*ಮಠ-ಮಂದಿರದ ಶಾಲೆಗಳಲ್ಲಿ ತತ್ತಿ ವಿತರಣೆ ಬೇಡ: ಶ್ರೀಕಾಶಿ ಹಾಗೂ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಸರ್ಕಾರಕ್ಕೆ ಆಗ್ರಹ*
ಪ್ರಗತಿವಾಹಿನಿ ಸುದ್ದಿ: ರಾಜ್ಯದ ವೀರಶೈವ-ಲಿಂಗಾಯತ ಧರ್ಮವೂ ಸೇರಿದಂತೆ ವಿವಿಧ ಧರ್ಮ ಪೀಠಗಳು, ಮಠ-ಮಂದಿರಗಳ ವಿದ್ಯಾ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಿಂದಲೂ ಶಾಲಾ ಶಿಕ್ಷಣ ವ್ಯವಸ್ಥೆಗೆ ಕೈಜೋಡಿಸಿದ್ದು, ಪ್ರಸ್ತುತ ಈ ಮಠ-ಮಂದಿರಗಳ ಶಾಲೆಗಳಲ್ಲಿ ತತ್ತಿ ವಿತರಣೆ ಮಾಡುವುದನ್ನು ಸರಕಾರ ಕೈಬಿಡಬೇಕೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಸೂರ್ಯ ಪೀಠದ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಾರದ ಆರೂ ದಿನಗಳಂದು ತತ್ತಿ ವಿತರಿಸಲು ಆದೇಶ ಹೊರಡಿಸಿ, ಸೆಪ್ಟಂಬರ್-25 ರಂದು ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದೆಂದು ಬೆಳಗಾವಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಹೇಳಿರುವ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಧರ್ಮದ ವಿವಿಧ ಧರ್ಮ ಪೀಠಗಳು, ಮಠ-ಮಂದಿರಗಳ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳು ಮಠ-ಪೀಠಗಳ ಆವರಣದಲ್ಲಿಯೇ ನಡೆಯುತ್ತಿದ್ದು, ಅಲ್ಲಿಯ ವಿದ್ಯಾರ್ಥಿಗಳಿಗೆ ತತ್ತಿ ವಿತರಣೆ ಮಾಡುವುದು ಧರ್ಮ ಪೀಠಗಳ, ಮಠಗಳ ಹಾಗೂ ಮಂದಿರಗಳ ಧಾರ್ಮಿಕ ತತ್ವ-ಸಿದ್ಧಾಂತಗಳಿಗೆ ವ್ಯತಿರಿಕ್ತವಾಗುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯಾವುದೇ ಧಾರ್ಮಿಕ ಭಾವನಾತ್ಮಕ ಸಂಬಂಧಗಳಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ಆದೇಶಗಳನ್ನು ಹೊರಡಿಸಬೇಕು. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದಿಂದಲೂ ರಾಜ್ಯದ ವಿದ್ಯಾರ್ಥಿಗಳು ಕನ್ನಡವನ್ನು ಕಲಿತು ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾರ್ಜನೆ ಮಾಡುವಲ್ಲಿ ರಾಜ್ಯದ ವೀರಶೈವ-ಲಿಂಗಾಯತ ಸಮಾಜದ ವಿವಿಧ ಧರ್ಮ ಪೀಠಗಳು, ಮಠಗಳು ಮತ್ತು ಮಂದಿರಗಳ ವಿದ್ಯಾ ಸಂಸ್ಥೆಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಶಾಲೆಗಳನ್ನು ತೆರೆದು ಅನುಕೂಲ ಕಲ್ಪಿಸಿವೆ. ಭಕ್ತಗಣವು ಶಿಕ್ಷಣ ಸಂಸ್ಥೆಗಳನ್ನು ನಡೆಸುವಲ್ಲಿ ಧರ್ಮ ಪೀಠಗಳ ಹಾಗೂ ಮಠ-ಮಂದಿರಗಳ ಮೇಲಿನ ಅಚಲ ಭಕ್ತಿಯ ಪವಿತ್ರ ಭಾವನೆಯ ನೆಲೆಯಲ್ಲಿ ವ್ಯಾಪಕ ಸಹಾಯ ಸಹಕಾರಗಳನ್ನೂ ನೀಡಿ ಪ್ರೋತ್ಸಾಹಿಸಿವೆ. ಪ್ರಸ್ತುತ ವೀರಶೈವ-ಲಿಂಗಾಯತ ಧರ್ಮದ ಪೀಠಗಳು, ಮಠ-ಮಂದಿರಗಳ ಖಾಸಗಿ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೂ ತತ್ತಿ ವಿತರಣೆಯಾದಲ್ಲಿ ಧರ್ಮದ ತತ್ವಾಚರಣೆಯ ನೀತಿ-ನಿಲುವುಗಳಿಗೆ, ಜೊತೆಗೆ ಭಕ್ತ ಸಮೂಹದ ಭಕ್ತಿಯ ಪವಿತ್ರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದಿದ್ದಾರೆ.
ಬಾಳೆಹಣ್ಣು-ಶೇಂಗಾಚೆಕ್ಕಿ : ಈ ತತ್ತಿ ವಿತರಣೆಯ ಬದಲಾಗಿ ಅದೇ ಖರ್ಚಿನಲ್ಲಿ ವೀರಶೈವ-ಲಿಂಗಾಯತ ಧರ್ಮದ ಪೀಠಗಳು, ಮಠ-ಮಂದಿರಗಳ ಖಾಸಗಿ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ನಿತ್ಯವೂ ಬಾಳೆಹಣ್ಣು ಹಾಗೂ ಶೇಂಗಾಚೆಕ್ಕಿ ವಿತರಣೆಗೆ ಅವಕಾಶ ನೀಡಿ ಸರಕಾರ ಶೀಘ್ರವೇ ಅಧಿಕೃತ ಆದೇಶ ಹೊರಡಿಸಬೇಕೆಂದು ಕಾಶಿ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ