*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಭಾನುವಾರ ಬೆಳಗ್ಗೆ ಹೆಬ್ಬಾಳಕರ್ ಅವರು ಬಿಡುಗಡೆಯಾಗಿ ಮನೆಗೆ ತೆರಳಲಿದ್ದಾರೆ. ಕಳೆದ 12 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಜನೆವರಿ 14ರಂದು ಬೆಂಗಳೂರಿನಿಂದ ಬರುವಾಗ ಕಿತ್ತೂರು ಸಮೀಪ ಅಂಬಡಗಟ್ಟಿ ಕ್ರಾಸ್ ಬಳಿ ಕಾರು ಅಪಘಾತಕ್ಕೀಡಾಗಿ ಸಚಿವರು ಗಾಯಗೊಂಡಿದ್ದರು. ಅವರ ಬೆನ್ನು, ಕುತ್ತಿಗೆ, ಕಾಲು ಮತ್ತು ಕೈಗೆ ಗಾಯಗಳಾಗಿದ್ದವು. ಬೆನ್ನಿನಲ್ಲಿ ಫ್ರ್ಯಾಕ್ಚರ್ ಆಗಿದ್ದರಿಂದ ಅವರನ್ನು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ.ರವಿ ಪಾಟೀಲ ಅವರ ತಂಡ ಸಚಿವರಿಗೆ ಚಿಕಿತ್ಸೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾ, ಕರ್ನಾಟಕದ ಸಚಿವರು, ಹಲವಾರು ಮಠಾಧೀಶರು ಸೇರಿದಂತೆ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಆಗಮಿಸಿ ಸಚಿವರ ಆರೋಗ್ಯ ವಿಚಾರಿಸಿದ್ದಲ್ಲದೆ., ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು. ಇದೀಗ ಸಚಿವರು ಗುಣಮುಖರಾಗಿದ್ದು, ಭಾನುವಾರ ಮನೆಗೆ ತೆರಳುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ