರಾಟದ ಜಾಲದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಟೆಲಿಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ರಕ್ತದ ಗುಂಪು, ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅಂಗಾಂಗ ಮಾರಾಟದ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದಾರೆ.
ಮೂತ್ರಪಿಂಡ ಮಾತ್ರವಲ್ಲದೆ, ಲಿವರ್ನ ಭಾಗ, ಮೂಳೆ ಮಜ್ಜೆ, ಕಣ್ಣಿನ ಕಾರ್ನಿಯಾ ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಾಂಶಗಳನ್ನೂ ಮಾರಾಟಕ್ಕೆ ಇಡಲಾಗುತ್ತಿದೆ ಎಂದು ತನಿಖಾ ವರದಿ ತಿಳಿಸಿದೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಮತ್ತು ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಕೆಲವರು ಇಂತಹ ಅಪಾಯಕಾರಿ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ.
ನಿರಂತರ ಸಂಘರ್ಷ, ಅಂತಾರಾಷ್ಟ್ರೀಯ ನಿರ್ಬಂಧಗಳು, ಹಣದುಬ್ಬರ ಹಾಗೂ ಇರಾನಿಯನ್ ರಿಯಾಲ್ ಮೌಲ್ಯದ ಕುಸಿತದಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಿವೆ.
ಇರಾನ್ನಲ್ಲಿ ಮೂತ್ರಪಿಂಡ ದಾನಕ್ಕೆ ನಿಯಂತ್ರಿತ ಕಾನೂನು ವ್ಯವಸ್ಥೆ ಇದ್ದರೂ, ಆರ್ಥಿಕ ಒತ್ತಡದ ಲಾಭ ಪಡೆದು ಅನಧಿಕೃತ ಅಂಗಾಂಗ ವ್ಯಾಪಾರದ ಜಾಲಗಳು ಸಕ್ರಿಯವಾಗುತ್ತಿವೆ ಎಂದು ವರದಿ ಎಚ್ಚರಿಸಿದೆ. ದಲ್ಲಾಳಿಗಳು ಅಸಹಾಯಕ ಜನರಿಂದ ಕಡಿಮೆ ಬೆಲೆಗೆ ಅಂಗಾಂಗಗಳನ್ನು ಪಡೆದು, ವಿದೇಶಿ ಖರೀದಿದಾರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಶೋಷಣೆಯ ಜಾಲವೂ ಬೆಳೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.




