*ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಬೆಳಗಾವಿಗೆ 3 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಮಂಜೂರಾಗಿದ್ದು, ಅಲ್ಲಿನ ಸಿಬ್ಬಂದಿಗೆ ಸಚಿವರು ಗುರುವಾರ ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ವಿತರಿಸಿದರು.
ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆಯಿಂದಾಗಿ ಹೆಚ್ಚು ಮಹಿಳೆಯರು ಉದ್ಯೋಗ ಅವಕಾಶವನ್ನು ಅರಿಸಿ ಗ್ರಾಮೀಣ ಪ್ರದೇಶಗಳಿಂದ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದು ಅಂತಹ ಮಹಿಳೆಯರಿಗೆ ಸುರಕ್ಷಿತ ಹಾಗೂ ಯೋಗ್ಯ ವಸತಿ ಸೌಕರ್ಯವನ್ನು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆಯಾ ಜಿಲ್ಲೆಗಳ ಕಾರ್ಖಾನೆಗಳಲ್ಲಿ, ಹೊಟೇಲಗಳಲ್ಲಿ, ಉದ್ದಿಮೆಗಳಲ್ಲಿ, ಆಸ್ಪತ್ರೆಗಳಲ್ಲಿ, ಸಣ್ಣ ಕೈಗಾರಿಕೆಗಳಲ್ಲಿ, ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹ ಮಹಿಳೆಯರಿಗೆ ಅನುಕೂಲವಾಗುವಂತೆ ಬೆಳಗಾವಿ ಜಿಲ್ಲೆಗೆ 3 ವಸತಿ ನಿಲಯಗಳನ್ನು ಸರ್ಕಾರವು ಮಂಜೂರು ಮಾಡಿದೆ.
ಒಂಟಿ ಉದ್ಯೋಗಸ್ಥ ಮಹಿಳೆ, ವಿಧವೆ, ವಿಚ್ಛೇದಿತೆ, ವಿವಾಹಿತ ಉದ್ಯೋಗಸ್ಥ ಮಹಿಳೆ ಕೂಡ ಸೌಲಭ್ಯ ಪಡೆಯಬಹುದು.
ಆದರೆ ಅವರ ಕುಟುಂಬವು ಅದೇ ನಗರದಲ್ಲಿ ವಾಸಿಸಬಾರದು.
ವಿಕಲಚೇತನ ಮಹಿಳೆಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರು, ಮಹಿಳಾ ಕಾರ್ಮಿಕರಿಗೆ ಅವಕಾಶವಿರುತ್ತದೆ.
ಕಡಿಮೆ ಆದಾಯವುಳ್ಳ ಉದ್ಯೋಗಸ್ಥ ಮಹಿಳೆಯರಿಗೆ ಅವಕಾಶವಿರುತ್ತದೆ. 18 ವರ್ಷದ ಒಳಗಿನ ಹೆಣ್ಣು ಮಕ್ಕಳು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ 5 ವರ್ಷದ ಒಳಗಿನ ಮಕ್ಕಳೊಂದಿಗೆ ವಸತಿ ನಿಲಯದಲ್ಲಿ ವಾಸ್ತವ್ಯ ಪಡೆಯಬಹುದು.
ಉದ್ಯೋಗಸ್ಥ ಮಹಿಳೆಯರು ಸರ್ಕಾರದಿಂದ ನಡೆಯುವ ಶಿಶು ಪಾಲನಾ ಕೇಂದ್ರಗಳ ಸೌಲಭ್ಯವನ್ನು ಪಡೆಯಬಹುದು.
ಬೆಳಗಾವಿ ಜಿಲ್ಲೆಯಲ್ಲಿ 3 ಕೇಂದ್ರಗಳನ್ನು ಗುರುತಿಸಿದ್ದು, 1) ಉದ್ಯಮಬಾಗ 2) ಅಜಮನಗರ 3) ಶಿವಬಸವ ನಗರ
ಪ್ರತಿ ವಸತಿ ನಿಲಯದಲ್ಲಿ 50 ಜನ ಉದ್ಯೋಗಸ್ಥ ಮಹಿಳೆಯರಿಗೆ ಅವಕಾಶವಿರುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗುರುವಾರ ಬೆಳಗ್ಗೆ ವಸತಿ ನಿಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ನೀಡಿದರು.
ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ