Uncategorized

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಟೋ ರ್ಯಾಲಿ: ಆಟೋ ಚಾಲಕರಿಂದ ಅಭೂತಪೂರ್ವ ಬೆಂಬಲ ;   ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಋಣ ನಮ್ಮ ಮೇಲಿದೆ; ಸ್ಥಳೀಯ ಅಭ್ಯರ್ಥಿಗೇ ನಮ್ಮ ಮತ ಎಂದ ಆಟೋ ಚಾಲಕರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಬೆಳಗಾವಿಯಲ್ಲಿ ಆಟೋ ರ್ಯಾಲಿ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ, ಪುತ್ರ ಮೃಣಾಲ ಹೆಬ್ಬಾಳಕರ್ ಪರವಾಗಿ ಆಟೋ ಚಾಲಕರ ಮತ ಯಾಚಿಸಿದರು.

ಈ ವೇಳೆ ಆಟೋ ಚಾಲಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಾವ್ಯಾರೂ ಹುಬ್ಬಳ್ಳಿಗೆ ಹೋಗಾಂಗಿಲ್ರಿ, ನಾವೇನಿದ್ರೂ ಬೆಳಗಾವಿಯಲ್ಲೇ ಇರ್ತೀವಿ, ಕುವೆಂಪು ನಗರಕ್ಕೇ ಬರ್ತೀವಿ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಭರವಸೆ ನೀಡಿದರು.

ಟಿಳಕ ಚೌಕ, ರಾಮದೇವ್ ಹೊಟೆಲ್, ಚನ್ನಮ್ಮ ಸರ್ಕಲ್, ಬೋಗಾರ್ ವೇಸ್, ಚಿತ್ರಾ ಟಾಕೀಸ್, ಗಣೇಶಪುರ ಮೊದಲಾದ ಪ್ರದೇಶಗಳಲ್ಲಿರುವ ಆಟೋ ಸ್ಟ್ಯಾಂಡ್ ಗೆ ಆಟೋದಲ್ಲೇ ತೆರಳಿದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆಟೋ ಚಾಲಕರಿಂದ ಭಾರೀ ಸ್ವಾಗತ, ಬೆಂಬಲ ವ್ಯಕ್ತವಾಯಿತು. ಎಲ್ಲೆಡೆ ಹೂಗುಚ್ಛಗಳನ್ನು ನೀಡಿ ಸಚಿವರನ್ನು ಸ್ವಾಗತಿಸಿದರು.

ಮೃಣಾಲ ಹೆಬ್ಬಾಳಕರ್ ಸ್ಥಳೀಯ ಯುವಕನಿದ್ದು, ಕೆಲಸ ಮಾಡುವ ಉತ್ಸಾಹ ಹೊಂದಿದ್ದಾನೆ. ಬೆಳಗಾವಿಯವನಾಗಿದ್ದು, ಬೆಳಗಾವಿಯಲ್ಲೇ ಇದ್ದು ಕೆಲಸ ಮಾಡಲಿದ್ದಾನೆ. ಆಯ್ಕೆಯಾದ ನಂತರವೂ ನಿಮ್ಮ ಕೈಗೆ ಸಿಗಲಿದ್ದಾನೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಬೆಳಗಾವಿಯ ಸ್ವಾಭಿಮಾನ ಎತ್ತಿ ಹಿಡಿಯೋಣ. ಒಟ್ಟಾಗಿ ಬೆಳಗಾವಿ ಅಭಿವೃದ್ಧಿ ಮಾಡೋಣ ಎಂದು ಹೆಬ್ಬಾಳಕರ್ ಮನವಿ ಮಾಡಿದರು.

ಸಚಿವರ ಮನವಿಗೆ ಸ್ಪಂದಿಸಿದ ಆಟೋ ಚಾಲಕರು, ನೀವೇನೂ ಚಿಂತೆ ಮಾಡಬೇಡಿ ಮೇಡಮ್, ನಾವೆಲ್ಲ ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದೇವೆ. ಹಿಂದೆ ಬಿಜೆಪಿ ಬೆಂಬಲಿಸಿದವರು ಸಹ ಈ ಬಾರಿ ಹೊರಗಿನ ಅಭ್ಯರ್ಥಿ ಹಾಕಿರುವುದನ್ನು ವಿರೋಧಿಸಿ ಸ್ಥಳೀಯ ಅಭ್ಯರ್ಥಿಗೇ ಬೆಂಬಲ ನೀಡಲಿದ್ದಾರೆ. ಖಂಡಿತ ನಿಮ್ಮ ಪುತ್ರ ಮೃಣಾಲ ಹೆಬ್ಬಾಳಕರ್ ಹೆಚ್ಚಿನ ಬಹುಮತದಿಂದ ಆಯ್ಕೆಯಾಗಲಿದ್ದಾರೆ ಎಂದು ಅಭಯ ನೀಡಿದರು.

ಸಚಿವರೊಬ್ಬರು ಆಟೋ ನಿಲ್ದಾಣಗಳಿಗೆ, ಆಟೋದಲ್ಲೇ ಬಂದಿರುವುದನ್ನು ನೋಡಿ ಆಟೋ ಚಾಲಕರು ಪುಳಕಿತರಾದರು. ಕಾಂಗ್ರೆಸ್ ಸರಕಾರ ತಂದಿರುವ ಗ್ಯಾರಂಟಿ ಯೋಜನೆಗಳು ತಮ್ಮ ಕುಟುಂಬಗಳಿಗೆ ಯಾವ ರೀತಿಯಲ್ಲಿ ನೆರವಾಗುತ್ತಿವೆ ಎನ್ನುವುದನ್ನು ಚಾಲಕರು ಸಚಿವರಿಗೆ ತಿಳಿಸಿ, ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು. ಕಾಂಗ್ರೆಸ್ ಸರಕಾರದ ಋಣ ನಮ್ಮ ಮೇಲಿದೆ. ಬಡವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಖಂಡಿತ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ. ಹಿಂದೆ ಯಾವುದೇ ಸರಕಾರದಿಂದ ನಮ್ಮ ಮನೆ ಬಾಗಿಲಿಗೆ ಈ ರೀತಿಯ ನೆರವು ಬಂದಿರಲಿಲ್ಲ ಎಂದು ಆಟೋ ಚಾಲಕರು ಹೇಳಿದರು.

ಆಟೋ ಚಾಲಕರ ಸಂಘದ ಪ್ರಮುಖರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಅನೇಕ ಪ್ರಮುಖರು ಸಾಥ್ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button