*ರೈತರ ಅನುಕೂಲಕ್ಕಾಗಿ ತಕ್ಷಣದಿಂದಲೇ ನೀರು ಬಿಡಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶ* *ಮಲಪ್ರಭಾ ನೀರಾವರಿ ಸಲಹಾ ಸಮಿತಿ ಸಭೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರೈತರ ಅನುಕೂಲಕ್ಕಾಗಿ, ಅವರ ಬೆಳೆಗಳನ್ನು ರಕ್ಷಿಸಲು ತಕ್ಷಣದಿಂದಲೇ ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದ್ದಾರೆ.
ಭೆಳಗಾವಿ ಉತ್ತರ ವಲಯ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಶುಕ್ರವಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಸಚಿವರು, ರೈತರು ಖುಷಿಯಾಗಿದ್ದರೆ ದೇಶವೇ ಖುಷಿಯಾಗಿರುತ್ತದೆ. ನಾವೆಲ್ಲ ಖುಷಿಯಾಗಿರುತ್ತೇವೆ. ಹಾಗಾಗಿ ರೈತರ ಅನುಕೂಲಕ್ಕಾಗಿ ಇಂಂದಿನಿಂದಲೇ ಕಾಲುವೆಗಳಿಗೆ ನೀರನ್ನು ಹರಿಬಿಡಲಾಗುವುದು. ಕೊನೆಯವರೆಗೆ ತಲುಪುವವರೆಗು ನೀರು ಹರಿಯಲಿದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದರು.
ಈವರೆಗೆ ಉತ್ತಮ ಮಳೆಯಾಗಿದೆ. ಮುಂದೆ ಕೂಡ ರೇಣುಕಾ ಯಲ್ಲಮ್ಮನ ಕೃಪೆಯಿಂದ ಉತ್ತಮ ಮಳೆಯಾಗಲಿದೆ ಎಂದು ಆಶಿಸೋಣ. ಕುಡಿಯುವ ನೀರಿನ ಪ್ರಮಾಣ ಉಳಿಸಿಕೊಂಡು, ನೀರಾವರಿಗಾಗಿರುವ 4 ಟಿಎಂಸಿ ನೀರಿನಲ್ಲಿ ಕೊನೆಯ ಹಂತದವರೆಗೂ ತಲುಪುವವರೆಗೆ ನಿಲ್ಲಿಸದೆ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದರು.

ರೈತರು ಬೆಳೆ ರಕ್ಷಣೆಗಾಗಿ ನೀರು ಬಿಡುವಂತೆ ಕೋರಿದ್ದರು. ಹಾಗಾಗಿ ಸಲಹಾ ಸಮಿತಿ ಸಭೆ ನಡೆಸಿದ್ದೇನೆ. ರೈತ ಮುಖಂಡರು, ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಬಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ರೈತರಿಗೆ ಎಲ್ಲ ದೃಷ್ಟಿಯಿಂದ ಅನುಕೂಲವಾಗಬೇಕೆನ್ನುವುದು ನಮ್ಮ ಉದ್ದೇಶ. ಮುಂದೆ ಕೂಡ ಉತ್ತಮ ಮಳೆಯಾಗಲಿದೆ ಎನ್ನುವ ಆಶಾಭಾವನೆ ಇದೆ ಎಂದು ಅವರು ಹೇಳಿದರು.
ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ರೈತರ ಹಾಗೂ ನಮ್ಮೆಲ್ಲರ ಮನವಿಗೆ, ಭಾವನೆಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ತಕ್ಷಣ ನೀರು ಬಿಡುಗಡೆಗೆ ಆದೇಶ ನೀಡಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಶಾಸಕ ಬಿಬಿ ಚಿಮ್ಮನಕಟ್ಟಿ, ಮಹಾಮಂಡಳಿ ಅಧ್ಯಕ್ಷ ಸದುಗೌಡ ಪಾಟೀಲ, ಪ್ರಭಾರಿ ಪ್ರಾದೇಶಕ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿ ಮಹ್ಮದ್ ರೋಷನ್, ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಸುಪರಿಂಟೆಂಡೆಂಟ್ ಎಂಜಿನಿಯರ್ ಲಕ್ಷ್ಮಣ ನಾಯಕ, ಎಸ್.ಬಿ.ಮಲ್ಲಿಗವಾಡ, ಮುದಿಗೌಡರ್ ಮೊದಲಾದವರು ಇದ್ದರು.