
ಪ್ರಗತಿವಾಹಿನಿ ಸುದ್ದಿ: ಕನ್ನಡ ನಟರೊಬ್ಬರು ಕಂಠಪುರ್ತಿ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ನಿಂತಿದ್ದ ಹಲವು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಬೆಂಗಳೂರು ನಗರದ ದೊಮ್ಮಲೂರಿನ ಸಿಗ್ನಲ್ ಬಳಿ ಘಟನೆ ನಡೆದಿದೆ. ನಟ ಮಯೂರ್ ಪಟೇಲ್ ಎಂಬುವವರು ನಿನ್ನೆ ರಾತ್ರಿ ಕಂಠ ಪೂರ್ತಿ ಕುಡಿದು ತಮ್ಮ ಫಾರ್ಚೂನರ್ ಕಾರನ್ನು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಮೂರು ಕಾರುಗಳು ಜಖಂಗೊಂಡಿವೆ.
ಘಟನೆಯ ನಂತರ ಸ್ಥಳದಲ್ಲಿದ್ದ ಕಾರು ಚಾಲಕರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಈ ಸಂಬಂಧ ಕಾರು ಮಾಲೀಕ ಶ್ರೀನಿವಾಸ್ ಅವರು ದೂರು ದಾಖಲಿಸಿದ್ದು ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.




