ಮತದಾರರು ಲಕ್ಷಾಂತರ, ಕಾರ್ಯಕರ್ತರು ಸಾವಿರಾರು, ಸಭೆ ಸೇರಿದವರು ಕೇವಲ 7 -8 ಜನ: ಜಗದೀಶ್ ಶೆಟ್ಟರ್ ಗೇಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸ್ಫರ್ಧೆ ವಿರೋಧಿಸಿ ಸಭೆ ಮಾಡಿದವರ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೇಲಿ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಖಚಿತ. ಎಲ್ಲರೊಂದಿಗೆ ಮಾತನಾಡಿದ್ದೇನೆ. ಕ್ಷೇತ್ರದಲ್ಲಿ ಲಕ್ಷಾಂತರ ಮತದಾರರಿದ್ದಾರೆ, ಸಾವಿರಾರು ಕಾರ್ಯಕರ್ತರಿದ್ದಾರೆ. ನಿನ್ನೆ ಸಭೆ ಸೇರಿದವರು ಕೇವಲ 7 -8 ಜನರು ಮಾತ್ರ ಎನ್ನುವ ಮೂಲಕ, ಅದೇನು ಲೆಕ್ಕಕ್ಕಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶೆಟ್ಟರ್, ನಾನು ಪ್ರಭಾಕರ ಕೋರೆ ಅವರ ಜೊತೆ ಮಾತನಾಡಿದ್ದೇನೆ. ನನ್ನ ಬಗ್ಗೆ ವಿರೋಧವಿಲ್ಲ ಎಂದು ಅವರು ಹೇಳಿದ್ದಾರೆ. ಕ್ಷೇತ್ರದ ಬಹಳಷ್ಟು ಮುಖಂಡರ ಜೊತೆ ನಾನು ಮಾತನಾಡಿದ್ದೇನೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನೀವು ಸ್ಪರ್ಧಿಸುವುದು ಉತ್ತಮ ಎಂದಿದ್ದಾರೆ. ಬೆಳಗಾವಿ ಜೊತೆಗೆ ನನಗೆ ಬಹಳ ವರ್ಷದಿಂದ ಸಂಬಂಧವಿದೆ. ಯಾರೂ ನಿಖರವಾಗಿ ನನ್ನನ್ನು ವಿರೋಧಿಸಿ ಹೇಳಿಕೆ ಕೊಟ್ಟಿಲ್ಲ. ಕೇವಲ 7-8 ಜನರು ಸಭೆ ನಡೆಸಿ, ನಂತರ ಪ್ರಭಾಕರ ಕೋರೆ ಅವರನ್ನು ಭೇಟಿಯಾಗಿದ್ದಾರೆ. ಲಕ್ಷಾಂತರ ಮತದಾರರು, ಸಾವಿರಾರು ಕಾರ್ಯಕರ್ತರು ನನ್ನ ಪರವಾಗಿದ್ದಾರೆ. ನನ್ನ ಸ್ಫರ್ಧೆ ಖಚಿತ ಎಂದು ತಿಳಿಸಿದರು.
ಸ್ಥಳೀಯರಿಗೇ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿಯಲ್ಲಿ ಬಿಜೆಪಿಯ ಹಲವಾರು ಮುಖಂಡರು ಸಭೆ ನಡೆಸಿ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ