ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ತಮ್ಮ ಸಹೋದರ ಭಾಗಿ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಡಾ.ಅಶ್ವತ್ಥ ನಾರಾಯಣ, ಇದೊಂದು ಆಧಾರ ರಹಿತ ಆರೋಪ. ನಾನು ಕಳಂಕರಹಿತ, ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವತ್ಥನಾರಾಯಣ, ಪಿಎಸ್ ಐ ಅಕ್ರಮದಲ್ಲಿ ಸಚಿವರ ಸಹೋದರ ಭಾಗಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ಹುರುಳಿಲ್ಲ. ಯಾವ ವ್ಯಕ್ತಿ ಯಾರಿಗೆ ಕರೆ ಮಾಡಿ ತನಿಖೆಗೆ ತಡೆದಿದ್ದಾರೆ? ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಅನಗತ್ಯವಾಗಿ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಕಾಂಗ್ರೆಸ್ ನಾಯಕರು ವ್ಯವಸ್ಥಿತ ಷಡ್ಯಂತ್ರ ನಡೆಸಿ ಈ ರೀತಿ ಮಸಿ ಬಳಿಯುವ ಕೆಲಸ ಮಾಡುತ್ತಿದೆ ಎಂದು ಗುಡುಗಿದರು.
ನಾನಾಗಲಿ, ನನ್ನ ಕುಟುಂಬವಾಗಲಿ ಯಾವುದೇ ಭ್ರಷ್ಟಾಚಾರ ನಡೆಸಿಲ್ಲ, ನಮ್ಮದು ಅಂತಹ ರಾಜಕಾರಣವಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಉಗ್ರಪ್ಪ ಕಡು ಭ್ರಷ್ಟರು. ಮುಂದಿನ ದಿನಗಳ್ಲಲಿ ಅವರ ಬಂಡವಾಳ ಬಯಲು ಮಾಡುತ್ತೇನೆ ಎಂದರು.
ನನ್ನ ಕುಟುಂಬದ ಬಗ್ಗೆ ಯಾವ ಆಧಾರದ ಮೇಲೆ ಆರೋಪ ಮಾಡಿದರು? ಸತೀಶ್ ಬಗ್ಗೆ ದಾಖಲೆ ನೀಡಿದ್ದಾರೆಯೇ? ನಮ್ಮ ವಿರುದ್ಧ ಆರೋಪ ಸತ್ಯಕ್ಕೆ ದೂರವಾದದ್ದು. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆದು ವರದಿ ಬರಲಿ. ಅಕ್ರಮ ನಡಿಸಿದವರಿಗೆ ಶಿಕ್ಷೆಯಾಗಲಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬುದು ನಮ್ಮ ಆಗ್ರಹ ಕೂಡ ಆಗಿದೆ ಎಂದು ಹೇಳಿದರು.
ಪಿಎಸ್ ಐ ಹುದ್ದೆ ಅಕ್ರಮ; ಸಚಿವ ಅಶ್ವತ್ಥನಾರಾಯಣ ವಿರುದ್ಧ ನೇರ ಆರೋಪ ಮಾಡಿದ ವಿ.ಎಸ್.ಉಗ್ರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ