Kannada NewsKarnataka NewsLatest

ಸಾರ್ವಜನಿಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ, ಉಡುಪಿ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದಾದ್ಯಂತ ಏಕಕಾಲದಲ್ಲಿ ನಡೆದ ‘ಜನತಾ ದರ್ಶನ’ ಕಾರ್ಯಕ್ರಮ ಕೃಷ್ಣನಗರಿ ಉಡುಪಿ ಜನರಿಗೆ ಸರಕಾರದ ಮೇಲೆ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆದೇಶದ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೋಮವಾರ ನಡೆದ ಜನತಾದರ್ಶನ ಕಾರ್ಯಕ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು. ಸುಮಾರು 145 ಅಹವಾಲುಗಳು ಬಂದಿದ್ದವು. ಸುಮಾರು 100 ಕ್ಕೂ ಅಧಿಕ ಅಹವಾಲುಗಳನ್ನು ಸ್ವತಃ ಸಚಿವರೇ ಆಲಿಸಿದರು. ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಜನರಲ್ಲಿ ಮೂಡಿದ ಮಂದಹಾಸ:
ಇಲಾಖಾವಾರು ಅಧಿಕಾರಿಗಳೊಂದಿಗೆ ಒಬ್ಬೊಬ್ಬರನ್ನೇ ಭೇಟಿಯಾಗಿ ಅಹವಾಲನ್ನು ಸ್ವೀಕರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಸಮಾಧಾನಚಿತ್ತದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಟೋಕನ್ ನಿಯಮದಂತೆ ಒಬ್ಬೊಬ್ಬರೇ ಬಂದು ಸಚಿವರ ಬಳಿ ಸಮಸ್ಯೆ ಹೇಳಿಕೊಂಡರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ -ಅಧಿಕಾರಿಗಳಿಂದ ಸಮಾಧಾನಕರ ಸ್ಪಂದನೆ ವ್ಯಕ್ತವಾಯಿತು. ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಜನತಾದರ್ಶನದಲ್ಲಿ ಕೆಲವೊಂದು ಪ್ರಕರಣಗಳಿಗೆ ಸ್ಥಳದಲ್ಲೆ ಪರಿಹಾರ ಸೂಚಿಸಿದ ಸಚಿವರು, ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ಮಧ್ಯಾಹ್ನದೊಳಗೆ ಸ್ಥಳಕ್ಕೆ ಭೇಟಿ:
ಉಡುಪಿ ತಾಲೂಕಿನ ಬುಡಗಬೆಟ್ಟು ಗ್ರಾಮದ ಮಾಧವ ವಾಗ್ಲೆ ಅವರು 5 ಸೆಂಟ್ಸ್ ಜಮೀನಿನಲ್ಲಿ ಮನೆ ಹೊಂದಿದ್ದು, ತಮ್ಮ ಹೆಸರಿಗೆ ಖಾತೆ ಪಹಣಿ, ಹೊಂದಿದ್ದು ಅಲ್ಲೆ ವಾಸಿಸುತ್ತಿದ್ದಾರೆ. ಮನೆ ರಿಪೇರಿಗೆ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮಾಧವ ವಾಗ್ಲೆ ಅವರು ಜನತಾದರ್ಶನದಲ್ಲಿ ಸಚಿವರ ಗಮನಕ್ಕೆ ತಂದರು. ಸ್ಥಳ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಮಧ್ಯಾಹ್ನದೊಳಗೆ ಅರಣ್ಯ ಅಧಿಕಾರಿಗಳು ಅರ್ಜಿದಾರರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಕ್ಕುಪತ್ರ ವಿತರಣೆ:
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಡಿಸಿ ಮನ್ನಾ ಜಾಗವನ್ನು ಕೃಷಿಗಾಗಿ ನಾಲ್ವರು ರೈತರಿಗೆ ಹಕ್ಕುಪತ್ರವನ್ನು ಸಚಿವರು ವಿತರಿಸಿದರು.
ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಸಚಿವರಿಗೆ ಅಧಿಕಾರಿಗಳು ಸಾಥ್:
ಸಚಿವರ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಉಪ ವಿಭಾಗಧಿಕಾರಿ ರಶ್ಮಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.

ಮುಂದಿನ ಜನತಾದರ್ಶನದಲ್ಲೂ ಫಾಲೋಅಪ್:
ಸೋಮವಾರ ನಡೆದ ಮೊದಲ ಜನತಾ ದರ್ಶನದ ಅರ್ಜಿಗಳ ವಿಲೇವಾರಿ ಹಾಗೂ ಪ್ರಗತಿ ಕುರಿತಂತೆ ಮುಂದಿನ ತಿಂಗಳು ನಡೆಯಲಿರುವ ಜನತಾ ದರ್ಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಮುಂದಿನ ಜನತಾ ದರ್ಶನದ ಆರಂಭಿಕ 30 ನಿಮಿಷ ಈ ಕುರಿತು ಚರ್ಚಿಸುವುದಾಗಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button