ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ಸಚಿವರ ಮಿಂಚಿನ ಸಂಚಾರ
* *ನೊಂದ ಕುಟುಂಬಗಳಿಗೆ ಧೈರ್ಯ ತುಂಬಿ, ಸಮಾಧಾನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
* *ಪ್ರವಾಹ ಪರಿಸ್ಥಿತಿ ಅವಲೋಕಿಸಿ, ಸಂತ್ರಸ್ತರಿಗೆ ವೈಯಕ್ತಿಗೆ ಆರ್ಥಿಕ ಸಹಾಯ ಮಾಡಿದ ಸಚಿವೆ*
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಸತತ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಭೇಟಿ ನೀಡಿ, ಸಂತ್ರಸ್ತರ ಕಣ್ಣೀರು ಒರೆಸಿದರು. ಜನರ ಸಮಸ್ಯೆಗಳನ್ನು ಅಲಿಸುವುದರ ಜೊತೆಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡುವ ಮೂಲಕ ಸ್ಪಂದಿಸಿದರು.
ಖಾನಾಪುರ ತಾಲೂಕಿನ ಮಲಪ್ರಭಾ ಸೇತುವೆಯ ವೀಕ್ಷಣೆ ಮಾಡಿದ ಸಚಿವರು, ನದಿಗೆ ನೀರಿನ ಒಳಹರಿವಿನ ಪ್ರಮಾಣ ಮತ್ತು ಸಧ್ಯದ ಪರಿಸ್ಥಿತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಖ್ಯ ರಸ್ತೆಯಲ್ಲಿರುವ ಸೇತುವೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದು, ತುರ್ತಾಗಿ ಎರಡೂ ಕಡೆಯ ಗ್ರಿಲ್ ಗಳ ದುರಸ್ತಿಗೆ ಸೂಚಿಸಿದರು.
ಜೊತೆಗೆ ತಾಲೂಕಿನಲ್ಲಿ ಬೆಳೆ ನಷ್ಟ, ಮನೆ ಹಾನಿ ಸೇರಿದಂತೆ ಇನ್ನಿತರ ಸಂಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
* *ಮೃತ ಮಹಿಳೆ ಕುಟುಂಬಕ್ಕೆ ನೆರವು*
ಮೂಲಸೌಕರ್ಯ ಕೊರತೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಅಮಗಾಂವ್ ಗ್ರಾಮದ ಅನಾರೋಗ್ಯ ಪೀಡಿತ ಮಹಿಳೆಯನ್ನು ಗ್ರಾಮಸ್ಥರು ಹೊತ್ತು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೆ ಈಚೆಗೆ ಮೃತಪಟ್ಟಿದ್ದರು. ಮಹಿಳೆ ಹರ್ಷದಾ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸಚಿವರು ವೈಯಕ್ತಿಕ ಪರಿಹಾರ ನೀಡಿದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು, ಇನ್ಮುಂದೆ ಇಂಥ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ, ರುಮೇವಾಡಿ ಸೇತುವೆಯನ್ನು ಸಹ ಸಚಿವರು ಪರಿಶೀಲಿಸಿದರು. ಅಲ್ಲಿಂದ ಚಿಕ್ಕಹಟ್ಟಿಹೊಳಿ ಹಾಗೂ ಹಿರೆಹಟ್ಟಿಹೊಳಿ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಮನೆಗಳು ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನೆ ಸಂಪಬರ್ಣವಾಗಿ ಬಿದ್ದು ಹಾನಿಯಾದರೂ ಅಧಿಕಾರಿಗಳು ಭಾಗಶಃ ಬಿದ್ದಿದೆ ಎಂದು ವರದಿ ನೀಡಿರುವ ಕುರಿತು ಎಂಜಿನಿಯರ್ ತರಾಟೆಗೆ ತೆಗೆದುಕೊಂಡ ಸಚಿವರು, ಅಧಿಕಾರಿಗಳು ಮಾಡುವ ತಪ್ಪಿನಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬಿದ್ದಿರುವ ಮನೆಯನ್ನು ನೀವು ಉಳಿದುಕೊಳ್ಳಲು ಸಾಧ್ಯವೇ? ಸರಕಾರ ಪರಿಹಾರ ಕೊಡಲು ಸಿದ್ದವಿರುವಾಗ ನೀವು ಈ ರೀತಿ ವರದಿ ಕೊಡಟ್ಟಿದ್ದೇಕೆ? ಇಂತಹ ಮನೆಯಲ್ಲಿ ನೀವು ಉಳಿದುಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕೆಲವು ಅಧಿಕಾರಿಗಳು ಕಟುಕರ ರೀತಿ ಕೆಲಸ ಮಾಡುತ್ತಿದ್ದಾರೆ. ಹೃದಯವಂತಿಕೆಯಿಂದ ಕೆಲಸ ಮಾಡಬೇಕು. ಇಲ್ಲಿನ ಪರಿಸ್ಥಿತಿ ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ತಪ್ಪು ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತೇನೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಚಿಕ್ಕಹಟ್ಟಿಹೊಳಿ ಮಲಪ್ರಭಾ ಸೇತುವೆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಗತ್ಯ ತಡೆಗೊಡೆ ಹಾಗೂ ಸೇತುವೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರವಾಹ ಪರಿಹಾರ ಕೊಡಲು ಅಗತ್ಯ ಹಣವಿದೆ. ಯಾವುದೇ ಸಮಸ್ಯೆ ಇಲ್ಲ. ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮನೆ ಕಳೆದುಕೊಂಡ ಹಲವು ಸಂತ್ರಸ್ತರಿಗೆ ಸಚಿವರು ತಮ್ಮ ವಯಕ್ತಿಕ ನಿಧಿಯಿಂದ ಆರ್ಥಿಕ ಸಹಾಯ ನೀಡಿದರು. ಸರಕಾರದಿಂದ ಸಾಧ್ಯವಾದಷ್ಟು ಹೆಚ್ಚು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಖಾನಾಪುರ ತಾಲೂಕಿನ ಜನರು ಸಚಿವರು ಹೋದಲ್ಲೆಲ್ಲ ಅತ್ಯಂತ ಪ್ರೀತಿಯಿಂದ ಬಂದು ಮಾತನಾಡಿಸುತ್ತಿದ್ದರು. ತಮ್ಮ ಬೇಡಿಕೆಗಳ ಅಹವಾಲು ಆಲಿಸುತ್ತಿದ್ದರು. ಹತ್ತಾರು ವರ್ಷಗಳಿಂದ ಈಡೇರದ ಬೇಡಿಕೆಗಳ ಕುರಿತು ಗಮನ ಸೆಳೆಯುತ್ತಿದ್ದರು. ಎಲ್ಲದಕ್ಕೂ ಕಿವಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮಾಧಾನದಿಂದ ಸ್ಪಂದಿಸಿದರು.
ವಿವಿಧ ಇಲಾಖೆೆಯ ಅದಿಕಾರಿಗಳು, ಕಾರ್ಯಕರ್ತರು ಜೊತೆಗಿದ್ದರು.
ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಧಿಕಾರಿಗಳು ಮಾನವೀಯತೆಯಿಂದ ಸಂತ್ರಸ್ತರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಇದಾದ ನಂತರ, ಬೆಂಡಿಗೇರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಪ್ರವಾಹದಿಂದ ಮನೆಗಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಪಡೆದರು. ಸಭೆಯ ಬಳಿಕ ಮಳೆಯಿಂದ ಹಾನಿಗೊಳಗಾಗಿರುವ ಮನೆಗಳನ್ನು ವೀಕ್ಷಿಸಿ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಧೈರ್ಯ ತುಂಬಿ, ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡಿರುವ ಹಿರೇ ಬಾಗೇವಾಡಿ ಗ್ರಾಮದ ಪಾರ್ವತಿ ಯಮ್ಮಿನಕಟ್ಟಿ, ಚಂಬಣ್ಣ ತಲ್ಲೂರ್, ಕಾಶವ್ವ ಪಡಗಲ್ ಹಾಗೂ ಸುಶೀಲಾ ನಾವಲಗಿ ಮತ್ತಿತರರ ಮನೆ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಸಂತ್ರಸ್ತರಿಗೆ ಧೈರ್ಯ ತುಂಬಿ, ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ