*ಮೇಕೆದಾಟು ಯೋಜನೆ; ಸಕ್ಷಮ ಪ್ರಾಧಿಕಾರಿಗಳಿಂದ ಅನುಮೋದನೆ ಪಡೆದು ಅನುಷ್ಠಾನಕ್ಕೆ ಕ್ರಮ: ಡಿಸಿಎಂ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೇಕೆದಾಟು ಯೋಜನೆಗೆ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ತೀರುವಳಿ ಅನುಮೋದನೆ ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಸದಸ್ಯ ಟಿ.ಎ.ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ಮೇಕೆದಾಟು ಯೋಜನೆಗೆ ಇದುವರೆಗೆ ಯಾವುದೇ ಭೂಮಿಯನ್ನು ವಶಪಡಿಸಿಕೊಂಡಿರುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಅಂತರ ರಾಜ್ಯ ಗಡಿಯಲ್ಲಿರುವ ಸಿಡಬ್ಲ್ಯೂಸಿ ಬಿಳಿಗುಂಡ್ಲುವಿನಲ್ಲಿ ಜುಲೈ 2023ರಿಂದ ನವೆಂಬರ್ 2023ರವರೆಗೆ 10.658 ಟಿಎಂಸಿ ನೀರನ್ನು ಹರಿಸಲಾಗಿದೆ. ಸಂಕಷ್ಟ ಜಲ ವರ್ಷಗಳಲ್ಲಿ ನೀರಿನ ಹಂಚಿಕೆ ಕುರಿತು ಸೂತ್ರ ರೂಪಿಸುವ ಬಗ್ಗೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು ಸಂಕಷ್ಟ ಹಂಚಿಕೆ ಸೂತ್ರವು ಅಂತಿಮವಾಗಬೇಕಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರಸ್ತುತ ಜಲವರ್ಷ 2023-24 ಆರಂಭದಿAದಲೂ ಸಂಕಷ್ಟ ಜಲ ವರ್ಷವಾಗಿದ್ದು ಸಿಡಬ್ಲ್ಯೂಆರ್ಸಿ ಹಾಗೂ ಸಿಡಬ್ಲ್ಯೂಎಂಎ ಸಭೆಗಳಲ್ಲಿ ಕಾವೇರಿ ಜಲಾನಯನಗಳ ಜಲಾಶಯಗಳಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು, ಕಾಲಕಾಲಕ್ಕೆ ಉಂಟಾದ ಮಳೆಯ ಪ್ರಮಾಣ/ಕೊರತೆ, ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಲ್ಲಿನ ಶೇಖರಣೆ ಒಳಹರಿವು/ಹೊರಹರಿವಿನ ಪರಿಸ್ಥಿತಿ, ಹವಾಮಾನ ವಸ್ತುಸ್ಥಿತಿ, ಮಳೆಯ ಮುನ್ಸೂಚನೆ, ರಾಜ್ಯಗಳಲ್ಲಿನ ಬೆಳೆ ಪ್ರದೇಶ, ನಿಂತ ಬೆಳೆಗಳ ಪರಿಸ್ಥಿತಿ, ಕುಡಿಯುವ ನೀರಿನ ಹಾಗೂ ಕೈಗಾರಿಕಾ ಅವಶ್ಯಕತೆಗಳು, ಇತ್ಯಾದಿ ಅಂಶಗಳ ಪರಿಶೀಲನೆ ನಡೆಸಿ ರಾಜ್ಯದ ಜಲಾಶಯಗಳಲ್ಲಿನ ಒಳಹರಿವಿನ ಕೊರತೆಯನ್ನು ಪರಿಗಣಿಸಿ ಅಂತರ ರಾಜ್ಯ ಗಡಿಯಲ್ಲಿರುವ ಡಿಡಬ್ಲ್ಯೂಸಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ತಮಿಳುನಾಡು ರಾಜ್ಯವು ಪ್ರಸ್ತಕ ಜಲವರ್ಷ 2023-24ನೇ ಜಲವರ್ಷದಲ್ಲಿ ನ್ಯಾಯಾಧೀಕರಣದ ಆದೇಶದನ್ವಯ ತಮಿಳುನಾಡು ರಾಜ್ಯಕ್ಕೆ ಹರಿಯಬೇಕಿದ್ದ ಬಾಕಿ ನೀರಿನ ಪ್ರಮಾಣದ ಕುರಿತು 2023ರ ಆಗಸ್ಟ್ 14ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿತು. ಈ ಅರ್ಜಿಗೆ ಕರ್ನಾಟಕ ರಾಜ್ಯವು 2023ರ ಆಗಸ್ಟ್ 23ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರತಿ ಪ್ರಮಾಣ ಪತ್ರದಲ್ಲಿ ಪ್ರಸ್ತುತ ಜಲವರ್ಷ 2023-24 ಆರಂಭದಿAದಲೂ ಸಂಕಷ್ಟ ವರ್ಷವಾಗಿದ್ದರೂ ಸಹ ಸರ್ವೋಚ್ಛ ನ್ಯಾಯಾಲಯದ 2018ರ ಆದೇಶದಲ್ಲಿ ಮಾರ್ಪಡಿಸಿರುವಂತೆ ಕಾವೇರಿ ಜಲ ವಿವಾದ ನ್ಯಾಯಾಧೀಕರಣ ಆದೇಶದಲ್ಲಿ ಸಾಮಾನ್ಯ ಜಲ ವರ್ಷಕ್ಕೆ ನಿಗದಿಪಡಿಸಿರುವ ಪ್ರಮಾಣದಂತೆ ನೀರು ಹರಿಸಬೇಕೆಂದು ತಮಿಳುನಾಡು ರಾಜ್ಯವು ಕೋರಿರುವುದನ್ನು ರಾಜ್ಯವು ವಿರೋಧಿಸಿರುತ್ತದೆ.
ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯವು ಸಹ ಅರ್ಜಿಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದೆ. ರಾಜ್ಯದ ಕಾನೂನು ತಂಡವು ನ್ಯಾಯಾಲಯದಲ್ಲಿ ರಾಜ್ಯದ ಪ್ರಸ್ತುತ ಜಲ ಸಂಕಷ್ಟದ ಕುರಿತು ಪ್ರತಿಪಾದಿಸಿದೆ. ಕರ್ನಾಟಕದ ಜಲಾಯಶಯಗಳಲ್ಲಿ ಕಡಿಮೆ ಪ್ರಮಾಣದ ನೀರಿನ ಶೇಖರಣೆ ಹಾಗೂ ಕಡಿಮೆ ಒಳ ಹರಿವು ಸೇರಿದಂತೆ ಹಲವು ಅಂಶಗಳನ್ನು ರಾಜ್ಯವು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಮಂಡಿಸಿದ ವಾದಗಳನ್ನು ಆಲಿಸಿ ಸಿಡಬ್ಲ್ಯೂಆರ್ಸಿ ಸಿಡಬ್ಲ್ಯೂಎಂಎ ಇವುಗಳಲ್ಲಿ ನೀರಾವರಿ ಕೃಷಿ ಇತ್ಯಾದಿ ವಿಷಯಗಳಲ್ಲಿ ಪರಿಣಿತರು ಇರುವುದನ್ನು ಉಲ್ಲೇಖಿಸಿ ಅದರ ನಿರ್ದೇಶನಗಳನ್ನು ನಿರಾಕರಿಸಲು ಕಾರಣವಿಲ್ಲವೆಂದು ಹಾಗೂ ಸಿಡಬ್ಲೂö್ಯಎಂಎ ನಿರ್ದೇಶನಗಳನ್ನು ಕರ್ನಾಟಕವು ಪಾಲಿಸಿದೆ ಎಂದು ಸಿಡಬ್ಲೂö್ಯಎಂಯು ಸಲ್ಲಿಸಿದ ಅಫಿಡವಿಟ್ನಲ್ಲಿಯ ಅಂಶಗಳನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು 2023ರ ಸೆಪ್ಟೆಂಬರ್ 21ರಂದು ಆದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ತಮಿಳುನಾಡು ರಾಜ್ಯದ ಅರ್ಜಿಯನ್ನು ತಿರಸ್ಕರಿಸಿ ಇತ್ಯರ್ಥಗೊಳಿಸಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ