ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಅಮಿತ್ ಶಾ ಅಂಗಳಕ್ಕೆ ಒಯ್ದ ನಂತರದ ಸಂಧಾನ ಸಭೆಯಲ್ಲಿನ ಶಾ ಸಲಹೆ ಸೂಚನೆಗಳು ಎಂಇಎಸ್ ಪಾಲಿಗೆ ನುಂಗಲಾರದ ತುತ್ತಾಗಿವೆ. ಕೋಲು ಕೊಟ್ಟು ಹೊಡೆಸಿಕೊಂಡಂಥ ಅನುಭವ ಹೊಂದಿದ ಮೇಲೂ ಎಂಇಎಸ್ ಉದ್ಧಟತನ ಮುಂದುವರಿದಿದೆ.
ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಾ ನೀಡಿದ ಸಲಹೆಗೆ ವ್ಯತಿರಿಕ್ತವಾಗಿ ಇಲ್ಲಿನ ಮರಾಠಾ ಮಂಡಳ ಸಭಾಭವನದಲ್ಲಿ ಸಭೆ ಸೇರಿದ ಎಂಇಎಸ್ ತಾಲೂಕು ಘಟಕದಲ್ಲಿ ಜ.19ರಂದು “ಪರವಾನಗಿ ಸಿಗಲಿ, ಸಿಗದೇ ಇರಲಿ ಮಹಾಮೇಳಾವ ನಡೆಸಿಯೇ ಸಿದ್ಧ,” ಎಂದು ನಿರ್ಧಾರ ತಳದಿದೆ.
ಮರಾಠಿಗರನ್ನು ದಮನ ಮಾಡಲೆಂದೇ ಕರ್ನಾಟಕ ಸರಕಾರ ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದೆ. ಅಲ್ಲಿ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಹೀಗಾಗಿಯೇ ಎಂಇಎಸ್ ಮಹಾಮೇಳಾವ ನಡೆಸುತ್ತಿದ್ದು ಅದನ್ನು ಯಶಸ್ವಿಗೊಳಿಸಬೇಕು ಎಂದು ಎಂಇಎಸ್ ಮುಖಂಡರು ಸಭೆಯಲ್ಲಿ ನಿರ್ಣಯಿಸಿದ್ದಾರೆ.
ಈ ಮಹಾಮೇಳಾವದಲ್ಲಿ ಭಾರೀ ಸಂಖ್ಯೆಯಲ್ಲಿ ಮರಾಠಿ ಭಾಷಿಕರು ಸೇರಬೇಕು ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮನೋಹರ ಕಿಣೇಕರ ಹೇಳಿದರು.
ಡಿ.19ರಂದು ಬೆಳಗ್ಗೆ 11ಕ್ಕೆ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಮಹಾಮೇಳಾವ ನಡೆಸಲಾಗುವುದು. ಈ ಕುರಿತು ಎಲ್ಲ ಗ್ರಾಮಗಳಲ್ಲಿ ಜನಜಾಗೃತಿ ನಡೆಸಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಇದೇ ವೇಳೆ ಎಂಇಎಸ್ ಯುವ ಘಟಕ ಕೂಡ ಪ್ರತ್ಯೇಕ ಸಭೆ ನಡೆಸಿ ಈ ಕುರಿತು ನಿರ್ಧಾರ ಕೈಗೊಂಡಿದೆ. ಮಹಾಮೇಳಾವದ ಯಶಸ್ಸಿಗೆ ಯುವ ಘಟಕ ವಿರಾಟ ಸ್ವರೂಪ ಪ್ರದರ್ಶಿಸಬೇಕಿದೆ ಎಂದು ಎಂಇಎಸ್ ತಾಲೂಕು ಯುವ ಘಟಕದ ಮುಖಂಡ ಶ್ರೀಕಾಂತ ಕದಂ ಕರೆ ಕೊಟ್ಟಿದ್ದಾರೆ.
ಮನೋಹರ ಹುಂದ್ರೆ, ವಿನಾಯಕ ಕಾವಳೆ, ವಾಸು ಸಾಮಜಿ, ರಾಜು ಕದಂ, ಪ್ರವೀಣ ರೇಡೆಕರ, ಸಂತೋಷ ಕೃಷ್ಣಾಚೆ, ಅಶ್ವಜಿತ್ ಚೌಧರಿ, ಸಿದ್ಧಾರ್ಥ, ಚೌಗುಲೆ ಮತ್ತಿತರರು ಈ ಸಭೆಯಲ್ಲಿದ್ದರು.
ಈ ಕುರಿತು ಖಡೇಬಾಜಾರ್ ಎಸಿಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಎಂಇಎಸ್ ಮುಖಂಡರು ಸಭೆ ನಡೆಸಿ ಚರ್ಚಿಸಿದ್ದಾರಾದರೂ ರಾಜ್ಯ ಸರಕಾರ, ಜಿಲ್ಲಾ ಆಡಳಿತ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ.
ಯಾರೂ ಗಡಿ ವಿವಾದ ಕೆದಕಬಾರದು, ಗಡಿ ವಿಷಯ ರಾಜಕೀಯಕ್ಕೆ ಬಳಕೆಯಾಗಬಾರದು. ನೇರವಾಗಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡಲ್ಲಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂಬೆಲ್ಲ ಶಾ ಸೂಚಿಸದ ಸಲಹೆಗಳಿಗೆ ಮಹಾಮೇಳಾವ ಹೇಗೆ ಹೊಂದಿಸಲಾಗುವುದು ಎಂಬುದು ಈಗ ಪ್ರಶ್ನೆಯಾಗಿದೆ.
ಕಾರಣ ಶಾ ಏನೆಲ್ಲ ಮಾಡಬಾರದೆಂಬ ಸಲಹೆ ನೀಡಿದ್ದಾರೋ ಅದುವೇ ಮುಖ್ಯ ಅಜೆಂಡಾ ಆಗಿಟ್ಟುಕೊಂಡು ನಡೆಸುತ್ತ ಬರಲಾಗಿರುವ ಮಹಾಮೇಳಾವ ಸ್ವರೂಪ ಅದ್ಯಾವ ರೀತಿ ಬದಲಾದೀತು? ಹಾಗೆ ಬದಲಾಯಿಸುವುದೇ ಆದರೆ ಮಹಾಮೇಳಾವ ನಡೆಸುವ ಉದ್ದೇಶವೇನು? ಎಂಬೆಲ್ಲ ವಿಷಯಗಳೀಗ ಆಡಳಿತದ ಜಿಜ್ಞಾಸೆಗೆ ಒಳಪಡುತ್ತಿದೆ. ಹಾಗಾದರೆ, ಒಂದೊಮ್ಮೆ ಪರವಾನಗಿ ನೀಡಲು ಆಡಳಿತ ನಿರಾಕರಿಸಿದರೂ ಅದನ್ನು ನಡೆಸಿಯೇ ತೀರುವುದಾಗಿ ನಿರ್ಧಾರ ಕೈಗೊಂಡಿರುವ ಎಂಇಎಸ್ ಅಮಿತ್ ಶಾ ಗೇ ಸವಾಲು ಹಾಕಲು ಮುಂದಾಗಿದೆಯೇ ಎಂಬ ಚರ್ಚೆಗಳೂ ನಡೆಯತೊಡಗಿವೆ.
ಎಂಇಎಸ್ ಹಾಲಿ ನಡೆ ಬೆಂಬಲಕ್ಕೆ ಧಾವಿಸಿ ಬಂದಿದ್ದ ಮಹಾರಾಷ್ಟ್ರದ ರಾಜಕೀಯ ಮುಖಂಡರಿಗೂ ಇರಿಸುಮುರುಸಾಗಿಸುವಂತಿರುವುದು ವಾಸ್ತವ. ಮಹಾರಾಷ್ಟ್ರ ಸರಕಾರವೇನಾದರೂ ಎಂಇಎಸ್ ನ ಈ ನಡೆ ಬೆಂಬಲಿಸಿದ್ದೇ ಆದಲ್ಲಿ ನಾಳೆ ಪಕ್ಷದ ಹೈಕಮಾಂಡ್ ಎದುರು ಮುಖಹೇಡಿಯಾಗುವುದೂ ಖಚಿತ. ಹೀಗಾಗಿ ಮಹಾ ನಡೆ ಕೂಡ ಈ ವಿಷಯದಲ್ಲಿ ಹೇಗಿರಲಿದೆ? ಎಂಬುದು ಕುತೂಹಲ ಕೆರಳಿಸಿದೆ.
*ಕಾಶಿ ವಿಶ್ವನಾಥ ಮಂದಿರ ಮಾದರಿಯಲ್ಲಿ ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿಗೆ ಪ್ರಸ್ತಾವನೆ*
https://pragati.taskdun.com/100cr-proposal-submitted-to-devolop-savadatti-yallamma-temple/
ಇಂದು ಬೆಳಗಾವಿಯಲ್ಲಿ ಲೋಕಾರ್ಪಣೆಗೊಂಡಿದೆ ‘ಯಾನ’
https://pragati.taskdun.com/yana-will-be-inaugurated-in-belgaum-today/
*ಸೈನಿಕರ ಕುಟುಂಬದವರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ದ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ*
https://pragati.taskdun.com/cm-basavaraj-bommaaivijaya-diwasnational-soldier-memorial/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ