ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿಯವರು ಎಲ್ಲ ಸಮುದಾಯದವರಿಗೆ ವಿದ್ಯೆ, ವಸತಿ ಹಾಗೂ ಅನ್ನ ಧಾನ ಮಾಡುವ ಮೂಲಕ ವಿಶ್ವ ಸಂತರಾಗಿ ಹೊರ ಹೊಮ್ಮಿದವರು ಎಂದು ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ ಹೇಳಿದರು.
ಭಾನುವಾರ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗೆಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡಿ ಮಾತನಾಡಿದರು.
ಸಿದ್ದಗಂಗಾ ಶ್ರೀಗಳು ಲಿಂಗೈಕರಾದಾಗ ತುಮಕೂರಿನ ಮುಸ್ಲಿಂ ಬಾಂಧವರು ತಮ್ಮ ಮಸೀದಿಯಲ್ಲಿ ಶಿವಕುಮಾರ ಸ್ವಾಮೀಜಿಯವರ ಶೃದ್ದಾಂಜಲಿ ಸಭೆಯನ್ನು ಆಯೋಜಿಸುವ ಮೂಲಕ ನಮನ ಸಲ್ಲಿಸಿ ಮುಸ್ಲಿಂ ಸಮುದಾಯದವರು ಡಾ. ಶಿವಕುಮಾರ ಸ್ವಾಮೀಜಿಯವರಿಗೆ ನಮ್ಮ ಸಂಪ್ರದಾಯದಂತೆ ದುವಾ ( ಪ್ರಾರ್ಥನೆ) ಮಾಡಿದ್ದರು ಎಂದರು.
ಶಿವಕುಮಾರ ಸ್ವಾಮೀಜಿಯವರು ಯಾರ ಸಹಾಯವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವುದರ ಮೂಲಕ ಶ್ರೀಮಠದಿಂದ ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡರು.
ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಸಿದ್ದಗಂಗಾ ಮಹಾಸ್ವಾಮೀಜಿ ನಮಗೆಲ್ಲರಿಗೂ ಸ್ಪೂರ್ತಿ. ಪ್ರಧಾನಿ ನರೇಂದ್ರ ಮೋದಿ ಸಹ ಶ್ರೀಗಳ ಬಗ್ಗೆ ಅತೀವ ಅಭಿಮಾನದಿಂದ ಗುರುವಿನ ಗದ್ದುಗೆಯ ದರ್ಶನ ಪಡೆದಿದ್ದಾರೆ ಎಂದರು.
ಸಿದ್ದಗಂಗೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಶಿಕ್ಷಣ, ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿಯಾಗಿ ನಡೆದಾಡುವ ದೇವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಅಂದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ಮಾತನಾಡಿ, ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಎಲ್ಲ ಮಹಾತ್ಮರ ಸ್ಮರಣೆ ಮಾಡುತ್ತಾರೆ. ಈಗ ಸಿದ್ದಗಂಗೆಯ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣೆ ಮಾಡುವುದರ ಮೂಲಕ ಹುಕ್ಕೇರಿ ಶ್ರೀಗಳು ಶಿವಕುಮಾರ ಸ್ವಾಮೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿರುವುದು ವಿಶೇಷ ಎಂದರು.
ಸಾನಿದ್ಯ ವಹಿಸಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರು ವಿಶ್ವಕಂಡ ಅಪರೂಪದ ಸಂತ. ತ್ರಿಕಾಲ ಶಿವ ಪೂಜೆಯ ಜತೆಗೆ, ತ್ರಿವಿಧ ದಾಸೋಹ ಮೂರ್ತಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಶಿಕ್ಷಣದ ಧಾನ ಮಾಡಿರುವ ಒಬ್ಬ ಅಪರೂಪದ ಗುರು ಎಂದರು.
ಎಲ್ಲಾ ಭಾಗದಲ್ಲಿಯೂ ಕೂಡ ಈ ಮಠದಿಂದ ಆಶ್ರಯ ಪಡೆದು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಉತ್ತರ ಕರ್ನಾಟಕದ ಅನೇಕ ಮಕ್ಕಳು ಸಿದ್ದಗಂಗಾ ಮಠದಲ್ಲಿ ಅದ್ಯಯನ ಮಾಡಿರುವುದನ್ನು ಸ್ಮರಿಸಲೇಬೇಕು. ಈ ಭಾಗದ ಜನರ ಪರವಾಗಿ ನಾವು ಗುರುವಿನ ಸ್ಮರಣೆ ಮಾಡಿ ಕೃತಜ್ಞತೆ ಅರ್ಪಿಸುವ ಸಮಾರಂಭ ಇದು ಎಂದರು.
ವಿಜಯ ಶಾಸ್ತ್ರೀ ಹಿರೇಮಠ, ಡಾ. ನಂದಿಶ, ವೀರುಪಾಕ್ಷಯ್ಯ ಸಾಲಿಮಠ, ಚಂದ್ರಶೇಖರಯ್ಯ ಸವಡಿಸಾಲಿಮಠ, ಅಶೋಕ ತೆರೆಗೌಡರ, ಸುಮಂಗಲಾ ಸಿಂತ್ರಿ, ಉಮಾ, ಸುನೀತಾ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ