
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಭಾರಿ ಮಳೆಗೆ ಗುಡ್ಡ ಕುಸಿದ ಪರಿಣಾಮ ನಾಲ್ಕು ಮನೆಗಳು ನೆಲಸಮವಾಗಿರುವ ಘಟನೆ ಮಂಗಳೂರಿನ ಗುರುಪುರದಲ್ಲಿ ನಡೆದಿದೆ.
ಇಂದು ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದ್ದು, ಮಂಗಳೂರಿನ ಹೊರವಲಯದ ಗುರುಪುರದ ಬಂಗ್ಲೆಗುಡ್ಡ ನಾಲ್ಕು ಮನೆಗಳ ಮೇಲೆ ಕುಸಿದಿದ್ದು, ನಿವಾಸಿಗಳು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ನಿವಾಸಿಗಳನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಆದರೆ ಮಣ್ಣಿನಡಿ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದಾರೆ.
ಪೊಲೀಸರು ಹಾಗೂ ಸ್ಥಳೀಯರಿಂದ ಸಮರೋಪಾದಿಯಲ್ಲಿ ಮಕ್ಕಳ ರಕ್ಷಣೆ ಕಾರ್ಯಾಚರಣೆ ನಡೆದಿದೆ. ಆದರೆ ಮತೆ ಮತ್ತೆ ಮಣ್ಣುಕುಸಿತವಾಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ಪ್ರಸ್ತುತ ಗುಡ್ಡ ಕುಸಿತಗೊಂಡಿರುವ ಗುರುಪುರದಲ್ಲಿ ಇನ್ನೂ ನಾಲ್ಕೈದು ಮನೆಗಳ ಮೇಲೆ ಗುಡ್ಡ ಕುಸಿತವಾಗುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಲೆನಾಡು ಜನರಲ್ಲಿ ಆತಂಕ ಹೆಚ್ಚಿದೆ.