Latest

*ಮೆಟ್ರೊ ಕಾಮಗಾರಿ ಪಿಲ್ಲರ್ ದುರಂತ: ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಬೆಂಗಳೂರಿನ ನಾಗವಾರದಲ್ಲಿ ಮೆಟ್ರೋ ಕಾಮಗಾರಿಯ ವೇಳೆ ಪಿಲ್ಲರ್ ಕುಸಿತದ ಅವಘಡದಿಂದಾಗಿ ಮಹಿಳೆ ಹಾಗೂ ಮಗುವಿನ ಸಾವಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 10 ಲಕ್ಷ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಧಾರವಾಡದ ಪ್ರವಾಸಿ ಮಂದಿರದಲ್ಲಿ ಗೌರವಾನಿತ್ವ ಪ್ರಧಾನಮಂತ್ರಿಗಳ ಜನವರಿ 12ರಂದು ಹುಬ್ಬಳ್ಳಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯ ಪಿಲ್ಲರ್ ಕುಸಿತದಿಂದಾದ ಅವಘಡದ ಬಗ್ಗೆ ಪ್ರತಿಕ್ರಿಯೆ ನೀಡಿ, ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಕಾಮಗಾರಿಯ ಗುತ್ತಿಗೆದಾರರು, ಅವಘಡಕ್ಕೆ ಕಾರಣ ತಿಳಿಯಲು ತನಿಖೆಯನ್ನು ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೆಟ್ರೋ ಸಂಸ್ಥೆಯಿಂದ ಮೃತಪಟ್ಟವರಿಗೆ ಪರಿಹಾರ ದೊರೆಯಲಿದೆ ಎಂದರು.

ರಾಷ್ಟ್ರೀಯ ಯುವಜನೋತ್ಸ- ಸುಮಾರು 30 ಸಾವಿರ ಯುವಕರ ನೋಂದಣಿ: 

ರಾಷ್ಟ್ರೀಯ ಯುವಜನೋತ್ಸವ ಪೂರ್ವಭಾವಿ ಸಭೆ ನಡೆಸಲಾಗಿದೆ. ಒಂದು ವಾರದ ಕಾಲ ನಡೆಯುವ ಯುವಜನೋತ್ಸವಕ್ಕೆ 28 ರಾಜ್ಯಗಳಿಂದ ಯುವಕರ ತಂಡ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ 7 ಸಾವಿರಕ್ಕಿಂತ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಕೇಂದ್ರ ಹಾಗೂ ರಾಜ್ಯ ಕ್ರೀಡಾ ಇಲಾಖೆಗಳಿಂದ ವಿವಿಧ ಚಟುವಟಿಕೆಗಳನ್ನು ಧಾರವಾಡದ ಕೆಸಿಡಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟ ವಸತಿ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿವಿಧ ಇಲಾಖೆಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ಯುವಜನತೆಗೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಸುಮಾರು 30 ಸಾವಿರ ಜನರು ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಜನವರಿ 12 ರಂದು ರಾಷ್ಟ್ರೀಯ ಯುವಜನೋತ್ಸದ ಉದ್ಘಾಟನೆಗೆ ಪ್ರಧಾನಮಂತ್ರಿಗಳು ಆಗಮಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ರೈಲ್ವೇ ಗ್ರೌಂಡ್ಸ್ ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರ ಮಕ್ಕಳಿಂದ ಕವಾಯತು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಷ್ಟ್ರದ ಯುವಕರಲ್ಲಿ ಭಾವೈಕ್ಯತೆ ಮೂಡಿಸಲಿದೆ:
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸ್ಪೂರ್ತಿದಾಯಕ ಭಾಷಣ ಮಾಡಲಿದ್ದು, ರಾಷ್ಟ್ರದ ಯುವಕರಲ್ಲಿ ಭಾವೈಕ್ಯತೆಯ ಭಾವನೆ ಮೂಡಿಸಲಿದೆ. ಯುವಜನೋತ್ಸವದಲ್ಲಿ ಯುವಕರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಪ್ರಧಾನಮಂತ್ರಿಗಳು ಜನಸಂಖ್ಯೆಯ ಲಾಭವನ್ನು ಗುರುತಿಸಿದವರು. ಒಂದು ಕಾಲದಲ್ಲಿ ಜನಸಂಖ್ಯೆ, ದೇಶಕ್ಕೆ ಭಾರವೆಂದು ಪರಿಗಣಿಸಲಾಗುತ್ತಿತ್ತು. ಈಗ ಜನಸಂಖ್ಯೆಯೇ ದೇಶದ ಆಸ್ತಿಯಾಗಿ ಪರಿಗಣಿಸಲಾಗುತ್ತಿದ್ದು, ದೇಶದ ಭದ್ರ ಭವಿಷ್ಯವನ್ನು ಬರೆಯಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವಜನೋತ್ಸವ ಅರ್ಥಪೂರ್ಣವಾಗಿ ನಡೆಯಲಿದೆ. ಚಿರಸ್ಮರಣೀಯ ಕಾರ್ಯಕ್ರಮವಾಗಿಸಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಮೆಟ್ರೋ ಪಿಲ್ಲರ್ ಕುಸಿತದ ಅವಘಡಕ್ಕೆ ಸರ್ಕಾರದ 40 % ಕಮೀಷನ್ ಕಾರಣವೆಂದು ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಉತ್ತರಿಸಿ, ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡಲಾಗುತ್ತಿದೆ ಎಂದರು.

*RSS ಕಾರ್ಯಕರ್ತರ ಮೇಲೆ ಗುಂಡಿನ ದಾಳಿ; ಓರ್ವ ಸಾವು; ಇಬ್ಬರ ಸ್ಥಿತಿ ಗಂಭೀರ*

 

https://pragati.taskdun.com/rss-activistfiringdeathtwo-people-injuerdhasanayasaluru/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button