ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಸಂಜೆ ರಾಜಿನಾಮೆ ನೀಡಿರುವ ಪೌರಾಡಳಿತ ಸಚಿವ, ರಾಣೆಬೆನ್ನೂರು ಶಾಸಕ ಆರ್.ಶಂಕರ್ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಬೆಳಗ್ಗೆ ಮತ್ತೊಬ್ಬ ಸಚಿವ ನಾಗೇಶ್ ಸಹ ರಾಜಿನಾಮೆ ನೀಡಿ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು.
ಸೋಮವಾರ ಸಂಜೆ ರಾಜಭವನಕ್ಕೆ ಭೇಟಿ ನೀಡಿದ ಆರ್.ಶಂಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 14ರಂದು ಎರಡನೇ ಬಾರಿಗೆ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು. ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆಯಲ್ಲಿ ನಡೆದ ಉಪಹಾರ ಕೂಟದಲ್ಲಿ ಆರ್.ಶಂಕರ್ ಪಾಲ್ಗೊಂಡಿದ್ದರು. ‘ಮೈತ್ರಿ ಸರ್ಕಾರದ ಜೊತೆ ಇರುತ್ತೇನೆ’ ಎಂದು ಅವರು ಭರವಸೆ ಕೊಟ್ಟಿದ್ದರು. ಆದರೆ, ಸಂಜೆ ರಾಜಭವನಕ್ಕೆ ತೆರಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ.
ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರು ಹಲವು ಬಾರಿ ಪಕ್ಷ ನಿಷ್ಠೆಯನ್ನು ಬದಲಾಯಿಸಿದ್ದಾರೆ. 2018ರ ಚುನಾವಣೆ ಫಲಿತಾಂಶ ಬಂದಾಗ ಕೆ.ಎಸ್.ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಸಚಿವ ಸ್ಥಾನದ ಭರವಸೆ ನೀಡಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಘೋಷಣೆ ಮಾಡಿದ್ದರು.
ಆರ್.ಶಂಕರ್ ಅವರು ಮೈತ್ರಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅರಣ್ಯ ಖಾತೆಯ ಹೊಣೆ ನೀಡಲಾಗಿತ್ತು. 2018ರ ಡಿಸೆಂಬರ್‌ನಲ್ಲಿ ಸಂಪುಟ ವಿಸ್ತರಣೆ ಮಾಡುವಾಗ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು.
2019ರ ಜೂನ್ 14ರಂದು ಸಂಪುಟ ವಿಸ್ತರಣೆಯ ವೇಳೆ ಆರ್.ಶಂಕರ್ ಪುನಃ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದರು. 2018ರಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ಮುಂಬೈಗೆ ಹೋಗಿದ್ದರು. ಆದರೆ, ಪುನಃ ಸರ್ಕಾರಕ್ಕೆ ಬೆಂಬಲ ಕೊಟ್ಟು ಕುಮಾರಸ್ವಾಮಿ ಸಂಪುಟ ಸೇರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ