ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ ಪುಂಡ ಎಂಇಎಸ್ ನಾಯಕರನ್ನು ಪೊಲೀಸರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾದ ಎಂ ಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ಎಂಇಎಸ್ ಕಾರ್ಯಕರ್ತರು, ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಇಲ್ಲಿನ ಮರಾಠಿ ಭಾಷಿಕರ ಸಮಸ್ಯೆ ಆಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದರು. ಅವರಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಸರಕಾರಕ್ಕೆ ಪತ್ರ ಬರೆದು ಬೆಳಗಾವಿ ಗಡಿ ಪ್ರವೇಶಿಸದಂತೆ ಮಾಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ. ನಮಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರನ್ನು ಬೆಳಗಾವಿ ಗಡಿಗೆ ಬಾರದಂತೆ ನೋಡಿಕೊಂಡಿರುವುದು ದುರಂತ ಎಂದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಆಗಮಿಸುತ್ತಿದ್ದಂತೆ ಗಲಿಬಿಲಿಗೊಂಡ ಬೆರಳಣಿಕೆಯ ಪುಂಡ ಎಂಇಎಸ್ ನಾಯಕರಿಗೆ ಕ್ಯಾರೆ ಎನ್ನದೆ ತಮ್ಮ ಕಚೇರಿಯತ್ತ ತೆರಳಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಎಂಇಎಸ್ ಪುಂಡರಿಗೆ ಕೇವಲ ನಾಲ್ಕು ಜನಕ್ಕೆ ಮಾತ್ರ ತೆರಳಿ ಮನವಿ ಸಲ್ಲಿಸುವಂತೆ ಕೊರಿದರೂ ಪೊಲೀಸರ ಮಾತಿಗೆ ಗೌರವ ಕೊಡದೆ ಪುಂಡಾಟ ಮೆರೆಯಲು ಮುಂದಾದರು. ಅಲ್ಲದೆ, ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನೆಗೆ ಆಗಮಿಸಿದ್ದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
KSRTC ಬಸ್, ಕಾರುಗಳ ಮೇಲೆ ಶಿವಸೇನೆ ಕಾರ್ಯಕರ್ತರಿಂದ ಕಲ್ಲು ತೂರಾಟ
https://pragati.taskdun.com/karnataka-maharashtra-border-issueshivasena-activistattackksrtc-buscarpune/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ