Latest

ಬೇಡ್ತಿ, ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಮಂಗಳವಾರ ಬೃಹತ್ ಜನಜಾಗೃತಿ ಸಭೆ; ಸ್ವರ್ಣವಲ್ಲೀ ಶ್ರೀ ಸಾನ್ನಿಧ್ಯ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಬೇಡ್ತಿ -ವರದಾ -ಧರ್ಮಾ ನದಿ ಜೋಡಣೆ ಯೋಜನೆ ಜಾರಿಗೊಳಿಸುವುದನ್ನು ವಿರೋಧಿಸಿ ಮಂಗಳವಾರ ಯಲ್ಲಾಪುರ ತಾಲೂಕು ಮಂಚಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

*ಬೇಡ್ತಿ & ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, *ಮಠದೇವಳ ಈ ಸಭೆ ಆಯೋಜಿಸಿದೆ.

ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕದ ಹಲವು ಪ್ರದೇಶಗಳಿಗೆ ನೀರಾವರಿ ಸೌಕರ್ಯ ಒದಗಿಸಲು ಇದೀಗ ಬೇಡ್ತಿ-ವರದಾ-ಧರ್ಮಾ ನದಿ ಜೋಡಣೆ ಯೋಜನೆ ಪ್ರಾರಂಭಿಸುವ ಪ್ರಯತ್ನದಲ್ಲಿ ಇದೆ. ಈ ಯೋಜನೆಯ ಪ್ರಮುಖ ಅಂಶಗಳು ಹೀಗಿವೆ:

1) ಶಿರಸಿ ತಾಲೂಕಿನ ಸಾಲ್ಕಣಿ-ವಾನಳ್ಳಿ ನಡುವೆ ಇರುವ ಶಿರ್ಲೇಬೈಲು ಹಳ್ಳಿಯಲ್ಲಿ ಪಟ್ಣದಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ಸಹಸ್ರಲಿಂಗದ ಆಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು.

2) ಶಿರಸಿ ತಾಲೂಕಿನ ಸಹಸ್ರಲಿಂಗದ ಮೇಲ್ಭಾಗದಲ್ಲಿ ಶಾಲ್ಮಲಾ ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ವರದಾ ನದಿಗೆ ನೀರನ್ನು ಪಂಪ್ ಮಾಡುವುದು.

3) ಯಲ್ಲಾಪುರ ತಾಲೂಕಿನ ಬೇಡ್ತಿ ಸೇತುವೆಯ ಕೆಳಭಾಗದಲ್ಲಿ ಸುರಮನೆ ಹಳ್ಳಿಯಲ್ಲಿ ಬೇಡ್ತಿ ನದಿಗೆ ಆಣೆಕಟ್ಟು ನಿರ್ಮಿಸಿ ಅಲ್ಲಿಂದ ಮುಂಡಗೋಡು ತಾಲೂಕಿನ ಮಳಗಿ ಸಮೀಪದ ಧರ್ಮಾ ಆಣೆಕಟ್ಟಿಗೆ ನೀರನ್ನು ಪಂಪ್ ಮಾಡುವುದು.

ಹೀಗೆ ನೀರನ್ನು ಪಂಪ್ ಮಾಡುವುದಕ್ಕೆ ಅಜಮಾಸು 399 ಮೆಗಾವ್ಯಾಟ್ ವಿದ್ಯುತ್ ಅಗತ್ಯ ಎಂದು ಅಂದಾಜು ಮಾಡಲಾಗಿದೆ.

ಈ ಮೂರು ಆಣೆಕಟ್ಟುಗಳಿಂದ ಅನುಕ್ರಮವಾಗಿ 6.5 ಕಿಮಿ, 6.7 ಕಿಮಿ ಮತ್ತು 4.23 ಕಿಮಿ ಉದ್ದದ ಸುರಂಗ ನಿರ್ಮಾಣ ಮಾಡಲಾಗುತ್ತದೆ. ಒಟ್ಟೂ 52.40 ಕೋಟಿ ಘನ ಮೀಟರ್ ನೀರನ್ನು ಸಂಗ್ರಹಿಸಿ ಪಂಪ್ ಮಾಡಲಾಗುತ್ತದೆ ಹಾಗೂ ಕಲ್ಯಾಣ ಕರ್ನಾಟಕ ಪ್ರಾಂತ್ಯದ ತುಂಗಭದ್ರಾ ಎಡದಂಡೆ ಪ್ರದೇಶದ 1,06,220 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸಲಾಗುತ್ತದೆ ಎಂದು ತೋರಿಸಲಾಗಿದೆ.

ಈ ವರದಿಯಲ್ಲಿ ಯೋಜನೆಯ ಪೂರ್ವದಲ್ಲಿ ಕಾನೂನಾತ್ಮಕವಾಗಿ ಮಾಡಲೇಬೇಕಾಗಿದ್ದ ಪರಿಸರ ಪರಿಣಾಮದ ಅಧ್ಯಯನವನ್ನು ನಡೆಸಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಆಣೆಕಟ್ಟುಗಳ ಎತ್ತರವನ್ನು ನಮೂದಿಸಿಲ್ಲ. ಆದರೆ ಈ ಯೋಜನೆಯಿಂದ ಕೇವಲ 243 ಹೆಕ್ಟೇರ್ ಅರಣ್ಯ ನಾಶ ಆಗುತ್ತದೆ ಎಂದು ತೋರಿಸಲಾಗಿದೆ; ಸುರಂಗ ನಿರ್ಮಾಣಕ್ಕೆ, ವಿದ್ಯುತ್ ಲೈನ್ ಜೋಡಣೆಗೆ, ಪೈಪ್ ಲೈನ್ ಅಳವಡಿಕೆಗೆ ಎಷ್ಟು ಅರಣ್ಯ ಅಗತ್ಯ ಎನ್ನುವ ವಿವರ ಇಲ್ಲ. ನೀರನ್ನು ತಡೆದು ನಿಲ್ಲಿಸುವುದರಿಂದ ಅಕ್ಕಪಕ್ಕದ ತೋಟಗದ್ದೆಗಳ ಮೇಲೆ ಉಂಟಾಗುವ ದುಃಷ್ಪರಿಣಾಮ ಕುರಿತು ಉಲ್ಲೇಖವೇ ಇಲ್ಲ. ಸರಕಾರವೇ ಘೋಷಿಸಿರುವ ಶಾಲ್ಮಲಾ ಸಂರಕ್ಷಿತ ಪ್ರದೇಶ ಅರಣ್ಯೇತರ ಚಟುವಟಿಕೆಗಳ ಕೇಂದ್ರವಾಗಲಿದೆ.

ಬೇಡ್ತಿ ನದಿಯಿಂದ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಕೋಟ್ಯಾಂತರ ಹಣ ವ್ಯಯವಾಗಿ, ಕುಡಿಯುವ ನೀರು ಪೂರೈಸಲಾಗದೇ ಯೋಜನೆ ವಿಫಲವಾದ ಘಟನೆ ನಮ್ಮೆದುರು ಇದೆ. ಅದೇ ನದಿಯಿಂದ ಪೈಪಲೈನ್ ಮೂಲಕ ಮುಂಡಗೋಡು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ನೂರಾರು ಕೋಟಿ ರೂಪಾಯಿ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಹೀಗಿರುವಾಗ ಉದ್ದೇಶಿತ ಯೋಜನೆಗೆ ಬಳಸುವ ನೀರು ಎಲ್ಲಿಂದ ದೊರಕುತ್ತದೆ ಎನ್ನುವುದು ಯಕ್ಷಪ್ರಶ್ನೆ.

2011ರಲ್ಲಿ ಪ್ರಾರಂಭಿಸಲಾದ ಕೋಲಾರಕ್ಕೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಈವರೆಗೆ 22000 ಕೋಟಿ ರೂಪಾಯಿಗಳಿಗಿಂತ ಅಧಿಕ ಹಣ ಖರ್ಚಾದರೂ ನೀರು ಹರಿಯದಿರುವ ವಾಸ್ತವಿಕ ಘಟನೆ ಎಲ್ಲರಿಗೂ ತಿಳಿದಿರುವ ಸಂಗತಿ. ವಸ್ತುಸ್ಥಿತಿ ಹೀಗಿರುವಾಗ ಅದೇ ಮಾದರಿಯಲ್ಲಿ ಬೇಡ್ತಿ-ವರದಾ-ಧರ್ಮಾ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನ ಮಾಡಲು ಸರಕಾರ ಮುಂದಾಗುತ್ತಿರುವುದು ಒಂದು ವಿಪರ್ಯಾಸ.

ಹೀಗೆ ಬಯಲು ಸೀಮೆಯ ಜನತೆಗೆ ನೀರನ್ನು ಒದಗಿಸುವ ಹುಸಿ ಭರವಸೆಯನ್ನು ಬಿತ್ತಿ ಮಲೆನಾಡಿನ ಅರಣ್ಯವನ್ನು, ಕೃಷಿಯನ್ನು ಹಾಗೂ ಜನಜೀವನವನ್ನೂ ಅತಂತ್ರಗೊಳಿಸುವ ಇಂತಹ ಯೋಜನೆಗಳ ಬಗ್ಗೆ ಜನತೆ ಎಚ್ಚೆತ್ತುಕೊಂಡು ತಮ್ಮ ವಿರೋಧವನ್ನು ಒಕ್ಕೊರಲಿನಿಂದ ಗಟ್ಟಿಯಾಗಿ ಹೇಳಲೇಬೇಕಾದ ಅವಶ್ಯಕತೆ ಇದೆ.

ನಮ್ಮ ಬೇಡ್ತಿ ಮತ್ತು ಅಘನಾಶಿನಿ ನದಿಗಳ ನೀರನ್ನು ಬಯಲು ಪ್ರದೇಶಗಳಿಗೆ ಹರಿಸುವ ಸರಕಾರದ ನಿಲುವನ್ನು ಕಳೆದ 17 ವರ್ಷಗಳಿಂದ ವಿರೋಧಿಸಲಾಗುತ್ತಿದೆ. ಕಳೆದ ವರ್ಷ 24/03/2021ರಂದು ಈ ಕುರಿತು ಶಿರಸಿಯಲ್ಲಿ ತಜ್ಞರ ಸಭೆ ನಡೆಸಿ ಸರಕಾರಕ್ಕೆ ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಲಾಗಿತ್ತು. ಆದರೂ ಸರಕಾರ ಈಗಾಗಲೇ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್.) ಸಿದ್ಧಪಡಿಸಿ ಕೇಂದ್ರ ಸರಕಾರದ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದೆ.

ಈ ಹಿನ್ನೆಲೆಯಲ್ಲಿ, ಜಿಲ್ಲೆಯ ನೆಲ-ಜಲ-ಕಾಡು ಮುಂತಾದವುಗಳ ಬಗ್ಗೆ ಪ್ರಾಮಾಣಿಕ ಕಳಕಳಿಯಿಂದ ಶ್ರಮಿಸುತ್ತ ಬಂದಿರುವ, ಹಸಿರು ಸ್ವಾಮೀಜಿ,  ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು, ಸ್ವರ್ಣವಲ್ಲೀ ಅವರ ಮಾರ್ಗದರ್ಶನದಲ್ಲಿ ಉದ್ದೇಶಿತ ಯೋಜನೆ ಕುರಿತು ಜನಜಾಗೃತಿ ಹಾಗೂ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ನಮ್ಮ ಭಾಗದ ಜನಪ್ರತಿನಿಧಿಗಳನ್ನು ಹಾಗೂ ತಜ್ಞರನ್ನು ಆಮಂತ್ರಿಸಲಾಗಿದೆ.

ನಮ್ಮ ಭಾಗವೂ ಮತ್ತೊಂದು ಎತ್ತಿನಹೊಳೆ ಆಗಬಾರದು ಎಂದಾದರೆ ನಾವು ಈಗಲೇ ಜಾಗೃತರಾಗಬೇಕಾದ ತುರ್ತು ಅನಿವಾರ್ಯತೆ ಇದೆ. ಆದ್ದರಿಂದ, ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಈ ಭಾಗದ ನಾವೆಲ್ಲರೂ ಅವಶ್ಯ ಪಾಲ್ಗೊಂಡು ಉದ್ದೇಶಿತ ಯೋಜನೆಯ ಎಲ್ಲ ವಿವರಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಯೋಜನೆ ತಡೆಗಟ್ಟಲು ಗಟ್ಟಿಯಾಗಿ ನಿಲ್ಲಬೇಕಾಗದದ್ದು ಅನಿವಾರ್ಯ. ಈ ಅವೈಜ್ಞಾನಿಕ ಹಾಗೂ ನಿಷ್ಪ್ರಯೋಜಕ ಯೋಜನೆ ವಿರೋಧಿಸಲು ತಪ್ಪದೇ ಪಾಲ್ಗೊಳ್ಳಿ. ಎಲ್ಲರನ್ನೂ ಕರೆತನ್ನಿ ಎಂದು ಬೇಡ್ತಿ & ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕೋರಿದೆ.

ಸ್ಥಳ: *ಸಮಾಜಮಂದಿರ, ಮಂಚಿಕೇರಿ, ಯಲ್ಲಾಪುರ ತಾಲೂಕು*
ದಿನಾಂಕ: *ಮಂಗಳವಾರ, 14/06/2022*
ಸಮಯ: *ಮಧ್ಯಾಹ್ನ 3.00 ಗಂಟೆಗೆ*

ಸಂಪರ್ಕ ವ್ಯಕ್ತಿಗಳು:
ಶ್ರೀ ಶ್ರೀಪಾದ ಹೆಗಡೆ ಶಿರನಾಲ 8431582855
ಶ್ರೀ ಗಣಪತಿ ಹೆಗಡೆ ಬಿಸಲಕೊಪ್ಪ 9481461612

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಏಕೆ ಬೇಡ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button