Kannada NewsKarnataka News

ಮತ್ತೆ ಕಲ್ಯಾಣ ಇಡಿ ಮನುಕುಲದ ಅಭಿಯಾನ

ಮತ್ತೆ ಕಲ್ಯಾಣ ಇಡಿ ಮನುಕುಲದ ಅಭಿಯಾನ-ಸಾಣೆಹಳ್ಳಿ ಶ್ರೀಗಳು

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ- 

ಇಲ್ಲಿನ ಕೆ ಪಿ ಟಿ ಸಿ ಎಲ್ ಸಮುದಾಯ ಭವನದಲ್ಲಿ ’ಮತ್ತೆ ಕಲ್ಯಾಣ’ ಕಾರ‍್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ‘ಮತ್ತೆ ಕಲ್ಯಾಣ’ ಏಕಮುಖಿ ಕಾರ್ಯಕ್ರಮಲ್ಲ. ಇಲ್ಲಿ ಪ್ರಶ್ನೆ, ಸಂವಾದ ಚರ್ಚೆಗಳಿಗೆ ಅವಕಾಶವಿದೆ. ಒಬ್ಬರು ಆಡಿದ ಮಾತುಗಳನ್ನು ಒಪ್ಪಲೇ ಬೇಕು ಎಂದೇನೂ ಇಲ್ಲ ಎಂದರು.

ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ವಾತಾವರಣ ಮತ್ತೆ ಕಲ್ಯಾಣದಿಂದ ನಿರ್ಮಾಣವಾಗಿದೆ. ಪ್ರಯೋಜನಕ್ಕೆ ಬಾರದ ಕೆಲಸ ಮಾಡಬಾರದು ಎನ್ನುವ ಮಾತಿದೆ. ಪ್ರಯೋಜನ ಎಂದರೆ ಮನೆ ಕಟ್ಟುವ, ವಾಹನ ಕೊಳ್ಳುವ, ಬಯಕೆಗಳನ್ನು ಈಡೇರಿಸಿಕೊಳ್ಳುವ ಬಹಿರ್ಮುಖ ಚಿಂತನೆಗಳೇ ಜಾಸ್ತಿ. ಮನಸ್ಸುಗಳನ್ನು ಕಟ್ಟುವ ಕ್ರಿಯೆಗೆ ಹೆಚ್ಚಿನ ಒತ್ತು ಕೊಡಬೇಕು.

ಮನಸ್ಸು ಕಟ್ಟಿದರೆ ಹೊರಗೆ ಏನಾದರೂ ಕಟ್ಟಲು ಸಾಧ್ಯ. ಟೀಕಿಸುವವರ ಕಾರಣ ಕೇಳೋಣ. ನಮ್ಮ ನಡವಳಿಕೆ ಸರಿಯಾಗಿದ್ದರೆ ಅವರಿಗೆ ತಿಳುವಳಿಕೆ ಹೇಳೋಣ; ಸರಿಯಿರದಿದ್ದರೆ ನಾವು ತಿದ್ದಿಕೊಳ್ಳೋಣ. ಶರಣ ಸಂಸ್ಕೃತಿ ಏಕಮುಖಿಯಲ್; ಬಹುಮುಖಿ. ಜಗತ್ತಿನ ಕೆಲವು ಧರ್ಮಗಳಲ್ಲಿ ಧರ್ಮಾನುಯಾಯಿಗಳು ಯಾವ ಪ್ರಶ್ನೆಗಳನ್ನೂ ಮಾಡುವಂತಿಲ್ಲ.

ಆದರೆ ಶರಣ ಧರ್ಮದಲ್ಲಿ ಪರಸ್ಪರ ವಿರೋಧದ ಮಧ್ಯೆಯೂ ಒಂದಾಗಿ ಸಾಗುವ ಪರಂಪರೆಯಿದೆ. ಇಂಥ ಶರಣ ಪರಂಪರೆಯನ್ನು ನಾವಿಂದು ಕಳೆದುಕೊಂಡಿದ್ದೇವೆ. ಮಠದ ಗುರುಗಳು ತಪ್ಪು ಮಾಡಿದಾಗ ಅವರನ್ನು ಪ್ರಶ್ನಿಸುವುದೇ ಶರಣ ಧರ್ಮ. ಭಕ್ತರು ಗುರುಗಳನ್ನು ತಂದೆ-ತಾಯಿಗಳೆಂದು ತಿಳಿದಿದ್ದಾರೆ. ಅವರೇ ದಿಕ್ಕುತಪ್ಪಿದರೆ ಮಕ್ಕಳ ಗತಿಯೇನು? ಎಂದು ವಿದ್ಯಾರ್ಥಿಯೊಬ್ಬ ಇಂದು ಪ್ರಶ್ನೆ ಕೇಳಿದ. ಇಂಥ ಪರಂಪರೆ ಮತ್ತೆ ಸಮಾಜದಲ್ಲಿ ಬರಬೇಕಿದೆ.

ಆಲೋಚನೆಗಳು ಜಂಗಮವಾಗಬೇಕು

‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದು ಹೇಳುವ ನೀವೇ ದೇವಸ್ಥಾನಗಳ ಉದ್ಘಾಟನೆಗೆ, ಕಳಶಾರೋಹಣಕ್ಕೆ, ಹೋಮ ಹವನಾದಿಗಳಿಗೆ ಹೊಗುತ್ತಿರುವುದು ಸರಿಯೇ ಎನ್ನುವುದು ಆತನ ಪ್ರಶ್ನೆಯಾಗಿತ್ತು. ಇದೇ ಪ್ರಶ್ನೆಯನ್ನು ಬೇರೆ ಧರ್ಮದಲ್ಲಿ ಮಾಡಿದ್ದರೆ ಪರಿಣಾಮವನ್ನು ಊಹಿಸುವುದೂ ಕಷ್ಟ. ಯಾರಾದರೂ ಹೇಳಿದ್ದೇ ಸತ್ಯವಲ್ಲ.

ವಿಮರ್ಶಿಸಿ ಒಪ್ಪಿಕೊಳ್ಳಬೇಕು. ಇಂದು ವಿಮರ್ಶಾತ್ಮಕ ಗುಣವನ್ನೇ ಕಳೆದುಕೊಂಡು ನಿಂತ ನೀರಾಗಿದ್ದೇವೆ. ನಿಂತ ನೀರಾಗಿ ರೋಗಗಳನ್ನು ಹರಡುವ ತಾಣವಾಗಬೇಕೇ ಹರಿವ ನೀರಾಗಿ ಜೀವಿಗಳ ಜೀವಕ್ಕೆ ಅಮೃತ ತುಂಬ ಬೇಕೇ ಎನ್ನುವುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಶರಣರ ಅಲೋಚನೆಗಳ ಹಿನ್ನೆಲೆಯಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು.

ಹರಿವ ನೀರಿನಂತೆ ಆಲೋಚನೆಗಳು ಜಂಗಮವಾಗಬೇಕು. ಜಂಗಮರೆಂದರೆ ಅರಿವು-ಆಚಾರವುಳ್ಳವರು. ‘ಹೊತ್ತು ಬಂದಂತೆ ಕೊಡೆ ಹಿಡಿಯುವ ಕೆಲಸ’ ಮಾಡಿದರೆ ಹೊಟ್ಟೆ ಹೊರೆದುಕೊಳ್ಳಬಹುದೇ ಹೊರತು ಸಾರ್ಥಕ ಜೀವನ ಸಾಗಿಸಲು ಸಾಧ್ಯವಿಲ್ಲ. ಸಂಗ್ರಹಬುದ್ಧಿ ಮನುಷ್ಯನ ದುರಾಲೋಚನೆ. ಕಾಗೆ-ಕೋಳಿಗಳು ಸೌಹಾರ್ದತೆಯ ಸಂಕೇತ.

ಮನುಕುಲದ ಅಭಿಯಾನ

ಅವುಗಳಿಗಿಂತ ನಾವು ಹೇಗೆ ಶ್ರೇಷ್ಠ ಎಂದು ಶರಣರು ಪ್ರಶ್ನಿಸುವ ಮೂಲಕ ಮನುಷ್ಯನ ಸಂಗ್ರಹ ಬುದ್ದಿಗೆ ಚಾಟಿಏಟು ನೀಡಿದ್ದಾರೆ. ಮತ್ಸರಕ್ಕೆ ಮಜ್ಜನವರೆಯುವ ಗುಣ ಹೋಗಬೇಕು. ಜನರಿಗೆ ಬಸವಣ್ಣನ ಕಂಡ ಕಲ್ಯಾಣದ ಹಂಬಲವಿದೆ. ಇದೇ ಕಾರಣಕ್ಕೆ ಈ ಅಭಿಯಾನಕ್ಕೆ ನಿರೀಕ್ಷೆಗಿಂತ ಹೆಚ್ಚು ಹೆಚ್ಚು ಜನ ಸೇರುತ್ತಿದ್ದಾರೆ, ಸಹಕರಿಸುತ್ತಿದ್ದಾರೆ.

ಇದೊಂದು ಕಾರ‍್ಯಕ್ರಮವಲ್ಲ; ಮನುಕುಲದ ಅಭಿಯಾನ. ಹಿಂಸೆ, ಭ್ರಾಷ್ಟಾಚಾರ, ಅನೀತಿ ಮುಂತಾದ ಸಾಮಾಜಿಕ ರೋಗಗಳಿಗೆ ಔಷಧಿ ವಚನ ಧರ್ಮವೊಂದೇ. ಮಕ್ಕಳು ಯಾವ ಭಯವೂ ಇಲ್ಲದಂತೆ ಪ್ರಶ್ನಿಸವರು. ಅವರಲ್ಲಿ ನಿಜಕ್ಕು ಸಮಾಜದ ಬಗ್ಗೆ ಕಳಕಳಿಯಿದೆ. ಆದರೆ ಪ್ರಶ್ನಿಸುವುದೇ ಕೆಲಸವಾಗಬಾರದು. ಕಳಕಳಿಯ ಪ್ರಶ್ನೆಗಳಿಗೆ ಮಾನ್ಯತೆ.

ನಿಮ್ಮ ಹೊಣೆಗಾರಿಕೆಯೂ ಹೆಚ್ಚಿದೆ. ವಚನಗಳನ್ನು ಓದುವ, ಓದಿಸುವ, ಅನುಷ್ಟಾನದ ಮೂಲಕ ನಿತ್ಯ ಕಲ್ಯಾಣವಾಗಬೇಕು. ನಾಗನೂರು ಶ್ರೀಗಳು ಗದಗ್, ಧಾರವಾಡ, ವಿಜಾಪುರ, ಬೆಳಗಾವಿ ನಾಲ್ಕು ಜಿಲ್ಲೆಗಳ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ನಮಗೆ ಸಹಕರಿಸಿದ್ದಾರೆ. ನಾಡಿನ ಇಂಥ ಅನೇಕ ಶ್ರೀಗಳ, ವಿಚಾರವಂತರ, ಸಹೃದಯಿಗಳ ಸಹಕಾರದಿಂದ ಮಾತ್ರ ಮತ್ತೆ ಕಲ್ಯಾಣ ಸಾಕಾರಗೊಳ್ಳಲು ಸಾಧ್ಯ ಎಂದರು.

ಸರ್ವರು ಸಮಾನರು ಎನ್ನುವ ಸಂದೇಶ

ಡಾ. ತೋಂಟದ ಶ್ರೀ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಇದೊಂದು ಜನರಲ್ಲಿ ಜಾಗೃತಿಯನ್ನುಂಟು ಮಾಡುವಂತಹ ವಿನೂತನ ಅಭಿಯಾನ. ಶರಣರ ಆಲೋಚನೆಗಳನ್ನು ಜನಮನಕ್ಕೆ ತರುವ ಪ್ರಯತ್ನ ಈ ಮೂಲಕ ನಡೆಯುತ್ತಿದೆ. ಸರ್ವರು ಸಮಾನರು ಎನ್ನುವ ಸಂದೇಶ ನೀಡಿದವರು ಶರಣರು. ಇದು ಇಂದಿಗೂ ಪ್ರಸ್ತುತವಾಗಬೇಕು ಎನ್ನುವ ಕಾರಣಕ್ಕೆ ಈ ಅಭಿಯಾನ ಎಂದರು.

ಈ ಅಭಿಯಾನಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ವಿಸ್ಮೃತಿಯಿಂದ ಹೊರಬಂದು ಮುಂದಿನ ತಲೆಮರಿಗೂ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣವನ್ನೂ ಸಾರಿದವರು ಶರಣರು. ಈ ಅಭಿಯಾನಕ್ಕೆ ವಯಸ್ಸಾದವರು ಮಾತ್ರ ಪಾಲ್ಗೊಳ್ಳುತ್ತಿಲ್ಲ; ಯುವಕರ ಜೊತೆ ಸಂವಾದ ಈ ಅಭಿಯಾನದ ವೈಶಿಷ್ಟ್ಯ. ಪ್ರಶ್ನೆಗಳನ್ನು ಕೇಳುವ ಅಧಿಕಾರವನ್ನು ಕೊಟ್ಟಿದ್ದು ೧೨ ಶತಮಾನದ ಚಳುವಳಿ.

ಲಂಚ ಪಡೆಯುವವರ ಜೊತೆ ಕೊಡುವವರು, ಇದನ್ನು ಕಂಡೂ ಪ್ರತಿಭಟಸದೇ ಇರುವವರೂ ಅಪರಾಧಿಗಳೆ. ಕಾಯಕಕ್ಕೆ ತಕ್ಕ ಪ್ರತಿಫಲ ಮಾತ್ರ ತನ್ನದು ಎನ್ನುವ ಭಾವನೆ ಜನರಲ್ಲಿ ಬಂದರೆ ಕಲ್ಯಾಣ ಸಾಧ್ಯ. ಆಹಾರ, ಧರ್ಮಗಳ ಆಯ್ಕೆ ಆಯಾ ವ್ಯಕ್ತಿಯದ್ದೇ ಹೊರತು ಸಾರ್ವಜನಿಕವಲ್ಲ ಎನ್ನುವುದನ್ನು ಸಂವಿಧಾನವೂ ಹೇಳುತ್ತದೆ.

ಈ ಅಭಿಯಾನ ಕೇವಲ ಜಿಲ್ಲಾ ಕೇಂದ್ರಗಳಲ್ಲಷ್ಟೇ ನಡೆದಿಲ್ಲ. ಪೂರ್ವಭಾವಿಯಾಗಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ನಡೆಯುವ ಮೂಲಕ ರಾಜ್ಯವ್ಯಾಪಿ ನಡೆದಿದೆ. ಶರಣರ ಆಲೋಚನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ಅನುಷ್ಟಾನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ರಾಜ್ಯಕ್ಕೆ ಭವಿಷ್ಯವಿರುವುದೇ ಶರಣರ ಚಿಂತನೆಗಳಿಂದ

ಶ್ರೀ ಶಿವಾನಂದ ಸ್ವಾಮಿಗಳು ಮಾತನಾಡಿ ಜನರಲ್ಲಿ ‘ಮತ್ತೆ ಕಲ್ಯಾಣವೆಂದರೆ ಏನು’ ಎನ್ನುವ ಪ್ರಶ್ನೆ ಮೂಡುವುದೇ ಮತ್ತೆ ಕಲ್ಯಾಣದ ಸಾರ್ಥಕತೆ. ಆಕ್ರೋಶ, ಅಸಂತೋಷ, ದ್ವೇಷಗಳ ನಡುವೆ ಮತ್ತೆ ಕಲ್ಯಾಣದ ಅವಶ್ಯಕತೆ ಇಂದು ಇದೆ. ರಾಜ್ಯಕ್ಕೆ ಭವಿಷ್ಯವಿರುವುದೇ ಶರಣರ ಚಿಂತನೆಗಳಿಂದ. ಪಾಶ್ಚಿಮಾತ್ಯ ರಾಷ್ಟ್ರಗಳೂ ಸಹ ವಚನ ಸಾಹಿತ್ಯ ಓದಬೇಕೆಂಬ ಹಂಬಲ ಇರುವಾಗ ನಮ್ಮ ಮಕ್ಕಳಿಗೆ ಯಾಕೆ ಬೇಡ. ಕರ್ನಾಟಕಕಷ್ಟೇ ಅಲ್ಲ ವಿಶ್ವಕ್ಕೇ ಮತ್ತೆ ಕಲ್ಯಾಣದ ಅವಶ್ಯಕತೆಯಿದೆ ಎಂದರು.

ಆಹಾರ ಅವರ ಇಷ್ಟ. ಬಸವಣ್ಣನ ‘ಇಂದಿಗೆ, ನಾಳಿಂಗೆ ಬೇಕೆಂದೆನೇದಡೆ ತಲೆದಂಡ’ ಎನ್ನುವ ವಚನದ ಸಾಲು ರಾಜಕಾರಣಿಗಳ ಪ್ರಮಾಣ ವಚನವಾಗಲಿ. ಭ್ರಷ್ಟಾಚಾರ ಕಾಮನ್ ಆಗಿದೆ. ಭ್ರಷ್ಟಾಚಾರಿಯನ್ನು ಬೆಂಬಲಿಸದರೆ ಮಾತ್ರ ಅವರು ಭ್ರಷ್ಟಾಚಾರಿಗಳಾಗುವರು. ಧರ್ಮ, ದೇವರ ಹೆಸರಿನಲ್ಲಿ ಲೂಟಿ ಹೊಡೆಯುವವರನ್ನು ಅಂದೇ ಶರಣರು ಖಂಡಿಸಿದ್ದರು. ಧರ್ಮವನ್ನು ನಾಟಕದ ರೂಪದಲ್ಲಿ ಪ್ರಸ್ತುತಪಡಿಸುವ ‘ರಂಗ ಜಂಗಮ’ ಪಂಡಿತಾರಾಧ್ಯ ಶ್ರೀಗಳು. ಕಾಶಿಗಿಂತಲೂ ಪವಿತ್ರ ಕ್ಷೇತ್ರ ಸಾಣೇಹಳ್ಳಿ ಎಂದರು.

ಶರಣ ಕ್ರಾಂತಿ ಭಿನ್ನ

’ಕಾಯಕ ಜೀವಿಗಳ ಕ್ರಾಂತಿ’ ಕುರಿತಂತೆ ಡಾ. ವೀರಣ್ಣ ರಾಜೂರ ಮಾತನಾಡಿ, ಇದು ಅಭೂತಪೂರ್ವ, ಅದ್ವಿತೀಯ ಕಾರ‍್ಯಕ್ರಮ. ಶರಣರ ಚಳುವಳಿಯ ಉದ್ದೇಶ ವ್ಯಕ್ತಿ ಕಲ್ಯಾಣ, ಸಮಾಜ ಕಲ್ಯಾಣ ಮತ್ತು ಲೋಕಕಲ್ಯಾಣ. ವ್ಯಕ್ತಿಯ ಅಂತರಂಗ-ಬಹಿರಂಗ ಶುದ್ಧಿಗೇ ಅವರು ಮೊದಲ ಆದ್ಯತೆ ನೀಡಿದ್ದರು. ಈವರೆಗೆ ನಡೆದ ಜಗತ್ತಿನ ಕ್ರಾಂತಿಗಳಿಗಿಂತ ಶರಣ ಕ್ರಾಂತಿ ಭಿನ್ನ.

ಅನ್ಯಾಯಗಳು ಅತಿಯಾದಾಗ ಕ್ರಾಂತಿಯಾಗುತ್ತದೆ. ದಬ್ಬಾಳಿಕೆಗೆ ಒಳಗಾದ ಜನ ಸಿಡಿದೇಳುವರು. ಅದೇ ರೀತಿ ೧೨ ನೆಯ ಶತಮಾನದಲ್ಲಿಯೂ ಆಯಿತು. ಬಸವಣ್ಣ ಆ ಕ್ರಾಂತಿಯ ಸೂತ್ರಧಾರಿಯಾದ. ಶರಣರದು ಏಕಮುಖ ಕ್ರಾಂತಿಯಲ್ಲ. ಕ್ರಾಂತಿಗೆ ಆರ್ಥಿಕ ಅಸಮಾನತೆಯೊಂದೇ ಕಾರಣವಲ್ಲ. ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ ಮುಂತಾದ ಅಸಮಾನತೆಗಳೇ ಕಾರಣ.

ಗುಡಿಯಲ್ಲಿದ್ದ ದೇವರನ್ನು ಜಾತಿ, ಗಂಡು-ಹೆಣ್ಣುಗಳೆನ್ನದೆ ಎಲ್ಲರ ಅಂಗೈಗೆ ನೀಡಿದುದು ಶರಣ ಕ್ರಾಂತಿಯ ವಿಶೇಷ. ಆ ಮೂಲಕ ಶೋಷಣೆಯ ಅವ್ಯವಸ್ಥೆಗಳನ್ನು ದೂರೀಕರಿಸುವ ಪ್ರಯತ್ನ ಮಾಡಿದರು. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವುದು ಲಿಂಗಾಯತ ಧರ್ಮದ ಬಹುದೊಡ್ಡ ಸೂತ್ರ.

ಶ್ರೇಣೀಕೃತ ವ್ಯವಸ್ಥೆಯನ್ನು ಧಿಕ್ಕರಿಸಿ ಸಮಸಮಾಜಕ್ಕೆ ಮುನ್ನುಡಿ ಬರೆದರು. ‘ಮಡದಿಯ ಪ್ರಾಣಕ್ಕೆ ಮೊಲೆ ಮುಡಿಯಿದ್ದಿತೆ?’ ಎಂದು ದೇವರ ದಾಸಿಮಯ್ಯನವರು ಪ್ರಶ್ನಿಸುವ ಮೂಲಕ ಸ್ತ್ರೀ-ಪುರುಷರ ಭೇದಭಾವವನ್ನು ತೊಲಗಿಸುವ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದರು. ಶರಣರ ಕಾಯಕ-ದಾಸೋಹದ ಪರಿಕಲ್ಪನೆ ಜಗತ್ತಿಗೆ ಕೊಟ್ಟ ದೊಡ್ಡ ಕೊಡುಗೆ. ಕಾಯಕ ಕೇವಲ ಕೆಲಸವಲ್ಲ. ‘ಕೃತ್ಯಕಾಯಕವಿಲ್ಲದವನು ಭಕ್ತನಲ್ಲ; ಸತ್ಯಶುದ್ಧವಲ್ಲದುದು ಕಾಯಕವಲ್ಲ’ ಎನ್ನುವ ಮೂಲಕ ಕಾಯಕದಲ್ಲಿ ಮೇಲಿಲ್ಲ, ಕೀಳಿಲ್ಲ, ಎಲ್ಲರೂ ಕಾಯಕ ಮಾಡಬೇಕು. ಕಾಯಕದಲ್ಲಿಯೇ ಕೈಲಾಸ ಅಡಗಿದೆ ಎಂದರು ಶರಣರು. ‘ಬೇಡುವವರಿಲ್ಲದೆ ಆನು ಬಡವನಾದೆನಯ್ಯ’ ಎನ್ನುವರು ಶರಣರು.

ಆದರೆ ಇಂದು ಬೇಡುವುದೇ ಕೆಲಸವಾಗಿದೆ. ‘ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಡಿಪ್ಪ’ ಎನ್ನುವ ಮೂಲಕ ಕಾಯಕ-ದಾಸೋಹದ ಪರಿಲ್ಪನೆಯನ್ನು ವಿವರಿಸಿದ್ದಾರೆ. ಕಲ್ಯಾಣದಲ್ಲಿ ಭಿಕ್ಷುಕರಿರಲಿಲ್ಲ. ಸಾಕ್ಷರತೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಅನುಭವ ಮಂಟಪದ ಮೂಲಕ ಶಿಕ್ಷಣ ನೀಡುವ ಕೆಲಸ ಮಾಡಿದರು.

ಈಗಿನ ಶಿಕ್ಷಣದ ಕಲ್ಪನೆ ಅನುಭವ ಮಂಟಪದಿಂದಲೇ ಬಂದಿದೆ. ಸಾಹಿತ್ಯ, ಭಾಷೆಯ ಹಿನ್ನೆಲೆಯಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟರು. ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೆ ಏರಿಸಿದವರು. ಅಂದು ಅವರು ನಡೆಸಿದ ಆ ಚಳುವಳಿ ಸೋತಿಲ್ಲ; ಗೆದ್ದಿದೆ ಎನ್ನುವುದಕ್ಕೆ ಸಾಕ್ಷಿ ಮತ್ತೆ ಕಲ್ಯಾಣ. ಇಂತಹ ‘ಮತ್ತೆ ಕಲ್ಯಾಣ’ದ ಕಾರ‍್ಯಕ್ರಮವನ್ನು ಎಲ್ಲ ಮಠಾಧೀಶರು ತಮ್ಮ ತಮ್ಮ ವ್ಯಾಪ್ತಿಯೊಳಗೆ ಮಾಡಬೇಕು ಎಂದರು.

ಇದು ಹಿಂಸಾರತಿಯ ಕಾಲ

’ವಚನಕಾರ್ತಿಯರ ಲೋಕದೃಷ್ಟಿ’ ಕುರಿತಂತೆ ಡಾ. ವಿನಯಾ ವಕ್ಕುಂದ ಮಾತನಾಡಿ ಈ ಅಭಿಯಾನ ಜೀವ ಪರ ಚಿಂತನೆಗಳಿಗೆ ಹೊಸ ಚೈತನ್ಯ ನೀಡಿದೆ. ಇದು ಹಿಂಸಾರತಿಯ ಕಾಲ. ಅಕಾರಣವಾಗಿ ದ್ವೇಷಿಸುತ್ತಿರುವ ಕಾಲ. ದೇಶದ ವಿದ್ಯಾವಂತ, ಮಹಾನ್ ನಾಗರೀಕತೆಯ ಜನರೂ ಜಾತಿಯ ಮತಾಂಧತೆಗೆ ಒಳಗಾಗಿದ್ದಾರೆ.

‘ಮನುಷ್ಯತ್ವ ಎಂದರೇನು?’ ಎನ್ನುವುದನ್ನು ಹುಡುಕಿ ಹೊರಟಾಗ ಸಿಕ್ಕ ಉತ್ತರವೇ ಮತ್ತೆ ಕಲ್ಯಾಣ. ಅಂದಿನ ಕಲ್ಯಾಣ ಕ್ರಾಂತಿ ಮೇಲ್ವರ್ಗದ ಅಹಂಕರಕ್ಕೆ ಕೊಡಲಿ ಏಟನ್ನು ನೀಡಿತು. ವಿಸ್ಮೃತಿಗೆ ಸಂದು ಹೋಗಿರುವ ಜನ ನಾವು. ಜಾತಿಯ ತಲೆ ಎಣಿಕೆಗಳು ಮಾತ್ರ ರಾಜಕೀಯಕ್ಕೆ ಬೇಕು. ಕಲ್ಯಾಣ ಸೋತರೂ ಗೆದ್ದ ಕ್ರಾಂತಿ. ಮರುಜೇವಣಿಗೆ ಕಲ್ಯಾಣ.

ಹೆಣ್ಣಿನ ಅಸ್ಮಿತೆ, ಹಾಜರಾತಿಯಿಲ್ಲದೆ ಜಗತ್ತಿನ ಯಾವ ಕ್ರಾಂತಿಯೂ ನಡೆದಿಲ್ಲ. ವಚನ ಚಳುವಳಿಯ ಸಂದರ್ಭದಲ್ಲಿ ಮಹಿಳೆಗೆ ಶ್ರೇಯಸ್ಸು ದೊರಕಿದಷ್ಟು ಇನ್ನಾವ ಚಳುವಳಿಯಲ್ಲಿಯೂ ಸಿಕ್ಕಿಲ್ಲ. ಮಹಿಳಾ ವಚನಕಾರರು ಸಾಕಷ್ಟು ವಚನಗಳನ್ನು ಬರೆದಿದ್ದರೂ ಅವು ಸಿಗದಂತೆ ಮಾಡಲಾಯಿತು. ನೂರಕ್ಕಿಂತ ಹೆಚ್ಚು ಶರಣೆಯರು ಚಳುವಳಿಯ ಜೊತೆಗಿದ್ದರು.

ಪರಂಪರೆಯನ್ನು ಮರೆತದ್ದೇ ದುರಂತಕ್ಕೆ ಕಾರಣ

ಇದರಲ್ಲಿ ಪುಣ್ಯಸ್ತ್ರೀಯರ ದೊಡ್ಡ ದಾಖಲೆಯೇ ಸಿಗುತ್ತದೆ. ಕಟ್ಟಕಡೆಯ ಜನ ನಡೆಸಿದ ಚಳುವಳಿ ಶರಣ ಚಳುವಳಿ. ಇಂದಿನ ಪ್ರಜಾಪ್ರಭುತ್ವ ಯುಗದಲ್ಲಿ ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎನ್ನುವ ಭ್ರಮೆಯಲ್ಲಿ ನಾವಿದ್ದೇವೆ. ನಮ್ಮ ಮಕ್ಕಳು ತಿನ್ನುವ ಚಾಕಲೋಟ್, ಕೇಕ್, ಬಿಸ್ಕತ್ ಮುಂತಾದ ತಿನಿಸುಗಳಲಿ ಮಾಂಸದ ಬೇರೆ ಬೇರೆ ರೂಪಗಳು ಇವೆ ಎನ್ನುವುದನ್ನು, ಸಸ್ಯಗಳಲ್ಲೂ ಜೀವ ಇದೆ ಎನ್ನುವುದನ್ನು ನಾವು ಮರೆತಿದ್ದೇವೆ.

ಆಹಾರ ಮನುಷ್ಯರ ಆಯ್ಕೆ ಯಾಗಬೇಕೇ ಹೊರತು; ಪುರೋಹಿತಷಾಹಿಯ ಹೇರಿಕೆಯಾಗಬಾರದು. ‘ನಾ ತಿರುಗುವ ರಾಟಿಯ ಕುಲ ಯಾವುದು ಹೇಳಿರಣ್ಣ?’ ಎದು ವಚನಕಾರ್ತಿಯೊಬ್ಬಳು ಪ್ರಶ್ನಿಸುವಳು. ನಾವು ಭ್ರಷ್ಟಾಚಾರಿಗಳಾಗಿದ್ದರಿಂದ ನಾವು ಆರಿಸಿ ಕಳುಹಿಸುವ ಪ್ರತನಿಧಿಗಳು ಭ್ರಾಚಾರಿಗಳಾದರು.

‘ಹೊನ್ನಿನೊಳಗೊಂದೆಳೆಯ,..’ ಎನ್ನುವ ಬಸವಣ್ಣನ ವಚನಕ್ಕೆ ಸರಿ ಸಮನಾಗಿ ಸತ್ಯಕ್ಕೆ ‘ಲಂಚವಂಚನಕ್ಕೆ ಕೈಯಾನದ ಭಾಷೆ. ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ, ಅದನ್ನು ಕೈಯೆತ್ತಿ ಮುಟ್ಟಿದೆನಾದಡೆ ನಿಮ್ಮಾಣೆ’ ಎಂದಳು. ನಾವು ಇಂಥ ಪರಂಪರೆಯಿಂದ ಕಲಿಯಬೇಕಾದುದು ಬಹಳ ಇದೆ. ಇಂಥ ಪರಂಪರೆಯನ್ನು ಮರೆತದ್ದೇ ದುರಂತಕ್ಕೆ ಕಾರಣ.

ವಚನಗಳು ಕಲ್ಪನೆಯ ಕಾವ್ಯಗಳಲ್ಲ

ಅಮುಗೆ ರಾಯಮ್ಮ ‘ಕಾಯಕ ಜೀವಿಗಳ ಕಂಡರೆ ಕತ್ತ ಹಿಡಿದು ನೂಕೆಂಬರಯ್ಯ’ ಎನ್ನುವ ಮೂಲಕ ಕಾಯಕ ಜೀವಿಗಳ ಶ್ರೇಷ್ಠತೆಯನ್ನು ಸಾರುವಳು. ವಚನಗಳು ಕಲ್ಪನೆಯ ಕಾವ್ಯಗಳಲ್ಲ. ಶರಣರು ಶರಣಾಗುವ ದಾರಿ ಇಕ್ಕಟ್ಟಿನದು. ಬಿಕ್ಕಟ್ಟಿನದು. ಶರಣ ತತ್ವದ ಮೂಲವನ್ನೇ ಶರಣೆಯರು ಪ್ರಶ್ನೆ ಮಾಡುವಷ್ಟ ಪ್ರಾಜ್ಞರಾಗಿದ್ದರು. ಪ್ರಶ್ನೆ ಮಾಡುವ ಅಧಿಕಾರ ಅಲ್ಲಿ ಇತ್ತು.

ಅದು ಪ್ರಜಾಪ್ರಭುತ್ವದ ನಿಜ ಸಾಕಾರ ರೂಪವಾಗಿತ್ತು. ಇಂದು ಪ್ರಜಾಪ್ರಭುತ್ವ ಗೆದ್ದು ಸೋತಿದ್ದರೆ; ಅಂದು ಸೋತು ಗೆದ್ದಿದೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವ ಬಸವಣ್ಣನವರ ಮಾತನನ್ನೂ ವಚನಕಾರ್ತಿಯರು ಪ್ರಶ್ನಿಸುತ್ತಾರೆ. ಕನ್ಯೆ, ಪತಿವ್ರತೆ ಎನ್ನುವ ಶಬ್ದಗಳಿಗೆ ಪುಲ್ಲಿಂಗ ವಾಚಕ ಶಬ್ದಗಳೇ ಇಲ್ಲದಿರುವುದು ಪುರುಷ ಶ್ರೇಷ್ಠತೆಯ ಅಹಂಕಾರವನ್ನು ತೋರಿಸುತ್ತದೆ.

ಆತ್ಮ ಘನತೆಯನ್ನು ತೋರಿದಾತ ಜೇಡರ ದಾಸಿಮಯ್ಯ. ಯಾರನ್ನಾದರೂ ಪ್ರಶ್ನಿಸುವ ಹಕ್ಕು ಹೆಣ್ಣಿಗೂ ಇದೆ ಎಂದು ತೋರಿಸಿಕೊಟ್ಟದ್ದು ಶರಣರ ಚಳುವಳಿ. ‘ಎನ್ನ ದೇಹವೇ ನೀನಾದ ಬಳಿಕ ನಿನ್ನನೆಂತು ಪೂಜಿಸಲಿ’ ಎನ್ನುವ ಮೂಲಕ ಅಕ್ಕ ಹೆಣ್ಣಿನ ದೇಹ ತಾಜ್ಯವಲ್ಲ ಎಂದು ಸಾರುತ್ತಾಳೆ. ಅಂಬಿಗರ ಚೌಡಯ್ಯನಂತೆ ಅಮುಗೆ ರಾಯಮ್ಮನೂ ಖಂಡತುಂಡವಾಗಿ ಹೇಳುತ್ತಾಳೆ.

ಶರಣರ ಚಿಂತನೆಯಿಂದ ಬಹಳ ದೂರ ಬಂದಿದ್ದೇವೆ. ಜನರು ಶರಣ ಚಿಂತನೆಗಳಿಗೆ ಮುಕ್ತವಾಗಿ ತೆರೆದುಕೊಳ್ಳದಿದ್ದರೆ ಮತ್ತೆ ಕಲ್ಯಾಣ ಒಂದು ಕಾರ್ಯಕ್ರಮವಾಗುತ್ತದೆ. ವಚನಗಳ ಓದು; ಪರಂಪರೆಗಳ ಮರುಜೇವಣಿಗೆ. ಜಾತಿಯ ಭೂತದಿಂದ ಹೊರಬರಲು ಪ್ರಯತ್ನಿಸುತ್ತಿರುವ ‘ಮತ್ತೆ ಕಲ್ಯಾಣ’ಕ್ಕೆ ಜಯವಾಗಲಿ ಎಂದರು.

 

ವೇದಿಕೆಯ ಮೇಲೆ ಶಿವಾನಂದ ಸ್ವಾಮಿಜಿ, ಮುರುಘೇಂದ್ರ ಸ್ವಾಮಿಜಿ, ಮಡಿವಾಳ ರಾಜಯೋಗೀಂದ್ರ ಸ್ವಾಮಿಜಿ, ಪ್ರಭುಚನ್ನಬಸವ ಸ್ವಾಮೀಜಿ, ಸಂಪಾದನಾ ಸ್ವಾಮಿಜಿ, ಶಿವಬಸವ ಸ್ವಾಮಿಜಿ, ಬಸವಸಿದ್ಧಲಿಂಗ ಸ್ವಾಮೀಜಿ, ಡಾ. ಸಾವಳಗೀಶ್ವರ ದೇವರು, ಮಹಾಂತದೇವರು, ಶಿವಮೂರ್ತಿ ದೇವರು, ಗುರುದೇವ ದೇವರು, ವಿಜಯಮಹಂತ ದೇವರು ಮುಂತಾದ ಸ್ವಾಮೀಜಿಗಳು ಇದ್ದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗಂಗಪ್ಪ ಮುದ್ದಪ್ಪ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶಂಕರ ಗುಡಾಸ್ ಸ್ವಾಗತಿಸಿದರೆ, ಬಸವರಾಜ ರೊಟ್ಟಿ ವಂದಿಸಿದರು. ಅಶೋಕ ಮಳಗಲಿ ನಿರ್ವಹಿಸಿದರು.

ಪಿ ಎಂ ಗಿರಿರಾಜು ಸಂಪಾದಿಸಿದ ‘ಜೇಡರ ದಾಸಿಮಯ್ಯ ದೇವ’ ಮತ್ತು ವೀ ಗ ಶೀಲವಂತರು ಬರೆದ ‘ಲಿಂಗನೆಡೆಗೆ ಅಂಗನ ಯಾತ್ರೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ‍್ಯಕ್ರಮದ ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ’ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶಗೊಂಡಿತು. ನಾಟಕ ಮುಗಿದ ಮೇಲೆ ಪ್ರೇಕ್ಷಕರು ನಾಟಕದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು.

ಮಹಂತ ಭವನದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ಧ ಚಿತ್ರಗಳನ್ನೊಳಗೊಂಡ ವಿಶೆಷ ವಾಹನಗಳೊಂದಿಗೆ ಕೆ ಪಿ ಟಿ ಸಿ ಎಲ್ ಸಮುದಾಯ ಭವನಕ್ಕೆ ಬಂದು ತಲುಪಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ

ಇಲ್ಲಿನ ಎಸ್ ಜಿ ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾಗೃಹದಲ್ಲಿ ’ಮತ್ತೆ ಕಲ್ಯಾಣ’ ಕಾರ‍್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ‍್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ಮನುಷ್ಯ ಸ್ಥಾವರವಾಗದೆ ಜಂಗಮಶೀಲನಾಗಬೇಕು.

ಇಂದಿನ ಶಿಕ್ಷಣ ನಾಗರೀಕತೆಯನ್ನು ಕಲಿಸುತ್ತಿದೆಯೇ ಹೊರತು ಸಂಸ್ಕತಿಯನ್ನಲ್ಲ. ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಬಾಹ್ಯ ಬದುಕಿನ ಜೊತೆ ಅಂತರಂಗ ಬದುಕೂ ಬಹುಮುಖ್ಯ. ಬಾಹ್ಯ ಬುದುಕಿಗಿಂತ ಅಂತರಂಗದ ಬದುಕಿಗೆ ಹೆಚ್ಚು ಬೆಲೆಕೊಡಬೇಕು. ನಾವು ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು ಸಕಾರಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕು.

ಶರಣರ ದೃಷ್ಟಿಯಲ್ಲಿ ಶೃಂಗಾರದ ಅರ್ಥವೇ ಬೇರೆ; ಸಾಮಾನ್ಯರ ಅರ್ಥದಲ್ಲಿ ಶೃಂಗಾರದ ಅರ್ಥವೇ ಬೇರೆ. ಶರಣರು ಕಣ್ಣುಗಳಿಗೆ ಕರುಣೆ, ತುಟಿಗೆ ಸತ್ಯ, ಕೈಗೆ ದಾಸೋಹ, ಹೃದಯಕ್ಕೆ ಪ್ರೀತಿಯಂಥ ಸೌಂದರ್ಯವರ್ಧಕಗಳನ್ನು ಹಚ್ಚುಬೇಕು ಎನ್ನುವರು. ಬಾಹ್ಯ ಸೌಂದರ್ಯ ಕ್ಷಣಿಕ, ಅಂತರಂಗದ ಸೌಂದರ್ಯ ಶಾಶ್ವತ.

ಸಾಹಿತ್ಯವನ್ನು ಪ್ರತಿದಿನ ಓದಬೇಕು

ವಿದ್ಯಾರ್ಥಿಗಳು ಅಂತರಂಗ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಟ್ಟು ಅರಿವಿನ ಬೆಳಕನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಬದುಕಿಗೆ ಬೇಕಾದ ವಚನ ಸಾಹಿತ್ಯವನ್ನು ಪ್ರತಿದಿನ ಓದಬೇಕು. ಇದರಿಂದ ಒಳಗಿನ ಕಲ್ಯಾಣ ಮಾಡಿಕೊಳ್ಳಲು ಸಾಧ್ಯ. ಶರಣರು ಹೊನ್ನು, ಹೆಣ್ಣು, ಮಣ್ಣು ಮಾಯೆಯಲ್ಲ.

ಮನದ ಮುಂದಣ ಆಸೆಯೇ ಮಾಯೆ ಎಂದು ಹೇಳಿದರು. ಆಸೆಯನ್ನು ತ್ಯಜಿಸುವ ಮಾರ್ಗವೇ ಸಜ್ಜನರ ಸಂಗ, ವಚನಗಳ ಅಧ್ಯಯನ. ಅನುಭವ ಮಂಟಪ ಶರಣರು ಬದುಕಿನ ಸತ್ಯಗಳನ್ನು ಕಂಡುಕೊಳ್ಳುವ ತಾಣ. ಸತ್ಯಕ್ಕ ಬೀದಿಯಲ್ಲಿ ಕಸಗುಡಿಸುವಾಗ ‘ಹೊನ್ನು, ವಸ್ತ್ರ ಬಿದ್ದಿದ್ದರೆ ಅದನ್ನು ಕೈಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ’ ಎಂದು ಪ್ರಮಾಣ ಮಾಡುತ್ತಾಳೆ.

ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ವಚನ ಸಾಹಿತ್ಯದ ನೆಲೆಯಲ್ಲಿ ಕಟ್ಟಿಕೊಳ್ಳಬೇಕು. ಆ ಕಾರಣಕ್ಕಾಗಿಯೇ ಮತ್ತೆ ಕಲ್ಯಾಣದ ಮೂಲಕ ಸಂವಾದ ಏರ್ಪಡಿಸಿರುವುದು. ಸಮಾಜದಲ್ಲಿ ನಿಷ್ಠೆ ಮತ್ತು ನಿಷ್ಠುರತೆ ಬಹಳ ಮುಖ್ಯ. ನಿಷ್ಠ್ಠುರತೆಯಿದ್ದರೆ ಎಂತಹ ಸಮಸ್ಯೆಗಳನ್ನೂ ಎದುರಿಸಬಹುದು.

ಆಸೆ ತಪ್ಪಲ್ಲ. ದುರಾಸೆ ತಪ್ಪು. ಇಂದಿನ ವಿಜ್ಞಾನ ಯುಗದಲ್ಲಿ ಒತ್ತಡಗಳಿವೆ. ಈ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ವಚನಗಳು ಸಹಕಾರಿ. ವಿಜ್ಞಾನಯುಗದಲ್ಲಿಯೂ ವಚನಗಳು ನಮ್ಮ ಬದುಕನ್ನು ಗಟ್ಟಿಗೊಳಿಸುತ್ತವೆ. ಬಸವಣ್ಣನವರನ್ನು ಸ್ಥಾವರ ಮಾಡಿಕೊಳ್ಳುವುದರ ಬದಲು ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ನಮ್ಮೊಳಗಿರುವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ ಎನ್ನುವ ಮೂಲಕ ಶರಣರು ಸ್ತ್ರೀಯರೂ ಪುರುಷ್ಟೇ ಸಮಾನರು ಎಂದಿದ್ದಾರೆ. ಅನುಭವ ಇಂದ್ರಿಯಜನ್ಯವಾದುದು ಅನುಭಾವ ಮೂಕ ಕಾಣುವ ಕನಸಿನಂತೆ. ಅದನ್ನು ಹೇಳಲು ಬರುವುದಿಲ್ಲ. ಲಿಂಗದೀಕ್ಷೆಗೆ ಜಾತಿ ಮುಖ್ಯವಲ್ಲ; ನೀತಿ ಮುಖ್ಯ. ಮನುಷ್ಯ ತನ್ನ ವಿಕಾರಗಳನ್ನು ಕಳೆದು ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡುವ ಪ್ರಯತ್ನ ಮತ್ತೆ ಕಲ್ಯಾಣ ಮೂಲಕ ಆಗ್ತಾ ಇದೆ ಎಂದರು.

ಒಳಗಿನ ಜಗತ್ತನ್ನು ತಿಳಿಯುವುದು ಆಧ್ಯಾತ್ಮ

ಡಾ. ತೋಂಟದ ಶ್ರೀ ಸಿದ್ಧರಾಮ ಸ್ವಾಮೀಜಿ ಮಾತನಾಡಿ ಹೊರಗಿನ ಜಗತ್ತನ್ನು ತಿಳಿದುಕೊಳ್ಳುವುದು ವಿಜ್ಞಾನ, ಒಳಗಿನ ಜಗತ್ತನ್ನು ತಿಳಿಯುವುದು ಆಧ್ಯಾತ್ಮ. ವಿಜ್ಞಾನ ಅಧ್ಯಾತ್ಮ ಬೇರೆ ಬೇರೆ ಅಲ್ಲ. ಮನುಷ್ಯನ ಉನ್ನತಿಗೆ ಎರಡರ ಸಮನ್ವಯ ಅತ್ಯಗತ್ಯ. ಸಮನ್ವಯಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ನಮ್ಮ ಗುಣಗಳನ್ನು ಲಿಂಗದ ಗುಣಗಳನ್ನಾಗಿ, ನಡೆ-ನುಡಿಗಳನ್ನು ಶುದ್ಧವಾಗಿಸಿಕೊಳ್ಳುವುದೇ ಆಧ್ಯಾತ್ಮ.

ದೇಹ ಬೇರೆ, ಆತ್ಮ ಬೇರೆ ದೇಹದೊಳಗೆ ಆತ್ಮವಿದೆ ಎಂದು ಅರಿಯುವುದೇ ಆಧ್ಯಾತ್ಮ. ಇಂದು ಮನುಷ್ಯ ತಂತ್ರಜ್ಞಾನದ ಮೂಲಕ ಅನ್ಯಗ್ರಹಳತ್ತಲೂ ಪ್ರಾಯಾಣಿಸುತ್ತಿದ್ದಾನೆ. ಆದರೆ ತನ್ನ ಪಕ್ಕದ ಮನೆಯವರನ್ನು ಅರಿತುಕೊಳ್ಳುವಲ್ಲಿ ವಿಫಲನಾಗಿದ್ದಾನೆ.

ಇದೇ ರೀತಿ ವ್ಯಕ್ತಿ ಬಾಹ್ಯವನ್ನು ಚೆನ್ನಾಗಿ ಅರಿತಿದ್ದಾನೆ ಆದರೆ ಅಂತರಂಗವನ್ನು ಅರಿಯುವಲ್ಲಿ ವಿಫಲನಾಗಿದ್ದಾನೆ. ಅಂತರಂಗವನ್ನು ಅರಿಯಲು ವಚನಕಾರರ ಬದುಕು-ಬರಹಗಳು ಎಲ್ಲರಿಗೂ ಮಾರ್ಗ ತೋರಿಸಬಲ್ಲವು ಎಂದರು.

ಸಂವಾದಕ ಡಾ. ಅವಿನಾಶ ಕವಿ ಉತ್ತರಿಸುತ್ತ ಅಂತರಂಗ ಎಂದರೆ ಅಂತಃಕರಣ. ಮಾತನಾಡುವುದು ಸುಲಭ; ಆಚರಣೆ ಕಷ್ಟ. ಕನ್ನಡಿಯಲ್ಲಿ ಬಾಹ್ಯವನ್ನು ನೋಡಿಕೊಳ್ಳುವಂತೆ ಇಷ್ಟಲಿಂಗದ ಮೂಲಕ ಅಂತರಂಗವನ್ನು ನೋಡಿಕೊಳ್ಳಬೇಕು. ಅಂತರಂಗ ಶುದ್ಧಿ ನಿರಂತರ ಪ್ರಕ್ರಿಯೆ. ನಾವು ನೋಡುವ ದೃಷ್ಟಿಕೋನ ಮುಖ್ಯವೇ ಹೊರತು ಸೃಷ್ಟಿಯಲ್ಲ.

ನೋಟ ಸಕಾರಾತ್ಮಕವಾಗಿರಬೇಕು

ನೋಟ ಸಕಾರಾತ್ಮಕವಾಗಿರಬೇಕು. ಇಂದು ನಮ್ಮ ಬದುಕು ಅಸಹಜತೆಯಿಂದ ಕೂಡಿದೆ. ಇಂದಿನ ಶಿಕ್ಷಣ ಜ್ಞಾನ, ಮಾಹಿತಿ, ಉದ್ಯೋಗ ಕೊಡಬಲ್ಲದೇ ಹೊರತು; ವಿವೇಕವನ್ನು ಕೊಡುತ್ತಿಲ್ಲ. ಇದು ಅತ್ಯಂತ ವಿಷಾದದ ಸಂಗತಿ. ಆಲಸ್ಯದಿಂದ ಅಜ್ಞಾನ, ಅಜ್ಞಾನದಿಂದ ಮೈಮರೆವು ಉಂಟಾಗುತ್ತದೆ. ಶರಣರ ವಚನಗಳು ಸದ್ಭುದ್ದಿಯನ್ನು ಬೆಳೆಸಿಕೊಳ್ಳಲು ಮೆಟ್ಟಿಲುಗಳಿದ್ದಂತೆ.

ಒಣಗಿದ ಮರಕ್ಕೆ ಯಾರೂ ಕಲ್ಲು ಹೊಡೆಯುವುದಿಲ್ಲ; ರಸಭರಿತವಾಗಿರುವ ಮರಕ್ಕೇ ಕಲ್ಲು ಹೊಡೆಯುವುದು. ಅದೇರೀತಿ ಸತ್ಯದ ದಾರಿಯಲ್ಲಿ ನಡೆಯುವ ಒಳ್ಳೆಯವರಿಗೇ ಕಷ್ಟಗಳು ಬರುವುದು. ಲಿಂಗಾಯತ ಧರ್ಮದಲ್ಲಿ ಪ್ರಶ್ನೆ ಮಾಡುವ ಸ್ವತಂತ್ರ್ಯವಿದೆ. ಇದು ಇನ್ಯಾವ ಧರ್ಮದಲ್ಲಿಯೂ ಕಾಣಲು ಸಾಧ್ಯವಿಲ್ಲ.

ಬಸವಣ್ಣನವರ ವಿಚಾರಗಳನ್ನು ಇಡೀ ಜಗತ್ತು ಒಪ್ಪಿಕೊಡು ಮಾನ್ಯತೆ ನೀಡಿದೆ. ಅನುಭವ ಲೌಕಿಕ ಜಗತ್ತಿಗೆ ಸಂಬಂಧಿಸಿದರೆ ಅನುಭಾವ ಅಲೌಕಿಕಕ್ಕೆ ಸಂಬಂಧಿಸಿದ್ದು. ಶರಣರು ಅನುಭವ, ಅನುಭವಗಳೆರಡಕ್ಕೂ ಒತ್ತು ಕೊಟ್ಟರು. ಪೋಷಕರು, ಶಿಕ್ಷಕರು ಮಕ್ಕಳಿಗೆ ವಚನ ಸಂಸ್ಕಾರದ ಬೀಜಗಳನ್ನು ಬಿತ್ತಬೇಕು.

ಸಂವಾದಕ ಡಾ. ವ್ಹಿ ಎಸ್ ಮಾಳಿ ಉತ್ತರಿಸುತ್ತ ಪ್ರತಿಯೊಬ್ಬ ಶರಣರೂ ಒಂದೊಂದು ಅರಿವಿನ ದಾರಿ ತೋರಿದ್ದಾರೆ. ಬಹುತ್ವವೇ ಶರಣ ಧರ್ಮದ ಶಕ್ತಿ. ಅನುಭವ ಮಂಟಪ ಪ್ರಶ್ನೆ ಕೇಳುವ ಸ್ಥಳ. ಇಂಥ ವೇದಿಕೆ ಇನ್ನೊಂದು ಧರ‍್ಮದಲ್ಲಿ ಇಲ್ಲ. ಶರಣರಿಗೆ ಅರಿವೇ ಗುರು. ಅನುಭಾವ ಮತ್ತು ಅನುಭವ ನಮ್ಮೊಳಗೆ ಇರುವಂಥವು. ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುವ ಪ್ರಜೆ ಬಂದರೆ ಅದುವೇ ನಿಜವಾದ ಬಸವ ಪ್ರಜ್ಞೆ, ಅದೇ ಮತ್ತೆ ಕಲ್ಯಾಣ ಎಂದರು.

ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
ನಮ್ಮಲ್ಲಿರುವ ಸ್ವಾಮೀಜಿಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ‘ಮತ್ತೆ ಕಲ್ಯಾಣ’ದ ಮೂಲಕ ಸಾಧ್ಯವೇ?

ಅಂತರಂಗ ಶುದ್ಧಿಗೆ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸವೇನು?

ಆಸೆಯನ್ನು ನಿಗ್ರಹಿಸಲು ವಿದ್ಯಾರ್ಥಿಗಳಿಗಿರುವ ಮಾರ್ಗಗಳಾವವು?

ಆಧ್ಯಾತಿಕತೆಯನ್ನು ವಿದ್ಯಾರ್ಥಿ-ಶಿಕ್ಷಕರಲ್ಲಿ ಹೇಗೆ ಬೆಳೆಸುವುದು?

ಲಿಂಗಾಯತ ಧರ್ಮದ ಧರ್ಮಗುರು ಬಸವಣ್ಣನವರು ಎಂದು ಹೇಳಬೇಕೋ ಹೇಳಬಾರದೋ?

ಲಿಂಗಾಯತ ಹೋರಾಟಗಳು ಅನೇಕ ರೀತಿಯಲ್ಲಿ ಆದವು. ಆ ಹೋರಾಟದಲ್ಲಿ ತಾವು ಯಾಕೆ ಭಾಗವಹಿಸುತ್ತಿಲ್ಲ?

ಬಸವ ಮಂಟಪ ಬೇಕಿಲ್ಲ ಎಂದು ತಾವು ಹೇಳಿಕೆ ನೀಡಿದ್ದೀರೆಂದು ಪತ್ರಿಕೆಗಳಲ್ಲಿ ನೋಡಿದೆ. ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿ.

ಬಸವಣ್ಣನವರನ್ನು ಜಾತಿಗೆ ಯಾಕೆ ಸೀಮಿತಗೊಳಿಸಿದ್ದಾರೆ?

ಸಕಲ ಜೀವಾತ್ಮರಿಗೆ ಲೇಸಾಗಬೇಕಾದರೆ ವಿದ್ಯಾರ್ಥಿಗಳಿಗೆ ಯಾವ ಪ್ರಜ್ಞೆ ಇರಬೇಕು?

ರಾಷ್ಟ ದೊಡ್ಡದೋ ಧರ್ಮ ದೊಡ್ಡದೋ?

ಮತ್ತೆ ಕಲ್ಯಾಣದ ಮೂಲಕ ಆಧುನಿಕ ಮಹಿಳೆಯರಿಗೆ ಯಾವ ಕೊಡುಗೆ ನೀಡುವಿರಿ?

ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕಾದರೆ ಸೂಕ್ತವಾದ ವೇದಿಕೆ ಬೇಕು. ಅಂತಹ ಸೂಕ್ತ ವೇದಿಕೆ ಯಾವುದು?

ಶರಣರ ದೃಷ್ಟಿಯಲ್ಲಿ ಅನುಭಾವ ಮತ್ತು ಅನುಭವಕ್ಕಿರುವ ವ್ಯತ್ಯಾಸವೇನು?

ತಂತ್ರಜ್ಞಾನದಿಂದ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪರಿಹಾರವೇನು?

ಸುಸಂಸ್ಕೃತ ಜೀವನಕ್ಕೆ ಆಧ್ಯಾತ್ಮಿಕ ಬೇಕು. ಸಾಧನೆಗೆ ತಂತ್ರಜ್ಞಾನಬೇಕು. ಇವೆರಡರಲ್ಲಿ ಯಾವುದನ್ನು ಅನ್ವಯಿಸಿಕೊಳ್ಳಬೇಕು?

ವಿಭೂತಿ ವ್ಯಕ್ತಿತ್ವಕ್ಕೆ ವಿಕಾಸಕ್ಕೆ ಹೇಗೆ ಸಹಕಾರಿಯಾಗಿದೆ?

ಲಿಂಗಾಯತ ಧರ್ಮದ ಮುಂದಿನ ಹೋರಾಟದ ರೂಪರೇಷೆಗಳೇನು?

ಸ್ವಾಮಿಗಳೇ ಲಿಂಗದೀಕ್ಷೆ ನೀಡುವಾಗ ಜಾತಿ ನೋಡುವರು. ಇಂಥ ತಾರತಮ್ಯವೇಕೆ?

ಗದ್ದುಗೆ ಪೂಜೆ ಎಷ್ಟು ಸರಿ?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button