*ಕಾಶಿ ವಿಶ್ವನಾಥ ಮಂದಿರ ಮಾದರಿಯಲ್ಲಿ ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿಗೆ ಪ್ರಸ್ತಾವನೆ*
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು 100 ಕೋಟಿ ರೂ. ವೆಚ್ಚದಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರೇಣುಕಾ ಯಲ್ಲಮ್ಮ ದೇವಸ್ಥಾನ ರಾಜ್ಯದ ಟಾಪ್ 10 ಆದಾಯ ಗಳಿಸುವ ದೇವಸ್ಥಾನಗಳಲ್ಲಿ ಒಂದಾಗಿದೆ. ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ಉಪ ಸಭಾಪತಿಯಾಗಿದ್ದ ದಿ. ಆನಂದ ಮಾಮನಿ ಅವರ ಪತ್ನಿ ರತ್ನಾ ಆನಂದ ಮಾಮನಿ ಅವರು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೇವಸ್ಥಾನದ ಅಭಿವೃದ್ಧಿಗೆ ಸಿದ್ಧಪಡಿಸಿರುವ 100 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ದಿ. ಆನಂದ ಮಾಮನಿ ಅವರ ಕನಸಾಗಿತ್ತು. ಸವದತ್ತಿ ಯಲ್ಲಮ್ಮ ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಅನ್ನು ಅವರ ಪ್ರಯತ್ನದಿಂದ ಸಿದ್ಧಪಡಿಸಲಾಗಿದೆ. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ರತ್ನಾ ಆನಂದ ಮಾಮನಿ ತಿಳಿಸಿದರು.
ಮಾಸ್ಟರ್ ಪ್ಲಾನ್ ಅನ್ನು ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದು, ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ರೇಣುಕಾ ದೇವಸ್ಥಾನ ಎಂದೂ ಕರೆಯಲ್ಪಡುವ ಯಲ್ಲಮ್ಮ ದೇವಸ್ಥಾನವು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಯಾತ್ರಾ ಸ್ಥಳವಾಗಿದೆ.
ಇದು ಹಿಂದೆ ಸಿದ್ಧಾಚಲ ಪರ್ವತ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ನೆಲೆಗೊಂಡಿದೆ. ಈಗ ಇದನ್ನು ಯಲ್ಲಮ್ಮನ ಗುಡ್ಡ ಎಂದು ಕರೆಯಲಾಗುತ್ತದೆ.
ಐತಿಹಾಸಿಕ ದಾಖಲೆಗಳ ಪ್ರಕಾರ ಈ ದೇವಾಲಯವನ್ನು 1514 ರಲ್ಲಿ ರಾಯಬಾಗದ ಬೊಮ್ಮಪ್ಪ ನಾಯಕ ಎಂಬುವವರು ನಿರ್ಮಿಸಿದ್ದಾರೆ. ದೇವಾಲಯದ ಸುತ್ತಲೂ ದೊರೆತ ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಪ್ರಕಾರ, ಪೂರ್ವ ರಾಷ್ಟ್ರಕೂಟರ ಅಥವಾ ಚಾಲುಕ್ಯರ ಅವಧಿಯ ಕೊನೆಯಲ್ಲಿ 8 ನೇ ಶತಮಾನದಿಂದ 11ನೇ ಶತಮಾನದ ಮಧ್ಯದವರೆಗೆ ಇಲ್ಲಿ ದೇವಾಲಯವಿತ್ತು.
ಸವದತ್ತಿ ಪಟ್ಟಣವು ಜಿಲ್ಲಾ ಕೇಂದ್ರವಾದ ಬೆಳಗಾವಿಯಿಂದ 112 ಕಿಮೀ ದೂರದಲ್ಲಿದೆ.
*ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಕೆಂಡಾಮಂಡಲ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ