ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಡೆಯಲಿರುವ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಭಾನುವಾರ (ಮಾ.೮) ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಮಾ.೫) ನಡೆದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತ ವಿಚಾರಸಂಕಿರಣದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸಪ್ತಪದಿ ಸಾಮೂಹಿಕ ಕಾರ್ಯಕ್ರಮದ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ವಿಚಾರಸಂಕಿರಣವನ್ನು ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಬಹಳ ಮುತುವರ್ಜಿ ವಹಿಸಿ ಈ ಯೋಜನೆಯನ್ನು ರೂಪಿಸಿದ್ದು, ಅವರ ಆಶಯದಂತೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ ಎಂದರು.
ಏ.೨೬ ರಂದು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹಾಗೂ ಮೇ ೨೪ ರಂದು ರಾಯಬಾಗ ತಾಲ್ಲೂಕಿನ ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯಕ್ರಮದಡಿ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಮಾ.೮ ರಂದು ವಿಚಾರಸಂಕಿರಣ:
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಭಾನುವಾರ(ಮಾ.೮) ಬೆಳಿಗ್ಗೆ ೧೧ ಗಂಟೆಗೆ ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದೆ.
ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ವಿಚಾರಸಂಕಿರಣವನ್ನು ಉದ್ಘಾಟಿಸಲಿದ್ದಾರೆ.
ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಸೇರಿದಂತೆ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹುಕ್ಕೇರಿ-ಬೆಳಗಾವಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಶಾಸಕ ವಿಶ್ವನಾಥ(ಆನಂದ) ಮಾಮನಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಪ್ತಪದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವುದರಿಂದ ಇದರ ಯಶಸ್ವಿಗಾಗಿ ಎಲ್ಲರೂ ಶ್ರಮಿಸಬೇಕು.
ಮುಂಬರುವ ದಿನಗಳಲ್ಲಿ ಜನಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಸಹಾಯಕಿಯರು ವಿಚಾರಸಂಕಿರಣದಲ್ಲಿ ಭಾಗವಹಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೇ ವಿಚಾರಸಂಕಿರಣದಲ್ಲಿ ಭಾಗವಹಿಸುವ ಎಲ್ಲರಿಗೂ ಊಟ, ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.
ಮುಜರಾಯಿ ಇಲಾಖೆಯ ಸಚಿವರ ವಿಶೇಷಾಧಿಕಾರಿಗಳಾದ ವಿವೇಕ್ ಅಮೀನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಡಿ.ಎಂ.ಜಕ್ಕಪ್ಪಗೋಳ, ಸವದತ್ತಿ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಸೇರಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಪ್ತಪದಿ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನ ಹಾಗೂ ರಾಯಬಾಗ ತಾಲೂಕಿನ ಚಿಂಚಲಿಯ ಶ್ರೀ ಮಾಯಕ್ಕಾದೇವಿ ದೇವಸ್ಥಾನದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.
ಏ.೨೬ ರಂದು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹಾಗೂ ಮೇ ೨೪ ರಂದು ರಾಯಬಾಗ ತಾಲ್ಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯಕ್ರಮದಡಿ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಸರಳ ವಿವಾಹವಾದ ವರನಿಗೆ ರೂ. ೫೦೦೦ ಗಳನ್ನು ಮತ್ತು ವಧುವಿಗೆ ರೂ. ೧೦,೦೦೦ ಗಳನ್ನು ಮತ್ತು ಎರಡು ಚಿನ್ನದ ತಾಳಿಗಳನ್ನು ಹಾಗೂ ೩ ಚಿನ್ನದ ಗುಂಡುಗಳನ್ನು (ಅಂದಾಜು ೮ ಗ್ರಾಮ್ ತೂಕ ) ಒಟ್ಟು ರೂ . ೫೫,೦೦೦ ಗಳನ್ನು ದೇವಾಲಯದ ವತಿಯಿಂದ ಭರಿಸಲಾಗುತ್ತಿದೆ.
ಸಾಮೂಹಿಕ ಸರಳ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ರೂ. ೧೦, ೦೦೦ ಗಳ ನಿಶ್ಚಿತ ಠೇವಣಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ ರೂ . ೫೦, ೦೦೦ ಗಳನ್ನು ನೀಡಲಾಗುತ್ತಿದೆ.
ಸಾಮೂಹಿಕ ಸರಳ ವಿವಾಹಕ್ಕೆ ಆಗಮಿಸುವ ವಧು – ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅವಶ್ಯಕ ವ್ಯವಸ್ಥೆಗಳನ್ನು ದೇವಾಲಯದಿಂದ ಮಾಡಲಾಗುವುದು.
ಸಾಮೂಹಿಕ ವಿವಾಹದಲ್ಲಿ ಭಾಗ ವಹಿಸುವ ವಧು-ವರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಡೆದು ಅರ್ಜಿ ಫಾರ್ಮನ್ನು ಭರ್ತಿ ಮಾಡಿ ಮಾರ್ಚ್ ೨೭ ರೊಳಗಾಗಿ ಸವದತ್ತಿ ತಾಲೂಕಿನ ಯಲ್ಲಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಏಪ್ರಿಲ್ ೨೪ ರೊಳಗಾಗಿ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನದಲ್ಲಿ ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸವದತ್ತಿ ತಾಲೂಕಿನ ಯಲ್ಲಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ದೂರವಾಣಿ ಸಂಖ್ಯೆ: ೯೪೪೮೧೫೮೧೧೫/ ೯೪೮೩೨೫೨೪೮೯/ ೯೪೪೯೧೫೭೧೮೭ ಹಾಗೂ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನದ ದೂರವಾಣಿ ಸಂಖ್ಯೆ :೦೮೩೩೧-೨೩೭೨೨೦, ೦೮೩೩೫-೨೪೫೨೪೭, ೯೮೮೦೦೨೬೪೩೧ ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ