Belagavi NewsBelgaum NewsKannada NewsKarnataka NewsPolitics

*ಬೆಳಗಾವಿ ಪಾಲಿಕೆಗೆ ಜೂನ್ 2ರ ಗಡುವು: ಇಲ್ಲದಿದ್ರೆ ಕರ್ನಾಟಕ ಬಂದ್ ಎಂದ ವಾಟಾಳ್ ನಾಗರಾಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂನ್ 2ರೊಳಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಮತ್ತು ಮಹಾಜನ್ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂನ್ 4ರಂದು ಬೆಂಗಳೂರಿನಲ್ಲಿ ಸಭೆ ಕರೆದು, ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು‌.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಯಾವ ನೆಲದಲ್ಲಿದೆ..? ಎಂಬುದನ್ನು ಪಾಲಿಕೆಯಲ್ಲಿ ಅಧಿಕಾರದಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ. ಇದು ಕರ್ನಾಟಕದ ಅವಿಭಾಜ್ಯ ಅಂಗ. ಮಹಾಜನ್ ವರದಿ ಜಾರಿ ಆಗಲೇಬೇಕು ಅಂತಾ ನಿರ್ಣಯ ಮಾಡಬೇಕು. ಮಾಡದಿದ್ದರೆ ಬೆಳಗಾವಿಯಲ್ಲಿ ಕಂಡು ಕೇಳರಿಯದ ರೀತಿಯ ಕ್ರಾಂತಿ ಆಗುತ್ತದೆ. ಇವತ್ತಿನಿಂದ ಒಂದು ವಾರದೊಳಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾನಜನ್ ವರದಿ ಜಾರಿಗೆ ತರಬೇಕು ಅಂತಾ ನಿರ್ಣಯ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ನಾವು ಗಡುವು ಕೊಡುತ್ತೇವೆ. ಆಗಲೂ ನೀವು ಎಚ್ಚೆತ್ತುಕೊಳ್ಳದಿದ್ದರೆ, ಜೂನ್4ರಂದು ಬೆಂಗಳೂರಲ್ಲಿಎಲ್ಲಾ ಕನ್ನಡ ಸಂಘಟನೆಗಳು ಸಭೆ ಸೇರುತ್ತೇವೆ. ಪ್ರವೀಣ ಶೆಟ್ಟಿ, ಶಿವರಾಮೇಗೌಡ, ನಾರಾಯಣಗೌಡ ಸೇರಿ ಎಲ್ಲ ಬಣಗಳ ಕನ್ನಡ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸುತ್ತೇವೆ. ಅಲ್ಲಿ ಅಖಂಡ ಕರ್ನಾಟಕ ಬಂದ್ ಗೆ ಕರೆ ಕೊಡುತ್ತೇವೆ ಎಂದರು.

Home add -Advt

ಬಂದ್ ದಿನ ನಾವು ಬೆಳಗಾವಿಗೆ ಬರುತ್ತೇವೆ. ಬೆಳಗಾವಿಯಿಂದಲೇ ಬಹುದೊಡ್ಡ ಕ್ರಾಂತಿ ಆರಂಭವಾಗಲಿದೆ. ಹೊಸ ಕ್ರಾಂತಿಗೆ ದಿಕ್ಸೂಚಿ ಸಿಗಲಿದೆ. ಇಲ್ಲಿಂದ ಕ್ರಾಂತಿಯ ಕಹಳೆ ಮೊಳಗಲಿದೆ. ಇಡೀ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಜನರು ಬೆಳಗಾವಿ ಜೊತೆಗೆ ನಿಲ್ಲಬೇಕು. ನಮ್ಮ ದೇಹದಲ್ಲಿ ರಕ್ತದ ಕೊನೆ ಹನಿ ಇರೋವರೆಗೂ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ವಾಟಾಳ್ ನಾಗರಾಜ ಸ್ಪಷ್ಟಪಡಿಸಿದರು.

ಮುಂದೆ ನಾನೇ ಮುಖ್ಯಮಂತ್ರಿ:

ಈ ಹೋರಾಟದಿಂದ ಮುಂದೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕನ್ನಡ ಹೆಸರಲ್ಲಿ ಸರ್ಕಾರ ಬರಬೇಕು. ಆಗ ಸುವರ್ಣವಿಧಾನಸೌಧದಲ್ಲಿ ಕನ್ನಡ ಸಂಘಟನೆಗಳಿಗೆ ಒಂದು ಕೊಠಡಿ ನೀಡಬೇಕು. ಪ್ರತಿ ಕನ್ನಡ ಸಂಘಟನೆಗೆ ವರ್ಷಕ್ಕೆ 1 ಕೋಟಿ ಅನುದಾನ ಘೋಷಿಸಬೇಕು. ಪ್ರೇಸ್ ಕ್ಲಬ್ ಗೆ 5 ಕೋಟಿ ಕೊಡಬೇಕು. ಇದು ಯಾವಾಗ ಸಾಧ್ಯ ಆಗುತ್ತದೆ ಎಂದರೆ ನಾನು ಮುಖ್ಯಮಂತ್ರಿ ಆಗಬೇಕು. ಮುಂದೆ ನಾನೇ ಸಿಎಂ ಆಗೋದು. ನಮ್ಮ ಜೊತೆಗಿರುವ ಕನ್ನಡ, ರೈತಪರ ಸಂಘಟನೆ ಹಾಗೂ ಪತ್ರಕರ್ತರಿಗೂ ಸಚಿವ ಸ್ಥಾನ ಕೊಡುತ್ತೇನೆ ಎಂದು ವಾಟಾಳ್ ನಾಗರಾಜ ಹಾಸ್ಯ ಚಟಾಕಿ ಹಾರಿಸಿದರು.

ಈ ವಿಚಾರವಾಗಿ ರಾಜ್ಯ ಸರ್ಕಾರದ ಜೊತೆಗೂ ನಾವು ಮಾತನಾಡುತ್ತೇವೆ. ಸಿದ್ದರಾಮಯ್ಯನವರೇ ನೀವು ಏನು ಕಣ್ಮುಚ್ಚಿ ಕುಳಿತಿದ್ದಿರಾ‌.? ಇದೇನು ಹುಡುಗಾಟವೇ..? ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಅಂತಾ ನಿರ್ಣಯ ಮಾಡಿಸಿ, ಇಲ್ಲವಾದರೆ ಮಹಾನಗರ ಪಾಲಿಕೆ ವಜಾ ಮಾಡಿ ಅಂತಾ ವಾಟಾಳ್ ನಾಗರಾಜ ಒತ್ತಾಯಿಸಿದರು.

Related Articles

Back to top button