ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ರಾಗಿಣಿ ನಟಿಯೆಂದು ಪ್ರಚಾರಕ್ಕೆ ಕರೆದಿದ್ದೆವು. ಆದರೆ ಡ್ರಗ್ಸ್ ಹುಡುಗಿಯೆಂದಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಗಿಣಿ ಎಂದು ಭಾವಿಸಿ ನಾವು ಪ್ರಚಾರಕ್ಕೆ ಕರೆ ತಂದಿದ್ವಿ. ಅದನ್ನು ಬಿಟ್ಟು ಡ್ರಗ್ಸ್ ಹುಡುಗಿ ಅಂತ ಕರೆದಿರಲಿಲ್ಲ. ಆಕೆಯ ಫೋಟೋ ಎಲ್ಲರ ಜೊತೆ ಇರಬಹುದು. ಡಿ.ಕೆ ಶಿವಕುಮಾರ್ ಜೊತೆಯೂ ಫೋಟೋ ಇರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಜೊತೆಯೂ ಇರಬಹುದು. ಕುಮಾರಸ್ವಾಮಿ ಜೊತೆಯೂ ಇರಬಹುದು. ಅದರ ಬಗ್ಗೆ ನಾನು ಮಾತಾಡಲ್ಲ ಎಂದರು.
ಡ್ರಗ್ಸ್ ಮಾಫಿಯಾ ಪ್ರಕರಣದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ತನಿಖೆ ನಡೆಯುತ್ತಿದೆ. ಎಷ್ಟೇ ಪ್ರಭಾವಿಗಳಿದ್ದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇನ್ನು ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ನಾವು 14 ತಿಂಗಳ ಕಾದಿದ್ದೇವೆ. ಕೋರ್ಟು, ಕಚೇರಿ ಎಂದು ಅಲೆದಾಡಿದ್ದೇವೆ. ನಂತರ ಸಿಎಂ ಹಾಗೂ ಪಕ್ಷದ ವರಿಷ್ಠರು ನಿರ್ಧಾರಗಳನ್ನು ಕೈಗೊಂಡರು. ಹಾಗೇ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ