Latest

ರಾಜ್ಯಾದ್ಯಂತ ಗ್ರಾಮ ಪಂಚಾಯತ್ ನೂತನ ಸದಸ್ಯರಿಗೆ ತರಬೇತಿ: ಸಚಿವ ಕೆ.ಎಸ್.ಈಶ್ವರಪ್ಪ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ರಾಜ್ಯದ ಎಲ್ಲಾ 92,131 ಸದಸ್ಯರಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ತರಬೇತಿಯನ್ನು ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 19ರಿಂದ ಮಾರ್ಚ್ 26ರ ವರೆಗೆ ತಾಲೂಕು ಹಂತದಲ್ಲಿ ಹತ್ತು ತಂಡಗಳಲ್ಲಿ ತರಬೇತಿ ನೀಡಲಾಗುವುದು. ರಾಜ್ಯದ 176ತಾಲೂಕುಗಳ 285 ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ. ಕೆಲವು ತಾಲೂಕುಗಳಲ್ಲಿ 2ಕೇಂದ್ರಗಳನ್ನು ತರಬೇತಿಗೆ ಗುರುತಿಸಲಾಗಿದೆ. ತರಬೇತಿಗೆ 900ಸಂಪನ್ಮೂಲ ವ್ಯಕ್ತಿಗಳನ್ನು ಈಗಾಗಲೇ ನಿಯೋಜಿಸಲಾಗಿದ್ದು, ಪ್ರತಿ ತಂಡಕ್ಕೆ 5ದಿನಗಳ ಮುಖಾಮುಖಿ ತರಬೇತಿ ನೀಡಲಾಗುವುದು. ಪ್ರತಿ ತಂಡದಲ್ಲಿ 40ಸದಸ್ಯರಿಗೆ ತರಬೇತಿ ನೀಡಲಾಗುವುದು ಎಂದರು.

ಪ್ರತಿ ದಿನದ ತರಬೇತಿ ಕಾರ್ಯಕ್ರಮ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ನಡೆಯಲಿದೆ. ತರಬೇತಿ ಅವಧಿಯಲ್ಲಿ 15 ವಿವಿಧ ವಿಷಯಾಧಾರಿತ ಅಧಿವೇಶನಗಳು ಮತ್ತು ಕೌಶಲ್ಯಾಧಾರಿತ ಮಾಹಿತಿಗಳನ್ನು ನೀಡಲಾಗುವುದು. ಪ್ರತಿ ಅಧಿವೇಶನದಲ್ಲಿ ವಿಡಿಯೊ ಮೂಲಕ ವಿಷಯ ತಜ್ಞರಿಂದ ಮಾಹಿತಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಮತ್ತು ಗುಂಪು ಚರ್ಚೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಗುವುದು. ಪ್ರತಿ ದಿನ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ಮತ್ತು ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗುವುದು ಎಂದರು.

ತರಬೇತಿಯಲ್ಲಿ ಭಾಗವಹಿಸುವವರು ಬೆಳಿಗ್ಗೆ ಬಂದು ಸಂಜೆ ವಾಪಾಸಾಗುವರು. ಸದಸ್ಯರಿಗೆ ಪ್ರಯಾಣ ಭತ್ಯೆ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಪ್ರತಿದಿನದ ಭಾಗವಹಿಸುವಿಕೆ ಭತ್ಯೆಯನ್ನು ನೀಡಲಾಗುವುದು ಎಂದು ಹೇಳಿದರು.

ನೂತನ ಸದಸ್ಯರಿಗೆ, ಗ್ರಾಮ ಪಂಚಾಯತಿಯ ರಚನೆ ಮತ್ತು ಸ್ವರೂಪ, ಯೋಜನೆಗಳು, ಸದಸ್ಯರ ಕರ್ತವ್ಯ ಮತ್ತು ಹೊಣೆಗಾರಿಕೆಗಳು, ವಾರ್ಡ್ ಮತ್ತು ಗ್ರಾಮಸಭೆ ಇನ್ನಿತರ ಸಭೆಗಳ ನಿರ್ವಹಣೆ, ಹಣಕಾಸು ಸಂಪನ್ಮೂಲ ಲಭ್ಯತೆ, ದೂರದೃಷ್ಟಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕುರಿತು ಮಾಹಿತಿ ಒದಗಿಸುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ. ತರಬೇತಿಗೆ ಅಂದಾಜು 27.16 ಕೋಟಿ ರೂ. ವೆಚ್ಚವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಭರಿಸಲಿದೆ.

ಒಂದು ತಿಂಗಳ ಒಳಗಾಗಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಬಳಿಕ ಅವರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಿಕೆ ಇತ್ಯಾದಿಗಳ ಕುರಿತು ತರಬೇತಿಯನ್ನು ನೀಡಲಾಗುವುದು. ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತರಬೇತಿ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಲಾಗುವುದು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button