*ರೈಲು ಹತ್ತುವಾಗ ಆಯತಪ್ಪಿ ಬಿದ್ದ ಪ್ರಯಾಣಿಕ: ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿಸಿದ ಸ್ಟೇಷನ್ ಮಾಸ್ಟರ್*

ಪ್ರಗತಿವಾಹಿನಿ ಸುದ್ದಿ: ನೈರುತ್ಯ ರೈಲ್ವೆ, ಮೈಸೂರು ವಿಭಾಗದ ಪಾಂಡವಪುರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟೇಷನ್ ಮಾಸ್ಟರ್ ಅಭಿಜಿತ್ ಸಿಂಗ್ ಅವರು ಡಿಸೆಂಬರ್ 13 2025 ರಂದು ತಮ್ಮ ಸಮಯೋಚಿತ ಕ್ರಮ ಮತ್ತು ಕರ್ತವ್ಯನಿಷ್ಠೆಯಿಂದ ಒಬ್ಬ ಪ್ರಯಾಣಿಕರ ಅಮೂಲ್ಯ ಜೀವವನ್ನು ಉಳಿಸಿದರು.
ಪಾಂಡವಪುರ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 16219 ನಿಲುಗಡೆಯಾಗಿದ್ದ ವೇಳೆ, ಪಾಂಡವಪುರ ತಾಲ್ಲೂಕಿನ ನಿವಾಸಿಯಾದ ಶಿವರಾಜು ಕಟ್ಟೇರಿ (55 ವರ್ಷ) ಅವರು ಚಲಿಸುತ್ತಿದ್ದ ರೈಲಿಗೆ ಏರುವಾಗ ಜಾರಿ ಬಿದ್ದು ಅಪಾಯಕರ ಸ್ಥಿತಿಗೆ ಒಳಗಾದರು. ಘಟನೆ ಗಮನಿಸಿದ ಅಭಿಜಿತ್ ಸಿಂಗ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಧೈರ್ಯ ಮತ್ತು ಚುರುಕಿನಿಂದ ಪ್ರಯಾಣಿಕರನ್ನು ರಕ್ಷಿಸಿ, ಸಂಭವಿಸಬಹುದಾದ ಭಾರೀ ಅವಘಡವನ್ನು ತಪ್ಪಿಸಿದರು. ನಂತರ ಪ್ರಯಾಣಿಕರಿಗೆ ಅಗತ್ಯ ಸಹಾಯ ಒದಗಿಸಲಾಗಿದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ತಮ್ಮ ಪ್ರಾಣದ ಹಂಗು ತೊರೆದು ಪ್ರಯಾಣಿಕನ ಜೀವ ಉಳಿಸಿದ ಅಭಿಜಿತ ಸಿಂಗ್ ಅವರ ಧೈರ್ಯಶಾಲಿ ಮತ್ತು ಸಮಯೋಚಿತ ನಿರ್ಧಾರಕ್ಕೆ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ಶ್ಲಾಘಿಸಿದ್ದಾರೆ.




