ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಾಗೂ ಪೊಲೀಸ್ ಗೋಲಿಬಾರ್ ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 35 ದೃಶ್ಯಗಳ ವಿಡಿಯೋ ಸ್ಯಾಕ್ಷ್ಯ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಗಲಭೆ, ಹಿಂಸಾಚಾರಕ್ಕೆ ರಾಜ್ಯ ಸರ್ಕಾರ ಹಾಗೂ ಪೊಲೀಸರೇ ನೇರ ಹೊಣೆ. ಸರ್ಕಾರ ಹಾಗೂ ಪೊಲೀಸರೇ ವ್ಯವಸ್ಥಿವಾಗಿ ಸಂಚು ರೂಪಿಸಿ ನಡೆಸಿದ ಹಿಂಸಾಚಾರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಟಿಜನ್ ಫೋರಂನಿಂದ ಜನತಾ ಆಂದೋಲನ ಮಾಡಲು ತೀರ್ಮಾನ ಮಾಡಲಾಗಿತ್ತು. ಈ ಸಂಬಂಧ ನಿವೃತ್ತ ನ್ಯಾ.ಗೋಪಾಲಗೌಡ, ಸುಗತ ಶ್ರೀನಿವಾಸ್ ಸೇರಿ 3 ಜನತಾ ತಂಡ ರಚನೆ ಮಾಡಿ ಜನತಾ ಅದಾಲತ್ ಮಾಡಲಾಗಿತ್ತು. ಗಲಭೆ ಸಂಬಂಧ ದಾಖಲಾತಿ ಸಂಗ್ರಹ ನಮ್ಮ ಬಳಿ ಇದೆ ಎಂದು 35 ದೃಶ್ಯಗಳ ವಿಡಿಯೋ ಬಿಡುಗಡೆ ಮಾಡಿದರು.
ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರೇ ಕಲ್ಲು ತೂರಾಟ ನಡೆಸಿದ್ದಾರೆ. ಬಾಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಯುವಕರನ್ನು ಎಳೆದು ತಂದು ಲಾಠಿ ಪ್ರಹಾರ ನಡೆಸಿದ್ದಾರೆ. ಜನಸಾಮಾನ್ಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಗೂಡ್ಸ್ ಟ್ರಕ್ನಲ್ಲಿ ಕಲ್ಲು ತಂದಿದ್ದರು ಎಂದು ಪೊಲೀಸರು ಕಟ್ಟುಕಥೆ ಹೇಳಿದ್ದಾರೆ. ಈ ನನ್ನ ಬಳಿಯಿರುವ ದಾಖಲೆ ತೋರಿಸ್ತಿದ್ದೇನೆ. ಇದರಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆದಿದೆ. ಆದರೆ ಮಂಗಳೂರಿನಲ್ಲಿ ಮಾತ್ರ ಇಂತಹ ಹಿಂಸಾಚಾರ ನಡೆಯಲು ಕಾರಣ ಏನು? ಗಲಭೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಹರ್ಷಾ ನಡೆಯೇ ಅನುಮಾನಾಸ್ಪದವಾಗಿದೆ. ಈ ಎಲ್ಲ ಘಟನೆಗಳಿಗೆ ಹರ್ಷ ಅವರೇ ಕಾರಣ. ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಪೊಲೀಸರ ದೌರ್ಜನ್ಯ ಮುಚ್ಚಿಕೊಳ್ಳಲು ಸರ್ಕಾರ ಅವರ ಪರ ವಹಿಸಿದೆ. ಪ್ರಕರಣವನ್ನು ಸರ್ಕಾರ ತಿರುಚಿದೆ. ಮಂಗಳೂರು ಗಲಭೆ ಕುರಿತು ಸರ್ಕಾರ ಬಿಡುಗಡೆ ಮಾಡಿದ್ದ ವಿಡಿಯೋ ಎಷ್ಟು ನಿಜ ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ ಹೆಚ್ ಡಿಕೆ, ಈಗ ಮಾತೆತ್ತಿದರೆ ಬಿಜೆಪಿ ಸರ್ಕಾರ 144 ಸೆಕ್ಷನ್ ಜಾರಿ ಮಾಡುತ್ತಿದೆ. ಬ್ರಿಟಿಷರ ಅವಧಿಯಲ್ಲೂ ಇಷ್ಟೊಂದು ದಬ್ಬಾಳಿಕೆ ಇರಲಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ