ಪ್ರಗತಿವಾಹಿನಿ ಸುದ್ದಿ; ಮಂಡ್ಯ: ವಿ.ಸಿ ನಾಲೆಗೆ ಕಾರು ಬಿದ್ದು ಐವರು ಜಲಸಮಾಧಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲುಕಿನ ಬನಘಟ್ಟ ಬಳಿ ನಡೆದಿದೆ.
ಪಾಂಡವಪುರದಿಂದ ನಾಗಮಂಗಲಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ವಿ.ಸಿ ನಾಲೆಗೆ ಉರುಳಿದೆ. ಕಾರಿನಲ್ಲಿದ್ದ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಚಂದ್ರಪ್ಪ, ಕೃಷ್ಣಪ್ಪ, ಧನಂಜಯ, ಬಾಬು ಹಾಗೂ ಜಯಣ್ಣ ಮೃತರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಚಂದ್ರಪ್ಪ ಅವರಿಗೆ ಸೇರಿದ ಕಾರು ಇದಾಗಿದ್ದು, ರಸ್ತೆ ತಿರುವಿನಲ್ಲಿ ವೇಗವಾಗಿ ಬಂದ ಕಾರು ಸೇತುವೆಯ ಗೋಡೆಗೆ ಡಿಕಿ ಹೊಡೆದು ನಾಲೆಗೆ ಹಾರಿ ಬಿದ್ದಿದೆ.
ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿ.ಸಿ ನಾಲೆಗೆ ಕಾರು ಬಿದ್ದು ಐವರು ಜಲಸಮಾಧಿಯಾದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಾಲೆಗೆ ಬಿದ್ದ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಬೀಗರ ಊಟಕ್ಕೆ ಬಂದಿದ್ದರು. ವಾಪಾಸ್ ತೆರಳುವಾಗ ಈ ದುರಂತ ಸಂಭವಿಸಿದೆ. ಐವರೂ ಬೇರೆ ಬೇರೆ ಕಡೆಯವರು. ತಿಪಟೂರು, ಚನ್ನರಾಯಪಟ್ಟಣ , ಭದ್ರಾವತಿ, ಶಿವಮೊಗ್ಗ ಮೂಲದವರು. ಘಟನಾ ಸ್ಥಳದಲ್ಲಿ ತಡೆಗೋಡೆ ಇಲ್ಲದಿರುವುದು ಹಾಗೂ ಸೂಚನಾ ಫಲಕ ಹಾಕದಿರುವುದೇ ದುರಂತಕ್ಕೆ ಕಾರಣ. ತಡೆಗೋಡೆ ನಿರ್ಮಾಣಕ್ಕೆ ಆಗ್ರಹ ಕೇಳಿಬಂದಿದೆ. ಈ ವಿಚಾರವಾಗಿ ನಾಳೆ ಬೆಳಿಗ್ಗೆ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ