ರಸ್ತೆ, ಸಂಚಾರ ನಿಯಮ ಉಲ್ಲಂಘನೆ: ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರಂತರ ತಪಾಸಣೆ ಕೈಗೊಂಡು ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ಹಾಗೂ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಬಿಸಿಮುಟ್ಟಿಸಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.8) ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ- ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಳ್ಳೆಯ ರಸ್ತೆಗಳಿವೆ. ಆದಾಗ್ಯೂ ಅಪಘಾತಗಳು ಸಂಭವಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮುಂಬರುವ ದಿನಗಳಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಈ ರೀತಿ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ನಿರಂತರವಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ನೆಪ ಹೇಳದೇ ಇರುವ ಸಿಬ್ಬಂದಿ ಬಳಸಿಕೊಂಡು ತಪಾಸಣೆ ನಡೆಸಬೇಕು ಎಂದರು.
ಲೈಸೆನ್ಸ್-ಪರ್ಮಿಟ್ ರದ್ದುಗೊಳಿಸಲು ಸೂಚನೆ
ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸಂಚರಿಸುವ ಶಾಲಾ ಬಸ್ ಗಳು, ಆಟೋರಿಕ್ಷಾಗಳು ಹಾಗೂ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ನಿಯಮ ಉಲ್ಲಂಘಿಸುವವರ ಲೈಸೆನ್ಸ್ ಹಾಗೂ ಪರ್ಮಿಟ್ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿಶೇಷ ಅಭಿಯಾನದ ರೀತಿಯಲ್ಲಿ ವಾಹನ ತಪಾಸಣೆ ಕಾರ್ಯ ನಡೆಸಿ ಕೈಗೊಂಡ ಕ್ರಮಗಳು ಮತ್ತು ಪ್ರಕರಣಗಳನ್ನು ದಾಖಲಿಸಿರುವ ವರದಿಯನ್ನು ಪ್ರತಿ ಸಭೆಯಲ್ಲಿ ತಪ್ಪದೇ ಮಂಡಿಸಬೇಕು ಎಂದು ತಿಳಿಸಿದರು. ಇದಲ್ಲದೇ ಸಾರಿಗೆ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುವ ದಂಡಗಳ ಕುರಿತು ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ಬೆಳಗಾವಿ ನಗರದಲ್ಲಿ ಪಾರ್ಕಿಂಗ್ ಸ್ಥಳ ನಿರ್ಮಾಣ, ನಿರ್ವಹಣೆ ಕುರಿತು ಸ್ವಯಂ ಸೇವಾ ಸಂಘದ ಸದಸ್ಯರಿಂದ ಮಾಹಿತಿಯನ್ನು ಪಡೆದುಕೊಂಡರು. ಖಾಸಗಿ ಪಾರ್ಕಿಂಗ್ ಸ್ಥಾಪನೆಗೆ ಅವಕಾಶವಿದ್ದರೆ ನಿಯಮಾವಳಿ ಪ್ರಕಾರ ಪರಿಶೀಲಿಸಿ ಅನುಮತಿ ನೀಡಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ ಇರುವ ಶೈಕ್ಷಣಿಕ ಸಂಸ್ಥೆಗಳು, ಇತರೆ ಖಾಸಗಿ ಸಂಸ್ಥೆಗಳು ತಮ್ಮ ಸಂಸ್ಥೆಯ ಆವರಣದಲ್ಲಿ ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಜನಸಂದಣಿ ಇರುವ ರಸ್ತೆಯಲ್ಲಿ ಈ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬಾರದು. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪುನಾರಚನೆ
ಜಿಲ್ಲಾ ಮಟ್ಟದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಹೊಣೆಗಾರಿಕೆ, ಜವಾಬ್ದಾರಿಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪುನರ್ ರಚನೆ ಮಾಡಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅನುಮೋದನೆ ನೀಡಿದರು.
ಸದರಿ ಸಮಿತಿಗೆ ಸರಕಾರದ ನಿರ್ದೇಶನದ ಪ್ರಕಾರ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರು ಅಥವಾ ಕಾರ್ಯಪಾಲಕ ಅಭಿಯಂತರರು ಅವರನ್ನು ಸಮಿತಿಯ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲು ತಿಳಿಸಿದರು.
ಇದಲ್ಲದೇ ಸರಕಾರದ ಆದೇಶದ ಪ್ರಕಾರ ಹೆಚ್ಚುವರಿಯಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಮಿತಿಯ ಸದಸ್ಯರಾಗಿ ನೇಮಿಸಲು ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದರಲ್ಲದೇ ಮುಂದಿನ ಸಭೆಯಲ್ಲಿ ಸಮಿತಿ ರಚನೆಯನ್ನು ಅಂತಿಮಗೊಳಿಸಬೇಕು ಎಂದು ಸೂಚನೆ ನೀಡಿದರು.
ಹೆದ್ದಾರಿ ಗಸ್ತು ವಾಹನ-ಅಂಬ್ಯುಲೆನ್ಸ್ ಕಡ್ಡಾಯ
ಹೆದ್ದಾರಿಗಳಲ್ಲಿ ಹೆದ್ದಾರಿ ಗಸ್ತು ವಾಹನಗಳು ಹಾಗೂ ಆಂಬ್ಯುಲೆನ್ಸ್ ಗಳನ್ನು ನಿಯೋಜಿಸುವುದು ಟೋಲ್ ಸಂಗ್ರಹಿಸುವ ಸಂಸ್ಥೆಯ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆದ್ದಾರಿಯಲ್ಲಿ ಲಾರಿ ನಿಲ್ಲಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಗಸ್ತು ವಾಹನಗಳು ಈ ಬಗ್ಗೆ ನಿಗಾವಹಿಸಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು, ಜಿಲ್ಲೆಯನ್ನು ಪ್ರವೇಶಿಸುವ ಗಡಿಭಾಗದಲ್ಲಿ ಸಾರಿಗೆ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.
ಪ್ರಿಪೇಡ್ ಆಟೋ,_ಕಡ್ಡಾಯ ಮೀಟರ್- ಪ್ರತ್ಯೇಕ ಸಭೆ
ಪ್ರಿಪೇಡ್ ಆಟೋ ವ್ಯವಸ್ಥೆಯನ್ನು ಬೆಳಗಾವಿ ನಗರದಲ್ಲಿ ಪುನರಾರಂಭ ಹಾಗೂ ಆಟೋರಿಕ್ಷಾ ಗಳಿಗೆ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆಯನ್ನು ಕರೆದು ಕೂಲಂಕಷವಾಗಿ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಪೊಲೀಸ್, ಪ್ರಾದೇಶಿಕ ಸಾರಿಗೆ, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಂ ಅವರು ಸಭೆ ನಿರ್ವಹಿಸಿದರು. ಬೆಳಗಾವಿ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಉಪ ಪೊಲೀಸ್ ಆಯುಕ್ತ ಪಿ.ವಿ.ಸ್ನೇಹಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು, ಪೊಲೀಸ್, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರವಾಹ ಭೀತಿ ಇದ್ದರೂ ಸಭೆ ನಡೆಸದ ಸಚಿವರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ