ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ರವಿವಾರ (ಆ.೧೫) ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು.
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಆಕರ್ಷಕ ಪಥಸಂಚಲನ:
ಕವಾಯತ ಕಮಾಂಡರ್ ಆಡಿವೆಪ್ಪ ಎಸ್ ವಾರದ ಹಾಗೂ ಸಹಾಯಕ ಕವಾಯತ ಕಮಾಂಡರ್ ಎ.ಎಸ್ ಬೂದಿಗೊಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ಜರುಗಿತು. ಸಿಎಆರ್, ಕೆಎಸ್‌ಆರ್‌ಪಿ, ಸಶಸ್ತ್ರ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಕರ್ನಾಟಕ ಅಗ್ನಿ ಶಾಮಕದಳ, ಜಿಲ್ಲಾ ಅಬಕಾರಿ ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ ಹಾಗೂ ಪೊಲೀಸ್ ಬ್ಯಾಂಡ್ ತಂಡದವರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಕೋವಿಡ್ ವಾರಿಯರ‍್ಸ್‌ಗೆ ಸನ್ಮಾನ:
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೭೫ ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಕೊರೊನಾ ಸಂದರ್ಭದಲ್ಲಿ ಉತ್ತಮ ಸೇವೆಗೈದ ವೈದ್ಯಕೀಯ ಇಲಾಖೆಯ ಸಿಬ್ಬಂದಿ ಹಾಗೂ ಮತ್ತಿತರ ಕೋವಿಡ್ ವಾರಿಯರ‍್ಸ್‌ಗಳಿಗೆ ಪುಸ್ತಕ ನೀಡಿ ಗೌರವಿಸಿದರು.
ಡಾ. ಜಯಾನಂದ ಧನ್ವಂತ ಡಾ. ಪ್ರದೀಪ ಭಜಂತ್ರಿ, ಲ್ಯಾಬ್ ಟೆಕ್ನಿಶಿಯನ್ ಪ್ರತಿಮಾ ಹೆಚ್, ಕಮ್ಯುನಿಟಿ ಸೇಪ್ಟಿ ಆಫಿಸರ್ ಅನಿತಾ ಜಿ ಗಾಣಗಿ ಮತ್ತು ಸಮಾಜಮುಖಿ ಕಾರ್ಯಕರ್ತರಾದ ಸೋನಾಲಿ ಡೊಲೇಕರ್, ಮಲ್ಲೇಶಿ ಚಿಕ್ಕರಪ್ಪ ಹಾಗೂ ಆಶಾ ಕಾರ್ಯಕರ್ತೆಯರಾದ ಸವಿತಾ ಡೋಲೆಕರ್, ಗೀತಾ ಕುರುಬರ ಅವರಿಗೆ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೊಜನೆಯಯಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕಕಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೆ.ಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಎಮ್ ಆರ್ ಸಿ ಬೆಳಗಾವಿ ಈ ಆರೋಗ್ಯ ಸಂಸ್ಥೆಗಳಿಗೂ ಕೂಡ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸಂಸದರಾದ ಮಂಗಲಾ ಅಂಗಡಿ, ಶಾಸಕರಾದ ಅನಿಲ್ ಬೆನಕೆ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ಡಾ.ಕೆ. ತ್ಯಾಗರಾಜನ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ ಹೆಚ್. ವಿ. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್‌ಓ ಡಾ.ಎಸ್.ವಿ.ಮುನ್ಯಾಳ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಚಿವರ ಸಂದೇಶ:
75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾಗೂ ಇಲ್ಲಿ ನೆರೆದಿರುವ ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲೆಯ ಸಮಸ್ತ ಚುನಾಯಿತ ಜನಪ್ರತಿನಿಧಿಗಳು, ಗಣ್ಯಮಾನ್ಯರು, ಎಲ್ಲಾ ಆಮಂತ್ರಿತರು, ಅಧಿಕಾರಿ ವರ್ಗದವರು, ನಾಗರಿಕ ಬಂಧುಗಳು ಮತ್ತು ಮಾಧ್ಯಮದ ಸ್ನೇಹಿತರೇ ತಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಎಂದರೆ ಸ್ವಾಭಿಮಾನ. ತಮ್ಮ ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಇಂತಹ ಸ್ವಾಭಿಮಾನವನ್ನು ತಂದುಕೊಟ್ಟ ಮಹನೀಯರನ್ನು ಇಂದು ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸಬೇಕು.
ಬ್ರಿಟೀಷರ ಕಪಿಮುಷ್ಠಿಯಿಂದ ಅವರ ದರ್ಪ, ದೌರ್ಜನ್ಯದಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಹೆಸರಿಸಲಾಗದ ಅಸಂಖ್ಯಾತ ನಮ್ಮ ಬಂಧು-ಬಾಂಧವರು ಹೋರಾಡಿದ್ದಾರೆ. ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಆತ್ಮಾರ್ಪಣೆಯ ಪ್ರತಿಫಲದಿಂದ ನಾವಿಂದು ಸ್ವತಂತ್ರ ಭಾರತದಲ್ಲಿದ್ದೇವೆ.
ತ್ಯಾಗ, ಬಲಿದಾನ, ಧೈರ್ಯ, ಶೌರ್ಯ, ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿಜೀ, ನೇತಾಜಿ ಸುಭಾಷ್ಚಂದ್ರ ಭೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ಸಿಂಗ್, ಚಂದ್ರಶೇಖರ ಆಜಾದ್, ವೀರಸಾವರ್ಕರ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಪಂಡಿತ್ ಜವಾಹರಲಾಲ್ ನೆಹರು ಅವರಂತಹ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಶುದ್ಧ ಮನಸ್ಸಿನಿಂದ ನೆನೆಪಿಸಿಕೊಳ್ಳುವ ಶುಭ ಸಂದರ್ಭವಿದು.
ಅಹಿಂಸೆ ಎಂಬ ಅಸ್ತ್ರವನ್ನು ಬಳಸಿ ಭಾರತವನ್ನು ಬ್ರಿಟೀಷರಿಂದ ಬಂಧಮುಕ್ತಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೋರಾಟ ಇಡೀ ಜಗತ್ತಿಗೆ ಮಾದರಿ. ಇಂದಿಗೂ ಇಡೀ ಜಗತ್ತಿನ ಪ್ರೀತಿ, ಗೌರವ ಆದರ ಅಭಿಮಾನಗಳಿಗೆ ಪಾತ್ರರಾಗುತ್ತಲೇ ಇರುವ ರಾಷ್ಟ್ರಪಿತನ ನಾಡಿನಲ್ಲಿ ಜನಿಸಿರುವ ನಾವೇ ಪುಣ್ಯವಂತರು, ಭಾಗ್ಯವಂತರು.
ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರು ಇತಿಹಾಸ ಮರೆತವರು ಭವಿಷ್ಯವನ್ನು ಸೃಷ್ಠಿಸಲಾರರು ಎಂದ ಮಾತು ಎಲ್ಲ ಕಾಲಕ್ಕೂ ನಮಗೆ ಮಾರ್ಗದರ್ಶಿಯಾಗುತ್ತಲೇ ಇರುತ್ತದೆ.
ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅಖಂಡತೆಯನ್ನು ಪ್ರತಿಪಾದಿಸುವ ನಮ್ಮ ದೇಶ ಸಾಮರಸ್ಯದ ಬದುಕಿಗೆ ಹೆಸರುವಾಸಿ. ಭಾರತ ಮಾತೆಯ ತನುಜಾತೆಯಾದ ಕರ್ನಾಟಕವು ಇದಕ್ಕೆ ಹೊರತಾಗಿಲ್ಲ ಎಂಬುದು ಅಷ್ಟೇ ಸತ್ಯ.
ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಪ್ರಮುಖವಾಗಿದೆ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣ ಯಲ್ಲಿತ್ತು.
ಕಿತ್ತೂರು ರಾಣ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದ್ದು, ಅಜರಾಮರವಾಗಿದೆ. ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣ ಯಲ್ಲಿದ್ದ ಮತ್ತೊಬ್ಬ ಮಹನೀಯರು ಶ್ರೀ ಗಂಗಾಧರರಾವ್ ದೇಶಪಾಂಡೆ. ಕರ್ನಾಟಕದ ಸಿಂಹ ಹಾಗೂ ಕರ್ನಾಟಕದ ಖಾದಿ ಭಗೀರಥ ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರು ನಮಗೆ ಆದರ್ಶಪ್ರಾಯರು/ ಸದಾ ಪ್ರಾಥಃಸ್ಮರಣರು.
ಭವ್ಯ ಪರಂಪರೆ, ಇತಿಹಾಸ ಹೊಂದಿರುವ ಭಾರತದ, ಕರ್ನಾಟಕದ ಇತಿಹಾಸವನ್ನು ಮೆಲಕುಹಾಕುತ್ತ, ವರ್ತಮಾನದಲ್ಲಿ ನಿಂತು, ಭೂತಕಾಲವನ್ನು ನೆನೆಯುತ್ತ, ಭವಿಷತ್ನ್ನು ಕಟ್ಟಿಕೊಳ್ಳುವುದರತ್ತ ಸನ್ನದ್ಧರಾಗೋಣ. ಸ್ವಾತಂತ್ರ್ಯ ದೊರೆತು 75 ವರ್ಷಗಳ ಸಂದಿರುವ ಈ ಶುಭ ಸಂದರ್ಭದ ಸವಿನೆನಪಿನಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 12, 2021 ರಂದು ಸ್ವಾತಂತ್ರ್ಯ ಮಹೋತ್ಸವದ ಘೋಷಣೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ದಿನಾಂಕ 15.8.2023 ರವರೆಗೆ ಆಚರಿಸಲಾಗುವುದು. ಮಾನ್ಯ ಪ್ರಧಾನಮಂತ್ರಿಗಳು ಉದ್ಘಾಟನಾ ಭಾಷಣದಲ್ಲಿ ಉಲ್ಲೇಖಿಸಿದ 5 ಆಧಾರಸ್ಥಂಬಗಳಾದ ಸ್ವಾತಂತ್ಯ ಸಂಗ್ರಾಮ, 75ರ ಆಲೋಚನೆಗಳು, 75ರ ಸಾಧನೆಗಳು, 75ರ ಕಾರ್ಯಯೋಜನೆಗಳು ಹಾಗೂ ೭೫ರ ಸಂಕಲ್ಪಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಕನಸುಗಳು ಹಾಗೂ ಕರ್ತವ್ಯಗಳನ್ನು ಮುನ್ನಡೆಸಲು ಮಾರ್ಗಸೂತ್ರಗಳಾಗಿವೆ.
ಈ ಮಹೋತ್ಸವದ ಮುಖ್ಯ ಉದ್ದೇಶ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪ್ರತಿಯೊಂದು ಪ್ರಮುಖ ಕ್ಷಣವನ್ನು ಸ್ಮರಿಸುವುದು ಹಾಗೂ ಭಾರತಸಂವಿಧಾನದ ಮೂಲಕ ಪ್ರಜಾತಂತ್ರದ ಬೇರುಗಳನ್ನು ಬಲಪಡಿಸುವ ಹೊಸದೃಷ್ಠಿಕೋನದೊಂದಿಗೆ ಭವಿಷ್ಯವನ್ನು ರೂಪಿಸುವುದಾಗಿದೆ. ಸ್ವಾತಂತ್ರ್ಯದ ಹೋರಾಟದ ಪ್ರಮುಖ ಕ್ಷಣಗಳನ್ನು ಚಿರಸ್ಥಾಯಿಯಾಗಿಸಲು ಹಾಗೂ ಯುವ ಪೀಳಿಗೆಯಲ್ಲಿ ದೇಶಪ್ರೇಮವನ್ನು ಉತ್ತೇಜಿಸಲು ಅಮೃತ ಮಹೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಕರ್ನಾಟಕದ ಮೂರು ಸ್ಥಳಗಳೂ ಸೇರಿದಂತೆ ದೇಶದ ಆಯ್ದ 75 ಸ್ಥಳಗಳಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವ ವರ್ಷಾಚರಣೆಯ ವರ್ಚುವಲ್ ಕಾರ್ಯಕ್ರಮಕ್ಕೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ೭೫ ಸ್ಥಳಗಳ ಪೈಕಿ ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲೂ ಈ ಕಾರ್ಯಕ್ರಮ ನಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಸ್ವಾತಂತ್ರ್ಯ ಅಮೃತ ಮಹೋತ್ಸವದದ ಬಗ್ಗೆ ಅರಿವು ಮೂಡಿಸಲು ಪ್ರಬಂಧ ಸ್ಪರ್ಧೆ, ಬೀದಿ ನಾಟಕ, ಆನ್ಲೈನ್ ವಿನ್ಯಾಸ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಕವನ ವಾಚನಗೋಷ್ಠಿ ನಡೆಸಲು ಹಾಗೂ ಪೋಸ್ಟರ್ಗಳು ಹಾಗೂ ಬ್ಯಾನರ್ಗಳ ಮೂಲಕ ಸ್ವಾತಂತ್ರ್ಯಯೋಧರ ಸಾಧನೆಗಳನ್ನು ಪ್ರದರ್ಶಿಸಲಾಗುವುದು. ಪರಿಸರ ಸಂರಕ್ಷಣೆ, ಜಲಸಂಕ್ಷಣೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಸ್ಪಚ್ಚಭಾರತ ಅಭಿಯಾನದಂತಹ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುವುದು.
ಈ ಅಮೃತ ಮಹೋತ್ಸವದಲ್ಲಿ 130 ಕೋಟಿ ದೇಶವಾಸಿಗಳು ಪಾಲ್ಗೊಂಡು ಲಕ್ಷಾಂತರ ಸ್ವಾತಂತ್ರ್ಯ ಯೋಧರಿಂದ ಸ್ಪೂರ್ತಿ ಪಡೆಯುವರು ಎನ್ನುವ ಭರವಸೆ ಇದ್ದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಾರ್ಪಣೆ ಸಲ್ಲಿಸಲು ಹಾಗೂ ನಮ್ಮ ಕನಸಿನ ಭಾರತವನ್ನು ಕಟ್ಟುವುದಕ್ಕೆ ಸಂಕಲ್ಪ ಮಾಡಲು ಇದು ಉತ್ತಮವಾದ ಮಾರ್ಗವಾಗಿದೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಮಹಾಮಾರಿ ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆಯ ಸವಾಲುಗಳ ನಡುವೆಯೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ.
ಕೊರೋನಾ ವೈರಸ್ ಜಗತ್ತಿನ ಹಲವು ರಾಷ್ಟ್ರಗಳಿಗೆ ವ್ಯಾಪಿಸಿದಂತೆ, ಭಾರತ ದೇಶಕ್ಕೂ ಪ್ರವೇಶಿಸಿ, ಭೀಕರ ಪರಿಣಾಮವನ್ನು ಉಂಟುಮಾಡಿತು. ಜನಪ್ರಿಯ ಹಾಗೂ ಸಮರ್ಥ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರಿಹಾರೋಪಾಯ ಕಾರ್ಯಗಳನ್ನು ಕೈಗೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ.
ಕೊರೊನಾ ಸಂಕಷ್ಟದಿಂದ ಪಾರುಮಾಡಿ, ಸಣ್ಣ, ಅತೀಸಣ್ಣ ಉದ್ಯಮಿಗಳಿಗೆ, ಎಲ್ಲಾ ವರ್ಗದವರ ಏಳಿಗೆಗಾಗಿ, ದೇಶದ ಪ್ರಗತಿಗೆ ಪೂರಕವಾಗಿ ಆತ್ಮನಿರ್ಭರತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ದೇಶದಾದ್ಯಂತ ಜನಮನ್ನಣೆ ಪಡೆಯಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಪರೀಕ್ಷೆ, ಚಿಕಿತ್ಸೆ ಹಾಗೂ ಸೋಂಕಿತರಿಂದ ಸಂಪರ್ಕಕ್ಕೆ ಬಂದವರ ಸಮೀಕ್ಷೆಗಳ ಬಗ್ಗೆ ತೀವ್ರ ನಿಗಾ ಇಟ್ಟು, ವೈರಸ್ ಹರಡದಂತೆ ಕ್ರಮ ಜರುಗಿಸಲಾಗುತ್ತಿದೆ. ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಶ್ರಮಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿದೆ. ಸಂಶಯಾಸ್ಪದ ರೋಗಿಗಳ ಗಂಟಲು ದ್ರವದ ಮಾದರಿ ತಪಾಸಣೆ ಮಾಡಿ, ಸೋಂಕಿತರಿಗೆ ಉಚಿತ ಚಿಕಿತ್ಸೆ ಹಾಗೂ ಉಪಚಾರನ್ನೂ ನೀಡಲಾಗಿದೆ. ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳ ಕಾರ್ಯನಿರ್ವಹಣೆ ಶ್ಲಾಘನೀಯವಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ನಿರ್ಬಂಧ ಜಾರಿಗೊಳಿಸಲಾದ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ಸಾಂಪ್ರದಾಯಿಕ ಕಸುಬು ನಡೆಸುತ್ತಿರುವವರಿಗೆ, ನೇಕಾರರಿಗೆ, ಹೂ, ಹಣ್ಣು ತರಕಾರಿ ಬೆಳೆಗಾರರಿಗೆ, ಕಲಾವಿದರಿಗೆ ಪರಿಹಾರಧನವನ್ನು ನೀಡಲಾಗಿದೆ.
ತಮ್ಮ ಜೀವ ಹಾಗೂ ಕುಟುಂಬದ ಜೀವದ ಹಂಗನ್ನು ತೊರೆದು ಕೋವಿಡ್ ಸೋಂಕಿತರ ಜೀವ ಉಳಿಸಲು ಹಗಲಿರುಳು ಶ್ರಮಿಸಿದ ವೈದ್ಯರು, ಸ್ಟಾಪ್ ನರ್ಸಗಳು, ಸಫಾಯಿ ಕರ್ಮಚಾರಿಗಳು, ಪೊಲೀಸರು ಸೇರಿದಂತೆ ಎಲ್ಲಾ ಕೊವಿಡ್ ವಾರಿಯರ್ಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸ್ಮರಿಸುವುದು ಅಷ್ಟೆ ಪ್ರಸ್ತುತವೆನಿಸುತ್ತದೆ.
ಜಿಲ್ಲೆಯಲ್ಲಿ ಜುಲೈ 22, 2021 ರಿಂದ ಆಗಸ್ಟ್ 5, 2021 ರವರೆಗೆ ಉಂಟಾದ ಅತಿವೃಷ್ಟಿ/ಪ್ರವಾಹದಿಂದ 14 ತಾಲ್ಲೂಕುಗಳ 201 ಗ್ರಾಮಗಳು ಬಾಧಿತಗೊಂಡಿವೆ. 1,50,015 ಜನರನ್ನು ಹಾಗೂ 67,329 ಜಾನುವಾರುಗಳನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಒದಗಿಸಲು ಕಾಳಜಿ ಕೇಂದ್ರಗಳನ್ನು ತೆರೆದು, ಸಂತ್ರಸ್ತರಿಗೆ ಆಶ್ರಯ ಒದಗಿಸಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾನುವಾರುಗಳ ಶಿಬಿರಗಳನ್ನು ತೆರೆದು ಜಾನುವಾರುಗಳಿಗೂ ಆಶ್ರಯ ಕಲ್ಪಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಒಟ್ಟಾರೆ 2800 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು 1,15,661 ಹೆಕ್ಟೇರ್ ಪ್ರದೇಶ ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದ್ದು, ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಭಾರತದ ದೇಶದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 309-ಬಿ ರನ್ವಯ ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಅನ್ವಯವಾಗುವಂತೆ ದೂರದೃಷ್ಠಿ ಯೋಜನೆಯನ್ನು ತಯಾರಿಸಿ ಜನರ ಯೋಜನೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುವುದು. ಸಂಪನ್ಮೂಲ ಗುಚ್ಚದಿಂದ ಆದ್ಯತೆಗನುಗುಣವಾಗಿ ಪ್ರತಿವರ್ಷ ಲಭ್ಯವಾಗುವ ಅನುದಾನಕ್ಕೆ ಅನುಗುಣವಾಗಿ ದೂರದೃಷ್ಠಿ ಯೋಜನೆಯನ್ನು ತಯಾರಿಸಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.
ನನ್ನ ಬೆಳೆ ನನ್ನ ಹಕ್ಕು ಎಂಬ ಘೋಷ್ಯವಾಕ್ಯದೊಂದಿಗೆ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸುವ ಯೋಜನೆಯನ್ನು ಕೃಷಿ ಇಲಾಖೆಯ ವತಿಯಿಂದ ಆರಂಭಿಸಲಾಗಿದೆ.
ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆಯನ್ನು ಈ ಆಪ್ ಮೂಲಕ ಮಾಡಿದ್ದಲ್ಲಿ ಈ ಮಾಹಿತಿಯು ಬೆಳೆ ವಿಮೆ ಪರಿಹಾರ, ಕನಿಷ್ಟ ಬೆಂಬಲ ಬೆಲೆ ಯೋಜನೆ, ಬೆಳೆ ಸಾಲ ಪಡೆಯುವ ಸಂದರ್ಭಗಳಲ್ಲಿ ಹಾಗೂ ಇತರೆ ಪರಿಹಾರಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.
ನೀವು ಕೈಗೊಳ್ಳುವ ಈ ಬೆಳೆ ಸಮೀಕ್ಷೆಯ ವಿವರಗಳು ಪಹಣ ಗಳಲ್ಲಿ ದಾಖಲಾಗುತ್ತದೆ ಹಾಗೂ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಳೆದ ವರ್ಷ ಸಹ ತಾವು ಖುದ್ದಾಗಿ ಬೆಳೆ ಸಮೀಕ್ಷೆ ವಿವರಗಳನ್ನು ಆಪ್ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ತಮಗೆ ಅಭಿನಂದನೆಗಳು.
ರೈತ ಬಂಧುಗಳೇ, ತಾವು ದಾಖಲಿಸುವ ಪ್ರತಿಯೊಂದು ಮಾಹಿತಿಯು ಮಹತ್ವವನ್ನು ಹೊಂದಿರುತ್ತದೆ. ಎಲ್ಲಾ ರೈತರು ಕೂಡಲೇ ಕಾರ್ಯೋನ್ಮುಖರಾಗಿ ರಾಜ್ಯ ಸರ್ಕಾರದ ಈ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ವಿನಂತಿಸಿದೆ. ಕೇಂದ್ರ ಸರ್ಕಾರವು ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಅಧಿಕಾರ ಸ್ವೀಕರಿಸಿದ ತಕ್ಷಣವೇ ರೈತರ ಮಕ್ಕಳಿಗೆ ನೂತನ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ಇದಲ್ಲದೇ ಸಚಿವ ಸಂಪುಟದ ಸಭೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿದ್ದ ಪಿಂಚಣ ಯನ್ನು 1000 ರೂಪಾಯಿಗಳಿಂದ 1200 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, ಇದರಿಂದ 863.52 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದ್ದು, ರಾಜ್ಯದ 35.98 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಅದೇ ರೀತಿ ವಿಧವಾ ವೇತನವನ್ನು ಕೂಡ ರೂ. 600ರಿಂದ 800 ರೂಪಾಯಿಗೆ ಹೆಚ್ಚಿಸಲಾಗಿದ್ದು, ಇದಕ್ಕಾಗಿ 414 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದೆ. 17.25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇನ್ನು ಅಂಗವಿಕಲರ ಮಾಸಿಕ ವೇತನವನ್ನು ಕೂಡ ರೂ.600 ರಿಂದ 800 ರೂಪಾಯಿಗೆ ಹೆಚ್ಚಿಸಲಾಗಿದೆ. ಇದಕ್ಕೆ 90 ಕೋಟಿ ರಊಪಾಯಿ ಹೆಚ್ಚುವರಿ ವೆಚ್ಚವಾಗಲಿದ್ದು, 3.66 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ದೊರಕಲಿದೆ.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಕಂಕಣಬದ್ದವಾಗಿದ್ದು, ಅನೇಕ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾಧನೆಗಳ ವಿವರವನ್ನು ವಿಸ್ತೃತವಾಗಿ ವಿವರಿಸಲು ಹೋಗುವುದಿಲ್ಲ.
ನಾನು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಸವಾಲುಗಳನ್ನು ಮನಗಂಡಿದ್ದೇನೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣ ಕವಾಗಿ ಶ್ರಮಿಸುತ್ತೇನೆ.
ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವತಂತ್ರಗೊಂಡು ಈ 74 ವಸಂತಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕಂತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ವಿಶ್ವದ ಮುಂಚೂಣ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ. ಎಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ