Latest

ಮೇಕೆದಾಟು ಯೋಜನೆ ಅಂತಿಮ ತೀರ್ಪು ಮುಂದಿನ ವಾರದೊಳಗೆ ಹೊರಬೀಳುವ ಸಾಧ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮೇಕೆದಾಟು ಯೋಜನೆಯ ಅಂತಿಮ ತೀರ್ಪು ಮುಂದಿನ ವಾರದೊಳಗೆ ಹೊರಬೀಳುವ ಸಾಧ್ಯತೆಯಿದೆ. ರಾಜ್ಯ ಸಿದ್ಧಪಡಿಸಿರುವ ಡಿಪಿಆರ್‍ ಗೆ ಅನುಮೋದನೆ ದೊರೆತ ಬಳಿಕ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಯೋಜನೆಯಿಂದ ಮಂಡ್ಯ ಹಾಗೂ ಬೆಂಗಳೂರು ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಯೋಜನೆಗೆ ಚಾಲನೆ ನೀಡಲು ಬೇಕಾದ ಅನುಮತಿಗಳನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೈಸೂರು, ಮಂಡ್ಯ ಹಾಸನ ಭಾಗದ ರೈತರು , ಈ ನೀರಾವರಿ ಯೋಜನೆಗಳ ಸಮರ್ಪಕ ಬಳಕೆಯಿಂದ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸಿದ್ದು, ಇದನ್ನು ವಿಸ್ತರಿಸಲಾಗುವುದು. ನಮ್ಮದು ರೈತರಿಗೆ ಸ್ಪಂದಿಸುವ ಸರ್ಕಾರ , ಈ ಭಾಗದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ಸಮರ್ಪಣಾ ಭಾವನೆಯಿಂದ ನಾವು ಕೆಲಸ ಮಾಡಿದಾಗ ಜನ ನಮ್ಮನ್ನು ನೆನಪಿನಲ್ಲಿಡುತ್ತಾರೆ ಎಂದರು.

ಮೈಶುಗರ್ ಕಾರ್ಖಾನೆ ಆಗಸ್ಟ್ 2-3 ನೇ ವಾರದಲ್ಲಿ ಪ್ರಾರಂಭ :

ರೈತರ ಜೀವಾಳವಾಗಿರುವ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯನ್ನು ಆಗಸ್ಟ್ 2-3 ನೇ ವಾರದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ .ರೈತರ ಜೀವಾಳವಾಗಿರುವ ಮೈಶುಗರ್ ಕಾರ್ಖಾನೆಯ ಬಗ್ಗೆ ಸಭೆ ನಡೆಸಿ, ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 2 ಅಥವಾ 3ನೇ ವಾರದಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಿ, ಇದಕ್ಕೆ ಬೇಕಾಗಿರುವ ಬಂಡವಾಳ ವೆಚ್ಚ, ದುಡಿಯುವ ಬಂಡವಾಳವನ್ನು ಸರ್ಕಾರವೇ ನೀಡಲಿದೆ. ಈ ವರ್ಷವೇ ಸರ್ಕಾರ ಮೈ ಶುಗರ್ ಕಾರ್ಖಾನೆಯನ್ನು ಪ್ರಾರಂಭಿಸಿ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ವಿಶ್ವೇಶ್ವರಯ್ಯ ನಾಲೆಯ ನೀರು ರೈತರಿಗೆ ಒದಗಿಸಲಾಗುವುದು:
ವಿಶ್ವೇಶ್ವರಯ್ಯ ನಾಲೆಯ ಅಭಿವೃಧ್ಧಿಗೆ 560 ಕೋಟಿ ರೂ. ಒದಗಿಸಿ ಬ್ರಾಂಚ್ ಕೆನಾಲ್‍ಗಳನ್ನು ನಿರ್ಮಿಸಲಾಗಿದೆ. ಮದ್ದೂರು ಬ್ರಾಂಚ್ ಕೆನಾಲ್, ಸಾಹುಕಾರ್ ಚೆನ್ನಯ್ಯ ಕೆನಾಲ್ ಸೇರಿದಂತೆ ಉಳಿದ ಬ್ರ್ಯಾಂಚ್ ಕೆನಾಲ್‍ಗಳಿಗೆ ನೀರು ಪೂರೈಸಲು ಸಾಧ್ಯವಾಗಿದೆ. ಈ ವರ್ಷದ ಯೋಜನೆಯಲ್ಲಿ ವಿಶ್ವೇಶ್ವರಯ್ಯ ನಾಲೆಯ ನೀರು ರೈತರಿಗೆ ಒದಗಿಸುವ ಕೆಲಸ ಕೈಗೊಳ್ಳಲಾಗುವುದು. ವಿಶ್ವೇಶ್ವರಯ್ಯ ನಾಲೆಯ ಅಂತಿಮ ಹಂತದ ಸಬ್ ಡಿಸ್ಟ್ರಿಬ್ಯೂಟರಿ ಲ್ಯಾಟರ್‍ಗಳನ್ನು ಪೂರ್ಣಗೊಳಿಸುವುದು, ಕಬಿನಿ ಹಾಗೂ ಹಾರಂಗಿ ಬ್ರ್ಯಾಂಚ್ ಕೆನಾಲ್ ಗಳ 300 ಕಿ.ಮೀ. ಗಳಷ್ಟು ಆಧುನೀಕರಣ ಕಾಮಗಾರಿಯನ್ನು ಈ ವರ್ಷವೇ ಕೈಗೆತ್ತಿಕೊಳ್ಳಲಾಗುವುದು. 480 ಕೋಟಿ ರೂ.ಗಳನ್ನು ಆಧುನೀಕರಣಕ್ಕಾಗಿ ಮೀಸಲಿರಿಸಿದೆ ಎಂದರು.

ಕಾವೇರಿ-ಸಂಸ್ಕೃತಿ ಯನ್ನು ಹುಟ್ಟುಹಾಕಿದ ಜೀವನದಿ
ಕಾವೇರಿ ಜಲಾನಯನ ಪ್ರದೆಶದ ನಾಲ್ಕು ಜಲಾಶಯಗಳು ತುಂಬಿರುವ ಅಪರೂಪದ ವರ್ಷ ಇದಾಗಿದೆ. ನಾಡಿನಾದ್ಯಂತ ಉತ್ತಮ ಮಳೆಯಾಗಿದೆ. ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಈ ಸುಸಂದರ್ಭದಲ್ಲಿ ಬಾಗಿನ ಅರ್ಪಿಸಿರುವುದು ನನ್ನ ಸುಯೋಗ. ಕಾವೇರಿ ತಾಯಿ ರಾಜ್ಯದ ಜೀವನದಿ. ಒಂದು ನದಿ ಮನುಷ್ಯನ ಬೇಕುಬೇಡಗಳನ್ನು ಪೂರೈಸುವ ಜೊತೆಗೆ ಒಂದು ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ಇಂತಹ ಪವಿತ್ರವಾದ ಕಾವೇರಿ ನದಿಯ ಸದುಪಯೋಗ ಮಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಮೈಸೂರಿನ ಮಹಾರಾಜರು ಕನ್ನಂಬಾಡಿ ಕಟ್ಟೆಯನ್ನು ಕಟ್ಟುವಲ್ಲಿನ ಅವರ ಶ್ರಮ, ತ್ಯಾಗ ಎಂದೆಂದಿಗು ಮರೆಯಲು ಸಾಧ್ಯವಿಲ್ಲ. ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಈ ಸುದಿನದಂದು ನೆನೆಯಬೇಕಿದೆ ಎಂದರು.

ಕೆಆರ್‍ಎಸ್‍ನ 61 ಕ್ರೆಸ್ಟ್ ಗೇಟ್‍ಗಳ ಬದಲಾವಣೆಗೆ ಕ್ರಮ:
ಕೆಆರ್‍ಎಸ್ ಜಲಾಶಯವನ್ನು ಉತ್ತಮವಾಗಿ ನಿರ್ವಹಿಸಬೇಕಾಗಿದೆ. 2008 ರಲ್ಲಿ ನೀರಾವರಿ ಸಚಿವನಾಗಿದ್ದಾಗ ಕೆಆರ್‍ಎಸ್ ಕ್ರೆಸ್ಟ್ ಗೇಟ್‍ನಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿರುವುದನ್ನು ತಡೆಗಟ್ಟಲು ಗೇಟ್‍ಗಳನ್ನು ಬದಲಿಸಲಾಯಿತು. ಜಲಾಶಯದ ಒಟ್ಟು 136 ಗೇಟ್‍ಗಳಲ್ಲಿ ಉಳಿದ 61 ಗೇಟ್‍ಗಳನ್ನು ಒಂದು ವರ್ಷದೊಳಗೆ ಬದಲಿಸಿ, ಪುನ: ನಿರ್ಮಿಸಲು ಈಗಾಗಲೇ ಆದೇಶ ನೀಡಲಾಗಿದ್ದು,160 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಕ್ರೆಸ್ಟ್ ಗೇಟ್‍ಗಳ ಬದಲಾವಣೆಯ ಕಾಮಗಾರಿ ಸಂಪೂರ್ಣ ಮುಗಿದ ನಂತರ ಕೆಆರ್‍ಎಸ್ ಜಲಾಶಯದ ವಿಜೃಂಭಣೆಯ ಆಚರಣೆಯನ್ನು ಮಾಡಲಾಗುವುದು. ಸರ್ಕಾರ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಹಿಂದಿನಿಂದಲೂ ಮಹರಾಜ ಆಣೆಕಟ್ಟುಗಳು ಹಾಗೂ ನಾಲೆಗಳಿದ್ದವು. ನೆಲಸಮವಾಗಿದ್ದ ನಾಲೆಗಳ ಸಂಪೂರ್ಣ ಆಧುನೀಕರಣ ಕೆಲಸ ಮಾಡಲಾಗಿತ್ತು. ಈ ಆಣೆಕ್ಟುಗಳಿಂದ 94 ಸಾವಿರ ಎಕರೆ ನೀರಾವರಿ ಸೌಲಭ್ಯ ಒದಗಿಸಲಾಗಿತ್ತು ಎಂದರು.

ಕೆಆರ್‍ಎಸ್ ಉದ್ಯಾನವನ ಆಧುನೀಕರಣ :
ನೀರಿನ ಸದ್ಬಳಕೆ ಮಾಡಲು ಸೂಕ್ಷ್ಮ ನೀರಾವರಿಯನ್ನು ಪ್ರಾರಂಭಿಸಲಾಗಿದೆ. ಪುರಗಾಲಿ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಮರುಅಂದಾಜು ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಮೊರೆಕೊಪ್ಪಲಿನ ಕೃಷಿ ಭೂಮಿಯನ್ನು ಕೆಆರ್‍ಡಿಬಿ ತೆಗೆದುಕೊಳ್ಳಬಾರದೆಂಬ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ವಿಶ್ವವಿಖ್ಯಾತ ಕೆಆರ್‍ಎಸ್‍ನ ಉದ್ಯಾನವನದ ಆಧುನೀಕರಣ ಯೋಜನೆಗೆ ಅನುದಾನ ನೀಡಲಾಗುವುದು ಎಂದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಕೆ.ಎಸ್.ಈಶ್ವರಪ್ಪಗೆ ಕ್ಲೀನ್ ಚಿಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button