Belagavi NewsBelgaum NewsKannada NewsKarnataka NewsLatestPolitics

*ಮೊದಲ ಚುನಾವಣೆಯಲ್ಲೇ ಗೆದ್ದಿದ್ದ ಹೊಸ ವಿಷಯ ಬಹಿರಂಗಪಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್!*

​ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದ ಒಬ್ಬ ದಿಟ್ಟ ಮಹಿಳೆ ಎಂದು ಹೆಸರು ಮಾಡಿದವರು. ರಾಜ್ಯದ ಪ್ರಸ್ತುತ ಸರಕಾರದ ಏಕೈಕ ಮಹಿಳಾ ಮಂತ್ರಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಇಲಾಖೆಯ ಹೆಸರನ್ನು ಮುಂಚೂಣಿಗೆ ತಂದವರು. ಅತೀ ದೊಡ್ಡ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮೀಯನ್ನು ಮನೆ ಮನೆಗೆ ಯಶಸ್ವಿಯಾಗಿ ಮುಟ್ಟಿಸಿದವರು. ನಿರಂತರ ಕ್ರಿಯಾಶೀಲತೆಯಂದ ಹೆಸರು ಮಾಡಿದವರು.

ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

1. ನಿಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಲ್ಲಿ ಆಗಿರುವ ದೊಡ್ಡ ಬದಲಾವಣೆ ಏನು?

2023ರ ವಿಧಾ​ನಸಭೆ ಚುನಾವಣೆಗೂ ಮೊದಲು ರಾಜ್ಯದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದರು. ಅದಕ್ಕೂ ಮೊದಲು ಬಂದಿದ್ದ ಕರೊನಾದಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದರು. ಜನರನ್ನು ಸ್ಪಲ್ವವಾದರೂ ಸಂಕಷ್ಟದಿಂದ ಪಾರು ಮಾಡಬೇಕೆಂಬ ಉದ್ದೇಶದಿಂದ ಚುನಾವಣೆ ಪೂರ್ವ ನಾವು ಪಂಚ ಗ್ಯಾರಂಟಿ  ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಅದರ ಪ್ರಕಾರ, ನಮ್ಮ ಸರ್ಕಾರ ಬಂದ ತಕ್ಷಣ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆವು, ಅವುಗಳಲ್ಲಿ ಅತ್ಯಂತ ಪ್ರಮುಖ ಯೋಜನೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವ ಹೊಣೆ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಇಲಾಖೆಗೆ ಬಂತು. 

Home add -Advt

ಈ ಮಾದರಿ ಯೋಜನೆ ಅತ್ಯಂತ ಹೊಸದು, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಯೋಜನೆ 2023ರ ಆಗಸ್ಟ್ ತಿಂಗಳಲ್ಲಿ ಜಾರಿಗೊಳಿಸಲಾಯಿತು. ಕಳೆದ ಎರಡು ವರ್ಷದಲ್ಲಿ ಯೋಜನೆ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದೆ. ವಿಶೇಷವಾಗಿ ಮಹಿಳೆಯರ ಸ್ವಾವಲಂಬನೆಯ ನಮ್ಮ ಕನಸು ಮತ್ತು ಉದ್ದೇಶ, ಈಡೇರುವತ್ತ ಸಾಗುತ್ತಿರುವುದು ಬಹಳ ಖುಷಿ ತಂದಿದೆ. 

ಇದರಿಂದ ಬಹಳಷ್ಟು ಮಹಿಳೆಯರು ಬೇರೆ ಬೇರೆ ಯೋಜನೆಗಳಿಗೆ ಹಣವನ್ನು ಬಳಸುವ ಮೂಲಕ ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಲು ಮುಂದಾಗಿದ್ದಾರೆ, ಕೆಲವು ಮಹಿಳೆಯರು ತಮ್ಮ ಸೊಸೆಯಂದಿರಿಗೆ ಅಂಗಡಿಗಳನ್ನು ಹಾಕಿಕೊಟ್ಟಿದ್ದಾರೆ. ಕೆಲವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಕುತ್ತಿದ್ದಾರೆ. ಕೆಲವರು ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಯಬಾಗದ ಮಹಿಳೆಯೊಬ್ಬಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುವಂತೆ ಗ್ರಂಥಾಲಯವನ್ನೇ ಸ್ಥಾಪಿಸಿದ್ದಾರೆ. ಕೆಲವೆಡೆ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಹಣ ನೀಡಿದ್ದಾರೆ. ಮಹಿಳೆಯೊಬ್ಬರು ಊರಿಗೆಲ್ಲಾ ಹೋಳಿಗೆ ಊಟ ಹಾಕಿಸಿದ್ದಾರೆ. ಯೋಜನೆಯ ಸಾರ್ಥಕತೆ ಹೇಳುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ. ಒಟ್ಟಾರೆ ಹೇಳುವುದಾದರೆ, ಯೋಜನೆ ಅತ್ಯಂತ ಯಶಸ್ಸಿಯಾಗಿದೆ. 

2. ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿಲ್ಲ ಎನ್ನುವ ಆರೋಪವಿದೆಯಲ್ಲಾ?

ಮೊದಲೇ ಹೇಳಿದಂತೆ ಇದೊಂದು ಈ ಮಾದರಿಯ ಮೊದಲ ಯೋಜನೆ, ದೊಡ್ಡ ಯೋಜನೆ ಜಾರಿಗೊಳಿಸುವಾಗ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಸಾಧ್ಯವಾದಷ್ಟು ಅವುಗಳನ್ನು ಪರಿಹರಿಸುವ ವ್ಯವಸ್ಥೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಅದಾಗ್ಯೂ ಅಲ್ಪಸ್ವಲ್ಪ ವಿಳಂಬವಾಗುವುದು ಸಹಜ. ವಿವಿಧ ಹಂತಗಳನ್ನು ದಾಟಿ ಯೋಜನೆ ಜಾರಿಯಾಗಬೇಕಾಗಿರುವುದರಿಂದ ಕೆಲವು ತಿಂಗಳು ಸ್ವಲ್ಪ ವಿಳಂಬವಾಗಬಹುದು. ಆದರೆ, ಅಂಥ ದೊಡ್ಡ ಸಮಸ್ಯೆಯೇನು ಇಲ್ಲ. ನಮ್ಮ ಬದ್ಧತೆಯಲ್ಲಿ ಯಾವುದೇ ಅನುಮಾನ ಬೇಡ.

3. ಸರ್ಕಾರದ ಬಳಿ ಗೃಹಲಕ್ಷ್ಮೀ ಯೋಜನೆಗೆ ಕೊಡಲು ಹಣ ಇಲ್ಲ. ಖಜಾನೆ ಖಾಲಿಯಾಗಿದೆ ಅಂತಾ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ನಿಜಾನಾ?

ವಿರೋಧ ಪಕ್ಷಗಳು, ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ, ಈ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಅಪಪ್ರಚಾರ ಮಾಡಿದ್ದವು, ನಂತರ ನಾವು ಯೋಜನೆಯನ್ನು ಜಾರಿಗೊಳಿಸಿದಾಗ ಮೂರು ತಿಂಗಳೂ ನಡೆಯುವುದಿಲ್ಲ ಎಂದಿದ್ದರು. 138 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರೂ ಈ ಸರ್ಕಾರ 6 ತಿಂಗಳು ನಡೆಯುವುದಿಲ್ಲ ಎಂದಿದ್ದರು. ಅವರ ನಿರಂತರ ಅಪಪ್ರಚಾರದ ಮಧ್ಯೆಯೂ ನಮ್ಮ ಸರ್ಕಾರ ಯಶಸ್ವಿಯಾಗಿ ನಡೆಯುತ್ತಿದೆ, ಗೃಹಲಕ್ಷ್ಮಿ ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ನಡೆಸುತ್ತಿ​ದ್ದೇವೆ. 

4. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ‘ಗೃಹಲಕ್ಷ್ಮಿ ಸಂಘ’ಗಳನ್ನು ಸ್ಥಾಪಿಸಲಾಗುವುದು ಅಂತಾ ತಿಳಿಸಿದ್ದೀರಿ? ಏನು ಅದರ ಉದ್ದೇಶ? ಯಾವಾಗ ಶುರುವಾಗುತ್ತೆ?

ಗೃಹಲಕ್ಷ್ಮಿ ಯೋಜನೆಯ ಆರಂಭದ ಉದ್ದೇಶವೇ ಮಹಿಳೆಯರ ಆರ್ಥಿಕ ಸ್ವಾವಲಂಬನೆ. ಆದರೆ, ಕೇವಲ 2000 ರೂಪಾಯಿ ಕೊಟ್ಟರೆ, ಮಹಿಳೆಯರು ಪೂರ್ತಿಯಾಗಿ ಸ್ವಾವಲಂಬಿಯಾಗಲು ಸಾಧ್ಯವಿಲ್ಲ. ಹೀಗಾಗಿ ಈ ಹಣದಿಂದ ಅವರ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆರಂಭಿಸಬೇಕು, ಮಹಿಳೆಯರನ್ನು ಆರ್ಥಿಕವಾಗಿ ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಕನಸಿನೊಂದಿಗೆ ಗೃಹಲಕ್ಷ್ಮಿ ಸಂಘಗಳನ್ನು ಸ್ಥಾಪಿಸುವತ್ತ ಹೆಜ್ಜೆಇಟ್ಟಿದ್ದೇನೆ.​ ಪ್ರತಿ ಸಂಘದಲ್ಲಿ7ರಿಂದ 15 ಸದಸ್ಯರಿರುತ್ತಾರೆ. ಈ ಬಗ್ಗೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್​ ತಿಂಗಳಲ್ಲಿ ಅಂಗನವಾಡಿಗಳ ಸುವರ್ಣ ಮಹೋತ್ಸವ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಗೃಹಲಕ್ಷ್ಮೀ ಸಂಘಗಳನ್ನೂ ಉದ್ಘಾಟಿಸಲಾಗುವುದು.

5. ಸರ್ಕಾರ ಮಹಿಳೆಯರಿಗೆ ದುಡ್ಡು ಕೊಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿಕೊಟ್ಟಿದೆ. ಇದರಿಂದ ಮಹಿಳೆಯರು ಪುರುಷರ ಮಾತನ್ನು ಕೇಳುತ್ತಿಲ್ಲ. ಮನೆ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಕ್ಷುಲ್ಲಕ ಮಾತುಗಳು ಕೇಳಿಬರುತ್ತಿವೆ. ಸರ್ಕಾರ ಎಲ್ಲವನ್ನು ಮಹಿಳೆಯರಿಗೆ ಮಾಡುತ್ತಿದೆ. ಪುರುಷರಿಗೆ ಏನು ಕೊಡುತ್ತಿಲ್ಲ ಎನ್ನುವ ಆರೋಪ ಇದೆ. ಇದರ ಬಗ್ಗೆ ಏನು ಹೇಳುತ್ತೀರಿ?

ಇಂಥಹ ಮಾತುಗಳು ಸ್ತ್ರೀ ವಿರೋಧಿಗಳು ಆಡುವ ಮಾತುಗಳು. ಪಂಚ ಗ್ಯಾರಂಟಿ ಯೋಜನೆಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮವಾದ ಒಂದೇ ಒಂದು ಉದಾಹರಣೆ ಇಲ್ಲ. ವಿರೋಧ ಪಕ್ಷದವರು ಅನಗತ್ಯವಾಗಿ ಸುಳ್ಳು​ ಸುದ್ದಿಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ, ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆ ನಡುವೆ ಜಗಳ ಆಗುತ್ತೆ ಎಂದು ಹೇಳಿರಲಿಲ್ಲವೇ? ಆದರೆ, ಹಲವೆಡೆ ಅತ್ತೆಯರೇ ಮುಂದೆ ನಿಂತು, ಸೊಸೆಗೆ ಅಂಗಡಿಗಳನ್ನು ಹಾಕಿಕೊಟ್ಟ ಉದಾಹರಣೆಗಳಿವೆ. ಅತ್ತೆ ಸೊಸೆ ಜೊತೆಯಾಗಿ ಬಸ್‌ಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ಭದ್ರವಾಗುತ್ತಿದೆ, ಹಾಗೆಯೇ ಅವರ ಸಂಬಂಧವೂ ಗಟ್ಟಿಯಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ​ ಕೊಟ್ಟರೆ ಅದು ಸಹಜವಾಗಿಯೇ ಪುರುಷರ ಆರ್ಥಿಕತೆಯನ್ನೂ ಬಲಪಡಿಸುತ್ತದೆ. ​ಮಹಿಳೆಯರಿಗೆ ಹಣ ಕೊಟ್ಟರೆ ಅದು ಕುಟುಂಬಕ್ಕೆ ಕೊಟ್ಟಂತೆ ಅಲ್ಲವೇ?

6.​ ಗೃಹಲಕ್ಷ್ಮಿಯೂ ಸೇರಿದಂತೆ ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಕೆಲವರು ವಿರೋಧ  ಮಾಡುತ್ತಿದ್ದಾರೆ, ವ್ಯಂಗ್ಯ​ವಾಡ್ತಿದ್ದಾರೆ. ಅಂಥವರ ಬಗ್ಗೆ ನಿಮ್ಮ ಅನಿಸಿಕೆ ಏನು?

ಆರೋಪಗಳು ಸಾಯುತ್ತವೆ, ಸಾಧನೆಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎನ್ನುವುದಕ್ಕೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳೇ ಸಾಕ್ಷಿ. ಹೀಗಾಗಿ ಕ್ಷುಲ್ಲಕ ಆರೋಪಗಳು, ವ್ಯಂಗ್ಯ ಇವೆಲ್ಲಾ ಅರ್ಥ ಕಳೆದುಕೊಂಡಿವೆ. ಯೋಜನೆಯ ಯಶಸ್ಸಿನ ಕಥೆಗಳೇ ಇದಕ್ಕೆಲ್ಲಾ ಉತ್ತರ ಹೇಳುತ್ತಿವೆ. 

7.​  ​ ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?

ಮಹಿಳೆಯರು ಹೆಚ್ಚು ರಾಜಕೀಯ, ಅಷ್ಟೇ ಅಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎನ್ನುವುದು ಮೊದಲಿನಿಂದಲೂ ನನ್ನ ಪ್ರತಿಪಾದನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರು, ರಾಜಕೀಯಕ್ಕೆ ಬರುತ್ತಾರೆ, ಅಧಿಕಾರಕ್ಕೂ ಏರುತ್ತಾರೆ ಎನ್ನುವ ವಿಶ್ವಾಸವಿದೆ. ಆ ದಿಸೆಯಲ್ಲಿ ಪಕ್ಷದ ವರಿಷ್ಠರ ಜೊತೆಗೂ ಮಾತನಾಡುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತೆಯರಿಗೂ ಸಲಹೆ, ಸಹಕಾರ ನೀಡಲು ಸಿದ್ಧನಿದ್ದೇನೆ.

​ನಾನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದಾಗನಿಂದಲೂ ಮಹಿಳೆಯರ ಸಂಘಟನೆ, ಮಹಿಳೆಯರು ರಾಜಕೀಯಕ್ಕೆ ಬರುವುದನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇನೆ. ರಾಜಕೀಯಕ್ಕೆ ಬರಲು ಆಸಕ್ತಿ ಇರುವ ಮಹಿಳೆಯರಿಗೆ ಎಲ್ಲಾ ರೀತಿಯ ಮಾರ್ಗದರ್ಶನ, ಸಹಕಾರ ನೀಡುತ್ತಾ ಬಂದಿದ್ದೇನೆ. 

​ 10. ನಿಮ್ಮ ಇಲಾಖೆಯಲ್ಲಿ ನಿಮ್ಮ ಸಹೋದರ, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಹಸ್ತಕ್ಷೇಪ ಜಾಸ್ತಿ ಎನ್ನುವ ಆರೋಪಗಳಿವೆ?

ನಮ್ಮ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಚನ್ನರಾಜ್ ಕೂಡ ಒಬ್ಬ ಜನಪ್ರತಿನಿಧಿ, ಅದರಲ್ಲೂ ನನ್ನ ಸಹೋದರ ಕೂಡ. ಸಹಜವಾಗಿ ನನ್ನೊಂದಿಗೆ ಓಡಾಡುವುದು. ಕೆಲವೊಂದು ಸಲಹೆಗಳನ್ನು ಕೊಡುವುದು ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಹಸ್ತಕ್ಷೇಪ ಎನ್ನುವುದು ಸರಿಯಲ್ಲ. ಯಾರಿಂದಲೇ ಒಳ್ಳೆಯ ಸಲಹೆಗಳು ಬಂದರೂ ಅದನ್ನು ಸಕರಾತ್ಮಕವಾಗಿ ಸ್ವೀಕರಿಸುವ ಜಾಯಮಾನ ನನ್ನದು. ​ಆದರೆ ಯಾರಿಗೂ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ.

​ 12. ಪಂಚಮಸಾಲಿ ಮೀಸಲಾತಿ ಹೋರಾಟ ಎಲ್ಲಿಗೆ ಬಂತು? ಹೋರಾಟದ ಮುಂಚೂಣಿಯಲ್ಲಿದ್ದ ಸ್ವಾಮೀಜಿಗಳು ಒಂದು ರಾಜಕೀಯ ಪಕ್ಷದ ವಕ್ತಾರರಂತೆ, ಒಬ್ಬ ನಾಯಕನ ಹಿಂಬಾಲಕರಂತೆ ಮಾತನಾಡ್ತಾರೆ. ಇದರಿಂದ ನಿಮ್ಮ ಹೋರಾಟಕ್ಕೆ ಹಿನ್ನಡೆಯಾಯಿತಾ?

 ಸಮಾಜದ ಪರವಾಗಿ ಸ್ವಾಮೀಜಿಗಳ ಹೋರಾಟವನ್ನು ನಾನು ಹಿಂದಿನಿಂದಲೂ ಬೆಂಬಲಿಸುತ್ತಾ ಬಂದಿದ್ದೇನೆ​,​ಮುಂದೆಯೂ ಹೊರಾಟದಲ್ಲಿ ಪಾಲ್ಗೊಳ್ಳುತ್ತೇನೆ. ಹೋರಾಟ ತಾತ್ಕಾಲಿಕವಾಗಿ ​ನಿಂತಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಖಂಡಿತ​ ಮುಂದುವರಿಯುತ್ತದೆ, ಯಶಸ್ವಿಯಾಗುತ್ತ​ದೆ ಎನ್ನುವ ವಿಶ್ವಾಸವಿದೆ. 

13.ಜಾತಿ ಜನಗಣತಿ ಜಾರಿ ಮಾಡುವುದರ ಬಗ್ಗೆ ನಿಮ್ಮ ನಿಲುವೇನು?

ಜಾತಿ ಜನಗಣತಿ ವಿಷಯವಾಗಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ.​ ಮುಖ್ಯಮಂತ್ರಿಗಳ ನಿಲುವೇ ನಮ್ಮೆಲ್ಲರ ನಿಲುವು ಕೂಡ. ಮುಖ್ಯಮಂತ್ರಿಗಳ ಸೂಚನೆಯಂತೆ ಈ ಕುರಿತು ನಮ್ಮ ಸಮಾಜದ ಎಲ್ಲಾ ಸಚಿವರು ಸೇರಿ ಲಿಖಿತವಾಗಿಯೂ ಅಭಿಪ್ರಾಯ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಯಾವುದೇ ಗೊಂದಲವಿಲ್ಲದೇ, ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. 

14. ನೀವು ಒಂದ್ಸಲ ಸಿದ್ದರಾಮಯ್ಯ ಅವರನ್ನು ನಿಮ್ಮ ಹೆಂಡತಿಯನ್ನು ಪರಿಚಯ ಮಾಡಿಸಿ ಸಾರ್ ಎಂದಿದ್ದೀರಿ. ಮಾಡಿಸಿದ್ರಾ? ನೀವು ಸಿದ್ದರಾಮಯ್ಯ ಅವರ ಶ್ರೀಮತಿ ಅವರನ್ನ ನೋಡಿದ್ದೀರಾ? ಮಾತನಾಡಿಸಿದ್ದೀರಾ?

ಸಿದ್ದರಾಮಯ್ಯ ನಮ್ಮ ಕರ್ನಾಟಕದ ರಾಜಕೀಯ ಧುರೀಣ.​  ಎರಡು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ಅವರ ಪತ್ನಿ ಸಮಾರಂಭಕ್ಕೆ ಬರಲಿಲ್ಲ. ಹೀಗಾಗಿ ಸಹಜವಾಗಿ ಅವರನ್ನು ಭೇಟಿಯಾಗಬೇಕು ಎನಿಸಿತು. ಒಮ್ಮೆ ಅವರನ್ನು ಭೇಟಿ ಮಾಡ್ಸಿ, ಪರಿಚಯ ಮಾಡ್ಸಿ ಸರ್ ಅಂತ ಕೇಳಿದ್ವಿ.​ ಅವರು ಹೊರಗೆ ಬರುವುದೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ನೋಡೋಣ, ಒಮ್ಮೆ ಭೇಟಿ ಮಾಡಿಸಬಹುದು.

15. ನೀವು ಫಸ್ಟ್ ಟೈಮ್ ಎಲೆಕ್ಷನ್ ಎದುರಿಸಿದ್ದು ಸ್ಕೂಲ್ ಮಾನಿಟರ್ ಪೋಸ್ಟ್ ಗೆ ಅಂತಾ ಕೇಳಿದ್ದೀನಿ. ನಿಜಾನಾ? ರಿಸಲ್ಟ್ ಏನಾಗಿತ್ತು?

ಹೌದು, ನನಗೆ ಶಾಲಾ ದಿನಗಳಲ್ಲೇ ರಾಜಕೀಯ, ಸಾಮಾಜಿಕ ಕ್ಷೇತ್ರದ ಬಗ್ಗೆ ತುಂಬಾ ಆಸಕ್ತಿ ಇತ್ತು.​ ಆಗ 4ನೇ ತರಗತಿಯಲ್ಲಿದ್ದೆ. ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಸ್ಫರ್ಧಿಸಿ ಗೆದ್ದಿದ್ದೆ.​ ಶಾಲೆ ಶಿಸ್ತು ಸಮಿತಿಗೆ ಆಯ್ಕೆಯಾಗಿದ್ದೆ.

​ 17. ಹೆತ್ತವರು ತಮಗಾಗುವ ಸೋಲು-ಹಿನ್ನಡೆಗಳನ್ನು ಸಹಿಸಿಕೊಳ್ತಾರೆ. ತಮ್ಮ ಮಕ್ಕಳು ಯಾವಾಗಲೂ ಗೆಲ್ಲಬೇಕು, ಉನ್ನತ ಸ್ಥಾನದಲ್ಲಿರಬೇಕು ಅಂತಾ ಬಯಸುತ್ತಾರೆ. ನಿಮ್ಮ ಮಗ ಮೃಣಾಲ್ ಸೋತಾಗ ಆಗ ನಿಮ್ಮ ಮನಸ್ಥಿತಿ ಹೇಗಿತ್ತು? 

ಹೌದು, ಮಗನ ಸೋಲು ಬೇಸರ ತರಿಸಿದೆ ನಿಜ. ಯಾವ ತಾಯಿಯೂ ಮಗನ ಸೋಲನ್ನು ಬಯಸುವುದಿಲ್ಲ. ನನ್ನ ಹಾಗೆಯೇ ನನ್ನ ಮಗ ಕೂಡ ಜನರೊಂದಿಗೆ ಬೆರೆಯುತ್ತಾನೆ. ನಾನು ಎರಡು ಚುನಾವಣೆಗಳಲ್ಲಿ ಸೋತು,​ ನಂತರ ಸತತ ಎರಡು ಬಾರಿ ಗೆದ್ದು ಈಗ ಮಂತ್ರಿಯಾಗಿದ್ದೇನೆ. ನನ್ನ ಮಗನಿಗೂ ಒಳ್ಳೆಯ ದಿನಗಳು ಬರುತ್ತವೆ.​ ಸೋತಾಗ ಕುಗ್ಗಬಾರದು. ಸೋಲೇ ಗೆಲುವಿನ ಸೋಪಾನ ಎಂದು ತಿಳಿದು ಮುಂದಡಿ ಇಡಬೇಕು ಎಂದು ಮಗನಿಗೂ ಧೈರ್ಯ ತುಂಬಿದ್ದೇನೆ.

​ 

Related Articles

Back to top button