ಮಾರ್ಗರೆಟ್ ಲವರ್ ಆಫ್ ರಾಮಾಚಾರಿ; ದುರ್ಗದ ಸೆರಗಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ: ಯುವ ಪ್ರತಿಭೆ ಅಭಿಲಾಷ್ ಹಾಗೂ ಪಂಚತಂತ್ರ ಬ್ಯೂಟಿ ಸೋನಲ್ ಮೊಂಥೆರೋ ಜೋಡಿಯಾಗಿ ನಟಿಸಿರುತ್ತಿರುವ ‘ಮಾರ್ಗರೆಟ್ ಲವರ್ ಆಫ್ ರಾಮಾಚಾರಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಚಿತ್ರದುರ್ಗದ ಕಲ್ಲಿನ ಕೋಟೆಯ ಸೆರಗಿನಲ್ಲಿ ಮುಗಿದಿದೆ.
21 ದಿನಗಳ ಚಿತ್ರದುರ್ಗದ ಕೋಟೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಶೂಟಿಂಗ್ ನಡೆಸಲಾಗಿದೆ. ಚಿತ್ರತಂಡ ಹೊಸತಾದರೂ ಹಿಟ್ ಆಗುವ ಭರವಸೆಯ ಕಥಾನಕ ಹೊಂದಿರುವುದರಿಂದ ನಿರ್ಮಾಪಕಿ ವನಿತಾ ಎಚ್.ಎನ್. ನಿರೀಕ್ಷೆಗಿಂತ ಹೆಚ್ಚೇ ಬಂಡವಾಳ ಹೂಡಿದ್ದಾರೆ. ನೈಜತೆ ಬಿಂಬಿಸುವ ರೀತಿಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಎಲ್ಲವೂ ಸಾಂಗವಾಗಿ ನೆರವೇರಲು ಸ್ಥಳೀಯರು ಕೂಡ ಕೈ ಜೋಡಿಸಿದ್ದಾರೆ.
ರಂಗಭೂಮಿಯಿಂದ ನಟನೆ ಆರಂಭಿಸಿರುವ ನಾಯಕ ನಟ ಅಭಿಲಾಷ್ ಈ ಚಿತ್ರದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಗುರುದೇವ್ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅಭಿಲಾಷ್ ನಟಿಸಿದ್ದಾರೆ. ‘ನಾಗರಹಾವು’ ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿಯೂ ಇಟ್ಟಿರುವುದು ವಿಶೇಷ.
ಅಭಿಲಾಷ್ ಅವರು ರಾಮಾಚಾರಿ @ ರಾಮು ಪಾತ್ರ ನಿರ್ವಹಿಸಲಿದ್ದಾರೆ. ನಟಿ ಸೋನಲ್ ಮೊಂಥೆರೋ ಮೀರಾ ರಾಘವ್ ರಾಮ್ @ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ @ ಜಲೀಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಜಹಾಂಗೀರ್, ಸುಮನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ವನಿತಾ ಎಚ್.ಎನ್. ಹಾಗೂ ಹರೀಶ್ ‘ನಿಹಾಂತ್ ಪ್ರೊಡಕ್ಷನ್ಸ್’ ಮೂಲಕ ‘ಮಾರ್ಗರೆಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆದಷ್ಟು ಶೀಘ್ರದಲ್ಲಿ ಎರಡನೇ ಹಂತದ ಶೂಟಿಂಗ್ ಆರಂಭಿಸಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ