Kannada NewsLatest

ಅವಶ್ಯ ಬಿದ್ದಲ್ಲಿ ಪ್ರವಾಹ ಪ್ರದೇಶಕ್ಕೆ ಸೇನಾ ನೆರವು

ಅವಶ್ಯ ಬಿದ್ದಲ್ಲಿ ಪ್ರವಾಹ ಪ್ರದೇಶಕ್ಕೆ ಸೇನಾ ನೆರವು

ಪ್ರಗತಿವಾಹಿನಿ ಸುದ್ದಿ, ಮಾಂಜರಿ:

ನೆರೆಯ ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಇದರಿಂದ ಗಡಿ ಭಾಗದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಮೂರು ನದಿಗಳಿಂದ ಶನಿವಾರ ಎರಡು ಅಡಿಯಷ್ಟು ನೀರು ಹೆಚ್ಚಳವಾಗಿದೆ.
ನದಿ ಪಾತ್ರದ ಗ್ರಾಮಗಳ ಜನರು ಹೆಚ್ಚಾಗಿ ತೋಟಪಟ್ಟಿ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ. ದಿನದಿಂದ ದಿನಕ್ಕೆ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬರುವುದರಿಂದ ಜನರು ಭಯಬೀತರಾಗಿದ್ದಾರೆ. ನದಿ ನೀರು ಒಡಲು ದಾಟಿ ಜಮೀನುಗಳು ಮತ್ತು ತಗ್ಗು ಪ್ರದೇಶಕ್ಕೆ ನುಗ್ಗಿದ್ದರಿಂದ ಪ್ರವಾಹ ಬೀತಿ ಎದುರಾಗಿದೆ.
ಮಹಾರಾಷ್ಟ್ರ ಸಾತಾರ ಜಿಲ್ಲೆಯ ಕೊಯ್ನಾ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಆಣೆಕಟ್ಟಿನಿಂದ ಶನಿವಾರದಿಂದ ೧೩೫೦೦ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟಿದ್ದು, ಕೃಷ್ಣಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹ ಎದುರಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.
ಉಪವಿಭಾಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಕೆಲವೊಂದು ರಸ್ತೆ, ಸೇತುವೆಗಳು ಜಲಾವೃತಗೊಂಡಿದ್ದು, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಹಿರಿಯ ಅಧಿಕಾರಿಗಳು ಜನರ ಮನಮೋಲಿಸಲು ನದಿ ಪಾತ್ರದಲ್ಲಿ ಬಿಡುಬಿಟ್ಟಿದ್ದಾರೆ.
ಈಗಾಗಲೇ ಮಹಾರಾಷ್ಟ್ರ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಮಳೆ ನೀರಿನಿಂದ ಕೃಷ್ಣಾ ನದಿಗೆ ೨.೫ ಲಕ್ಷ ಕ್ಯೂಸೆಕ್ ನೀರು ಹರಿದುಬರಲಾರಂಭಿಸಿದೆ. ಕೊಯ್ನಾ ಜಲಾಶಯ ಭರ್ತಿ ಹಂತದಲ್ಲಿರುರುವುದರಿಂದ ಮಹಾರಾಷ್ಟ್ರ ಸರ್ಕಾರ ಅಪಾರ ಪ್ರಮಾಣ ನೀರನ್ನು ಕೃಷ್ಣಾ ನದಿಗೆ ಹರಿದು ಬಿಡುವ ಮನ್ಸೂಚನೆ ನೀಡಿದೆ. ಹೀಗಾಗಿ ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳು ನದಿ ತೀರದ ತಗ್ಗು ಪ್ರದೇಶಗಳ ಗ್ರಾಮಗಳಿಗೆ ಭೇಟಿ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ.

ಇದನ್ನೂ ಓದಿ – ಪ್ರವಾಹ ಭೀತಿ: ಜನ, ಜಾನುವಾರಗಳ ಸ್ಥಳಾಂತರಕ್ಕೆ ಸೂಚನೆ

ಕೃಷ್ಣಾ ನದಿ ತಟದಲ್ಲಿರುವ ಕಲ್ಲೋಳ, ಯಡೂರ, ಮಾಂಜರಿ, ಇಂಗಳಿ, ಯಡೂರವಾಡಿ, ಹೊಸಯಡೂರ ಪ್ರದೇಶಗಳಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಯಡೂರವಾಡಿ ಗ್ರಾಮದ ದೋಣಿ ತೋಟ ಮತ್ತು ಕಮತೆ ತೋಟ ಸಂಪೂರ್ಣವಾಗಿ ನಡುಗಡ್ಡೆಯಾಗಿ ಪರಿಣಮಿಸಿದೆ. ಈ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಡಾ||ಸಂತೋಷ ಬಿರಾದಾರ, ಎ.ಎಸ್.ಪಿ ಮಿಥುನಕುಮಾರ ಭೋಟ ಮೂಲಕ ಹೋಗಿ ಶೀಘ್ರವಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಸೂಚನೆ ನೀಡಿದ್ದಾರೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ಪ್ರಮುಖ ನದಿ ತೀರದ ಗ್ರಾಮಗಳಿಗೆ ಭೆಟಿ
ಮಳೆ ನೀರು ಹಾಗೂ ಕೊಯ್ನಾ ಜಲಾಶಯದಿಂದ ಬರುವ ಅಪಾರ ಪ್ರಮಾಣ ನೀರಿನಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನ ಅಧಿಕಾರಿಗಳೊಂದಿಗೆ ಸಹಕಾರ ನೀಡಿ ಸುರಕ್ಷಿತ ಸ್ಥಳಗಳಿಗೆ ಬರಬೇಕೆಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿದರು.

ಇದನ್ನೂ ಓದಿ – ಕೃಷ್ಣಾ ನದಿ ಭಾಗದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಭೇಟಿ

ಶನಿವಾರ ತಾಲೂಕಿನ ಮಾಂಜರಿ, ಯಡೂರ, ಇಂಗಳಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಕೃಷ್ಣಾ ನದಿ ನೀರಿನ ಮಟ್ಟವನ್ನು ಅವಲೋಕಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ನೀರು ಹರಿದು ನದಿಗೆ ಬರುತ್ತಿದೆ. ಕೊಯ್ನಾ ಜಲಾಶಯದಿಂದ ೧೩೫೦೦ ಕ್ಯೂಸೆಕ್ ನೀರು ಹರಿದುಬರಲಾರಂಭಿಸಿದೆ. ಹೀಗಾಗಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂದರು.
ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನಿದ ನೆರೆಯ ಉಂಟಾದರೆ ಜನರ ರಕ್ಷಣೆಗೆ ೨೩ ಭೋಟ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಎಸ್‌ಡಿಆರ್‌ಎಫ್ ತುಕಡಿ, ಒಂದು ಎನ್‌ಡಿಆರ್‌ಎಫ್ ತುಕಡಿ ಬಂದಿದೆ. ಅವಶ್ಯ ಬಿದ್ದಲ್ಲಿ ಸೇನಾ ತುಕಡಿ ಕರೆಯಿಸಿಕೊಳ್ಳಲಾಗುತ್ತದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ವ್ಯಾಪ್ತಿಯ ಎಂಟು ಕಡೆಗಳಲ್ಲಿ ವಾಸ ಮಾಡುವ ತೋಟಪಟ್ಟಿ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ರವಿಂದ್ರ ಕರಲಿಂಗನ್ನವರ, ಎಎಸ್‌ಪಿ ಮಿಥುನಕುಮಾರ, ತಹಶೀಲ್ದಾರ ಡಾ||ಸಂತೋಷ ಬಿರಾದಾರ ಮುಂತಾದವರು ಇದ್ದರು.

ಇಂಗಳಿ ಗ್ರಾಮದಲ್ಲಿ ಗಂಜಿ ಕೇಂದ್ರ ಆರಂಭ:

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮಳಿ ಭಾಗ ಜನವಸತಿ ಪ್ರದೇಶದಲ್ಲಿ ಕೃಷ್ಣಾ ನದಿ ನೀರು ನುಗ್ಗಿದ್ದರಿಂದ ಅಲ್ಲಿಯ ೧೮೮ ಕುಟುಂಬಗಳನ್ನು ತಾಲೂಕಾಡಳಿತ ಸ್ಥಳಾಂತರ ಮಾಡಿದ್ದು, ಅವರಿಗೆ ಸ್ಥಳೀಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಗಂಜಿ ಕೇಂದ್ರ ತೆಗೆದು ಅವರಿಗೆ ಊಟ ಉಪಚಾರವನ್ನು ಒದಗಿಸಿದೆ.

ಇದನ್ನೂ ಓದಿ – ಪ್ರವಾಹ ಮುನ್ನೆಚ್ಚರಿಕೆ ಕ್ರಮ; ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button