Belagavi NewsBelgaum NewsKannada NewsKarnataka NewsLatest

*ಸ್ವತಃ ಮುಂದೆ ನಿಂತು ಗುಂಡಿ ಮುಚ್ಚುವ ಕಾರ್ಯ ಮಾಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್* *ಸಚಿವರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ; ಮೇಲ್ಮನೆ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಾಥ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಳೆಯಿಂದಾಗಿ ತೀವ್ರವಾಗಿ ಹದಗೆಟ್ಟಿರುವ ಬೆಳಗಾವಿ – ಬಾಚಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಚಾಲನೆ ನೀಡದರು. 

ಬೆಳಗಾವಿ ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಕುದ್ರೆಮನಿ ಗ್ರಾಮದವರೆಗಿನ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಸುಮಾರು 15 ದಿನದ ಹಿಂದೆ ಈ ರಸ್ತೆಯ ದುಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರು. ಅದರಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ರಾತ್ರೋರಾತ್ರಿ ಸ್ಥಳ ಪರಿಶೀಲನೆ ನಡೆಸಿ, ತುರ್ತಾಗಿ ಗುಂಡಿಗಳನ್ನು ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದರು.

 ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು ಓಡಾಡುವ, ಹಿಂಡಲಗಾ -ಸುಳಗಾ -ತುರಮರಿ -ಬಾಚಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. 

 ಭಾನುವಾರ ಸ್ವತಃ ಸ್ಥಳಕ್ಕೆ ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಕೂಡ ಆಗಮಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಹ ಸಚಿವರಿಗೆ ಸಾಥ್ ನೀಡಿದರು.

ಹಿಂಡಲಗಾದಿಂದ ಬಾಚಿ ವರೆಗಿನ ಎಲ್ಲ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಸಚಿವರು ಚಾಲನೆ ನೀಡಿದರು, ಈ ರಸ್ತೆಯ ಪುನರ್ ನಿರ್ಮಾಣಕ್ಕೆ 15 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ. ಮಳೆಗಾಲ ಮುಗಿದ ತಕ್ಷಣ ಕೆಲಸ ಆರಂಭಿಸಬೇಕು. ಅಲ್ಲಿಯವರೆಗೆ ಜನರಿಗೆ ಅನಾನುಕೂಲವಾಗಬಾರದೆನ್ನುವ ಕಾರಣಕ್ಕೆ ತುರ್ತಾಗಿ ಗುಂಡಿಗಳನ್ನು ಮುಚ್ಚಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಸೂಚಿಸಿದರು. 

ವಾಹನ ಸಂಚಾರ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ರಸ್ತೆ ಹಾಳಾಗಿದೆ. ಹಾಗಾಗಿ ಒಂದೇ ಒಂದು ಗುಂಡಿ ಕೂಡ ಉಳಿಯದಂತೆ ಮುಚ್ಚಬೇಕು. ಗುಣಮಟ್ಟ ಕಾಯ್ದುಕೊಂಡು, ಸಮಯ ಮಿತಿಯಲ್ಲಿ ಕೆಲಸ ಮಾಡಬೇಕು. ಸಾರ್ವಜನಿಕರು, ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ರಸ್ತೆ ದುರಸ್ತಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ವಿಳಂಬವಿಲ್ಲದೆ ಕೆಲಸ ಮಾಡಬೇಕು. ಸಾರ್ವಜನಿಕರಿಂದ ಯಾವುದೇ ರೀತಿಯ ದೂರು ಬಾರದಂತೆ ಕೆಲಸ ಪೂರ್ಣಗೊಳಿಸಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

ಈ ವೇಳೆ ​ ಪಿ.ಡಬ್ಲ್ಯೂ.ಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೊಬರದ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಶಿಕಾಂತ ಕೋಳೆಕರ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. ತಾವೇ ಸ್ವತಃ ಆಗಮಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಲ್ಲದೆ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button