ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ.
ಫಲಿತಾಂಶ ಬಿಜೆಪಿ ಆತ್ಮಾವಲೋಕನ ಮಾಡುವಂತೆ ಮಾಡಿದೆ. ಜನರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕೇವಲ ಅನುಕಂಪದ ಮತಗಳಿಂದ ಮಂಗಲಾ ಅಂಗಡಿ ಗೆದ್ದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮತ್ತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ.
ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಿಜೆಪಿ ಶಾಸಕರೇ ಇರುವ ಬೆಳಗಾವಿ ಉತ್ತರ, ಅರಬಾವಿ, ಸವದತ್ತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು, ಅದರಲ್ಲೂ ಬೆಳಗಾವಿ ಜಿಲ್ಲೆಯ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಈ ಫಲಿತಾಂಶ. ಕೇವಲ ಹಿಂದೂ, ಮೋದಿ ಎಂದು ಹೇಳಿಕೊಳ್ಳುತ್ತ ಬಹಳಕಾಲ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಅರಿವಾಗಬೇಕಿದೆ. ಜನರ ಸಮಸ್ಯೆಗೆ ಕಿವಿಯಾಗಬೇಕಿದೆ. ಪ್ರವಾಹ, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸ್ಪಂದಿಸದಿರುವುದಕ್ಕೆ ಈ ಫಲಿತಾಂಶ ಎಚ್ಚರಿಕೆ ನೀಡಿದಂತಿದೆ.
ಕೇವಲ ಶೇ.1ರಷ್ಟು ಅಂತರ
ಕಳೆದ ಚುನಾವಣೆಯಲ್ಲಿ ಸುರೇಶ ಅಂಗಡಿ 7,56,986 ಮತ ಪಡೆದು 3,69,944 ಮತ ಪಡೆದಿದ್ದ ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ವಿರುದ್ಧ 3,87,042 ಮತಗಳ ಅಂತರದಿಂದ ಗೆದ್ದಿದ್ದರು.
ಆದರೆ ಈ ಬಾರಿ ಮಂಗಲಾ ಅಂಗಡಿ 4,40,327 ಮತ ಪಡೆದು 4,35,087 ಮತ ಪಡೆದಿರುವ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ವಿರುದ್ಧ 5240 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಂದರೆ ಸುರೇಶ ಅಂಗಡಿ ಗೆಲುವಿನ ಅಂತರದ ಕೇವಲ ಶೇ.1ರಷ್ಟು ಮಾತ್ರ ಈ ಬಾರಿಯ ಅಂತರ!
ಅಂದರೆ ಬಿಜೆಪಿ ಗೆದ್ದು ಸೋತಿರುವುದು ಸ್ಪಷ್ಟವಾಗಿದೆ. ಈಗಲೂ ಪಾಠ ಕಲಿಯದಿದ್ದರೆ ಬಿಜೆಪಿಗೆ ಮುಂದಿನ ದಿನಗಳು ಸುಲಭವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ