ಹೃದಯಾಘಾತದಿಂದ ಪುಣೆಯಲ್ಲಿ ಸಾವು: ಬೆಳಗಾವಿಯಲ್ಲಿ ನಡೆಯಿತು ಮಂಡ್ಯ ಮೂಲದ ಮಹಿಳೆ ಅಂತ್ಯಸಂಸ್ಕಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗ ಬೆಳಗಾವಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಪುಣೆಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡ್ಯ ಜಿಲ್ಲೆಯ ಮುದ್ದೂರು ತಾಲೂಕಿನ ತೈಲೂರು ಗ್ರಾಮದ ನಿವಾಸಿ ಸೌಮ್ಯ ಟಿ.ಎ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೃತ ಮಹಿಳೆ ಪತಿ ಶರತ್ ತನ್ನ ಪತ್ನಿ ಮೃತ ದೇಹವನ್ನು ತನ್ನೂರಿಗೆ ತೆಗೆದುಕೊಂದು ಬರಲು ಮಂಡ್ಯ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಮೃತ ಸೌಮ್ಯಾಳನ್ನು ಕೊರೊನಾ ವೈರಸ್ ಟೆಸ್ಟ್ ಗೆ ಒಳಪಡಿಸದ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂ ಪತಿ ಶರತ್ ಪತ್ನಿ ಮೃತದೇಹವನ್ನು ಪುಣೆಯಿಂದ ಕರ್ನಾಟಕ ಗಡಿಯವರೆಗೆ ತೆಗೆದುಕೊಂಡು ಬಂದಿದ್ದಾರೆ.

ಗಡಿಯಲ್ಲೂ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಇದರಿಂದ ಪತಿ ಶರತ್, ಮಗಳು ಯುಕ್ತಾ ಹಾಗೂ ನಿವೃತ್ತ ಪಿಎಸ್‍ಐ ತಂದೆ ಅಪ್ಪಯ್ಯ ಆಕಡೆ ಪುನಃ ಪುಣೆಗೂ ಹೋಗಲು ಆಗದೆ ಸುಮಾರು 24 ಘಂಟೆಗಳ ಕಾಲ ರಾಜ್ಯ ಪ್ರವೇಶ ಅನುಮತಿಗಾಗಿ ಕಾದು ಕುಳಿತ್ತಿದ್ದರು. ಘಟನೆಯ ಮಾಹಿತಿ ತಿಳಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗಣ್ಣವರ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರ ಮನವೊಲಿಸಿ ಧೂದಗಂಗಾ ನದಿ ದಡದಲ್ಲಿ ಮೃತ ಸೌಮ್ಯರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button