
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಂದೆಡೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೆ ಇನ್ನೊಂದೆಡೆ ವಿಧಾನಸೌಧದ ಕ್ಯಾಂಟೀನ್ ನಲ್ಲೇ ಜನಪ್ರತಿನಿಧಿಗಳಿಬ್ಬರೂ ಹೊಡೆದಾಡಿಕೊಳ್ಳುವ ಹಂತಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಚಿವ ನಾರಾಯಣಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಗಲಾಟೆ ನಡೆದಿದ್ದು, ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಕಡೂರು ಕ್ಷೇತ್ರದ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ತಿಂಗಳಿಂದ ಅಲೆದರೂ ಕೆಲಸ ಮಾಡಿಕೊಡದ ಸಚಿವರ ನಡೆ ವಿರುದ್ಧ ಶಾಸಕ ಬೆಳ್ಳಿ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿವೇಶನಕ್ಕೆ ಹಾಜರಾದ ಶಾಸಕ ಬೆಳ್ಳಿ ಪ್ರಕಾಶ್, ವಿಧಾನಸೌಧದ ಕ್ಯಾಂಟೀನ್ ನಲ್ಲಿ ಸಚಿವ ನಾರಾಯಣಗೌಡ ಅವರನ್ನು ಭೇಟಿಯಾಗಿ ಈ ಬಗ್ಗೆ ಕೇಳಿದ್ದಾರೆ. ಆದರೆ ಸಚಿವರು ಕೆಲಸವಿದ್ದರೆ ಕಚೇರಿಯಲ್ಲಿ ಬಂದು ಮಾತಾಡು ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕ ಏಕವಚನದಲ್ಲಿ ಬೈದಿದ್ದಾರೆ. ಅಲ್ಲದೇ ಬೇರೆ ರಾಜ್ಯಗಳಲ್ಲಿ ಶಾಸಕರು ಹೇಳಿದ ಕೆಲಸ ತಕ್ಷಣ ಮಾಡಿಕೊಡಲಾಗುತ್ತೆ. ಆದರೆ ಇಲ್ಲಿ ಹಾಗಿಲ್ಲ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಚಿವರು-ಶಾಸಕರ ನಡುವೆ ಪರಸ್ಪರ ವಾಗ್ವಾದ ಗಲಾಟೆ ನಡೆದು ಶಾಸಕ ಬೆಳ್ಳಿ ಪ್ರಕಾಶ್ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇಬ್ಬರೂ ಹೊಡೆದಾಡಿಕೊಳ್ಳುವ ಹಂತಕ್ಕೂ ಹೋಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಶಾಸಕರನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ