ಬಾಕ್ಸೈಟ್ ರಸ್ತೆ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಲವು ಪ್ರಮುಖ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಾಕ್ಸೈಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಹ್ಯಾದ್ರಿ ನಗರದ ಬಳಿ ಬಾಕ್ಸೈಟ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಸುಮಾರು 2.50 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಯ ಕಾಮಗಾರಿ ನಡೆಯಲಿದೆ. ಈ ರಸ್ತೆ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ ಮತ್ತು ನಿರಂತರ ಭಾರೀ ವಾಹನ ಸಂಚಾರವಿರಲಿದೆ. ಹಾಗಾಗಿ ಗುಣಮಟ್ಟದ ಕಾಮಗಾರಿ ನಡೆಯಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಮಹಾನಗರದ ಈ ಪ್ರದೇಶಗಳ ಅಭಿವೃದ್ಧಿಗೆ ಪ್ರಸ್ತುತ 45 ಕೋಟಿ ರೂ. ಗಳನ್ನು ರಾಜ್ಯ ಸರಕಾರದಿಂದ ತರಲಾಗಿದೆ. ಮಹಾನಗರದ ರಸ್ತೆಗಳಿಗೆ ಸರಿಸಮನಾಗಿ ಬಡಾವಣೆಗಳ ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತರುವ ಮೂಲಕ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ವಿವಿಧ ಕಾಲೋನಿಗಳ ಮುಖಂಡರು, ಟಿ.ಕೆ.ಪಾಟೀಲ, ಕಾಮನಗೌಡರ್, ಜೇಡಗಿ, ಬಸವರಾಜ ಡೂಗನವರ್, ಪುಡಕಲಕಟ್ಟಿ, ಮುಸ್ತಾಕ್ ಮುಲ್ಲಾ, ದೇಸಾಯಿ, ಸಂಗೀತಾ ತಂಗಡಿ , ವನಿತಾ ಗೊಂದಳಿ, ಡಾ.ನರಹಟ್ಟಿ ಸೇರಿದಂತೆ ರಹವಾಸಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ