Latest

ಅವ್ಯವಹಾರ ನಡೆದಿದ್ದರೆ ರಾಜೀನಾಮೆಗೆ ಸಿದ್ಧ ಎಂದ ಸಚಿವ ಶ್ರೀರಾಮುಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ನೀಡಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು ಕೊವಿಡ್ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಒಂದು ವೇಳೆ ಒಂದು ರೂ ಅವ್ಯವಹಾರ ನಡೆದಿದ್ದೇ ಆದರೂ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ವೆಂಟಿಲೇಟರ್ ಒಂದರಲ್ಲೇ 120 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಸಿದ್ಧರಾಮಯ್ಯ ಹೇಳುತ್ತಾರೆ. ಈವರೆಗೂ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್ ಖರೀದಿಯಾಗಿದೆ. ಪಿಪಿಇ ಕಿಟ್​ಗಳಿಗೆ 48.65 ಕೋಟಿ ಆಗಬೇಕಿತ್ತು. ಆದರೆ, ಪಿಪಿಇ ಕಿಟ್‌ನಲ್ಲೂ ಕೆಲವೊಂದು ಕಾಂಪೋನೆಂಟ್ ಇರುತ್ತದೆ ಎಂದು ಹೇಳಿದರು.

ವೆಂಟಿಲೇಟರ್​​​​ ತಾಂತ್ರಿಕತೆಯ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ.ನಿಂದ 50-60 ಲಕ್ಷ ರೂ. ಮೌಲ್ಯದ ವೆಂಟಿಲೇಟರ್​​ ಖರೀದಿ ಮಾಡಲಾಗಿದೆ. ಬರೀ ನಾಲ್ಕು ಲಕ್ಷದ ಬೆಲೆಯ ವೆಂಟಿಲೇಟರ್​ ಖರೀದಿ ಮಾಡಿಲ್ಲ. ಹಾಗೆಯೇ ಕೇವಲ ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗೆ 18 ಲಕ್ಷ ವೆಚ್ಚ ತಗುಲಿದೆ ಎಂದರು.

ಕೇವಲ 4 ಕಾಂಪೋನೆಂಟ್ ಇರುವ ಕಿಟ್ ಸಾಲಲ್ಲ ಎಂದು ವೈದ್ಯರು ಹೇಳಿದ್ದರು. 6 ಕಾಂಪೋನೆಂಟ್ ಇರುವ ಕಿಟ್ ಬೇಕು ಎಂದಿದ್ದರು. ಅದನ್ನು ತಯಾರು ಮಾಡಲು ಮುಂದಾಗಿದ್ದೆವು. 1 ಲಕ್ಷ ಕಿಟ್ ತಯಾರು ಮಾಡಲು ಆರ್ಡರ್ ಪ್ಲೇಸ್ ಮಾಡಿದ್ದೆವು. ಈವರೆಗೂ ಅದು 40 ಸಾವಿರ ಕಿಟ್ ಮಾತ್ರ ಕೊಟ್ಟಿದ್ದಾರೆ. ನಾವು ಬಹಳ ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಕಿಟ್ ಬೇಕು ಅಂದರು. ಚೀನಾ, ಸಿಂಗಾಪುರ್‌ನಿಂದ ಕಿಟ್ ಖರೀದಿ ಮಾಡಿದ್ದೇವೆ. 3 ಕಂಪನಿಯಿಂದ 10 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ. ಮೊದಲು ಇದರ ಬೆಲೆ ಇದ್ದಿದ್ದು ಬೇರೆ, ಈಗಿನ ದರ ಬೇರೆ. ಈವರೆಗೂ 9 ಲಕ್ಷದ 65 ಸಾವಿರ ಖರೀದಿ ಮಾಡಿದ್ದೇವೆ ಎಂದು ತಿಳಿಸಿದರು.

ಪಿಪಿಇ ಕಿಟ್‌ಗೆ 79,35,16,816 ರೂ. ಖರ್ಚು ಆಗಿದೆ. ಇದರಲ್ಲಿ 150 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಾವುದೇ ಅವ್ಯವಹಾರ ನಡೆದಿಲ್ಲ. ದಾಖಲೆಗಳಿದ್ದರೆ ತೋರಿಸಲಿ ಎಂದು ಹೇಳಿದರು.

ಇನ್ನು N-95 ಮಾಸ್ಕ್ ಖರೀದಿ 156 ರೂಪಾಯಿಗೆ ಖರೀದಿ ಮಾಡಿದ್ದೇವೆ. ಬೇರೆ ಕಡೆಗಳಿಂದ ಒಟ್ಟು N-95 ಮಾಸ್ಕ್ ಖರೀದಿಗೆ 11,51,58,226 ರೂ. ಖರ್ಚಾಗಿದೆ. ಸರ್ಜಿಕಲ್ ಗ್ಲೌಸ್‌ನಲ್ಲೂ ಅವ್ಯವಹಾರ ಆಗಿದೆ ಎಂದಿದ್ದಾರೆ. ಸರ್ಜಿಕಲ್ ಗ್ಲಾಸ್‌ಗೆ ಕೇರಳದ ಕಂಪನಿಯಿಂದ 8 ರೂ. 10 ಪೈಸೆಗೆ ಕೊಡುತ್ತೇವೆ ಅಂದಿದ್ದರು. ಅದರೆ ಅವರು ನಮಗೆ ಕೊಡಲಿಲ್ಲ ಎಂದರು.

ಬೆಂಗಳೂರಿನ ಕಂಪನಿಯೊಂದಕ್ಕೆ ಆರ್ಡರ್ ಕೊಟ್ಟಿದ್ದೇವೆ. ಒಂದು ಗ್ಲೌಸ್​​ 9 ರೂ. 50 ಪೈಸೆಗೆ ಕೊಡುತ್ತೇವೆ ಎಂದು ಕಂಪಿನಿ ತಿಳಿಸಿದೆ. ಹೀಗಾಗಿ 3 ಲಕ್ಷ ಗ್ಲೌಸ್ ಆರ್ಡರ್ ಕೊಟ್ಟಿದ್ದೇವೆ. 50 ಸಾವಿರ ಗ್ಲೌಸ್ ಮಾತ್ರ ಕೊಟ್ಟಿದ್ದಾರೆ. ಸರ್ಜಿಕಲ್ ಗ್ಲೌಸ್ ಈವರೆಗೂ 30 ಸಾವಿರ ತೆಗೆದುಕೊಂಡಿದ್ದೇವೆ. 28 ಲಕ್ಷದ 50 ಸಾವಿರ ಮಾತ್ರ ಸರ್ಜಿಕಲ್ ಗ್ಲೌಸ್ ಖರೀದಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button