Kannada NewsKarnataka NewsLatest

ಕಲಿಕೆಯಲ್ಲಿ ವಿಶೇಷ ಸಾಧನೆ ಮಾಡುವಂತೆ ಸಚಿವ ಸುರೇಶಕುಮಾರ್ ಕರೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಹೊಸ-ಹೊಸ ಪ್ರಯೋಗಗಳಿಗೆ ಮುಂದಾಗಬೇಕು, ಸರಳ ಪ್ರಯೋಗಗಳು, ಬೋಧನಾ ಉಪಕರಣಗಳ ಮೂಲಕ ಕಲಿಕೆಯಲ್ಲಿ ವಿಶೇಷ ಸಾಧನೆ ಮಾಡುವಂತೆ ಶಿಕ್ಷಣ ಸಚಿವ ಸುರೇಶಕುಮಾರ್ ಶಿಕ್ಷಕರಿಗೆ ಸೂಚಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಗಡಿಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತಂತೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ವಲಯಗಳ ಬಿಇಒಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಣ ಸಂಯೋಜಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಇಲಾಖೆಯ ಆಯುಕ್ತ ಮೆ.ಸಿದ್ಧಲಿಂಗಯ್ಯ ಹಿರೇಮಠ, ಈಗಾಗಲೇ ಬೆಳಗಾವಿ ವಿಭಾಗದಲ್ಲಿ ಶಾಲೆಗೆ ತೆರಳುವ ಪೂರ್ವದಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಶಿಕ್ಷಕರೂ ಸಹ ಸಾಕಷ್ಟು ಕಲಿಕಾಪೂರ್ವ ತಯಾರಿಯನ್ನು ಮಾಡಿಕೊಳ್ಳುವ ಮೂಲಕ ಮಕ್ಕಳ ಮನಮುಟ್ಟುವಂತೆ ಬೋಧಿಸಲು ಪ್ರಯತ್ನ ಪಡುತ್ತಿದ್ದಾರೆ. ಪರಿಣಾಮ ಬೆಳಗಾವಿ ಜಿಲ್ಲೆ ವಿದ್ಯಾಗಮ ಚಟುವಟಿಕೆಗಳಲ್ಲಿ ವಿಶೇಷ ಪ್ರಯುತ್ನ ಮಾಡುತ್ತಿದೆ. ಶಿಕ್ಷಕರು ವಿಶೇಷ ಚಟುವಟಿಕೆಗಳ ಮೂಲಕ ಪರಿಣಾಮಕಾರಿ ಬೋಧನೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ವಿವರಿಸಿದರು.
ಬಳಿಕ ಮಾತನಾಡಿದ ಸಚಿವರು, ಕೋವಿಡ್-೧೯ರಿಂದಾಗಿ ಈಗಾಗಲೇ ಈ ಸಲದ ಶೈಕ್ಷಣಿಕ ವರ್ಷದ ಮುಕ್ಕಾಲು ಭಾಗ ಮುಗಿಯುತ್ತ ಬಂದರೂ ಪೂರ್ಣಪ್ರಮಾಣದ ಶಾಲೆಗಳ ಆರಂಭಕ್ಕೆ ಸಾಧ್ಯವಾಗುತ್ತಿಲ್ಲ. ವಿದ್ಯಾಗಮ ಹಾಗೂ ಇತರೆ ಆಯಾಮಗಳಿಂದ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಪ್ರಯತ್ನಗಳು ನಡೆಯುತ್ತಿವೆ. ಆದರೂ ಕೋವಿಡ್ ಭಯದಿಂದಾಗಿ ಪಾಲಕರೂ ಸೇರಿದಂತೆ ಮಕ್ಕಳಲ್ಲಿ ನಕಾರಾತ್ಮಕ ಧೋರಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿವೆ. ಈ ಕಾರಣದಿಂದ ಪಾಲಕರು ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಿಕ್ಷಕರು ಮಕ್ಕಳಲ್ಲಿ ನಕಾರಾತ್ಮಕ ಮನೋಭಾವ ಹೋಗಲಾಡಿಸಿ ಸಕಾರಾತ್ಮಕ ಧೋರಣೆಗಳನ್ನು ಅಳವಡಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಹೊಸ-ಹೊಸ ಮತ್ತು ಸುಲಭವಾದ ಪ್ರಯೋಗಗಳ ಮೂಲಕ ಪರಿಣಾಮಕಾರಿ ಬೋಧನೆಯತ್ತ ಗಮನಹರಿಸಬೇಕು ಎಂದರು.
ಸಭೆಯಲ್ಲಿ ಬೆಳಗಾವಿ ಡಿಡಿಪಿಐ ಎಬಿ ಪುಂಡಲೀಕ, ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನೀಕೇರಿ, ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ, ಬಿಆರ್‌ಸಿ ಕೋ-ಆರ್ಡಿನೇಟರ್ ಅಪ್ಪಣ್ಣ ಅಂಬಗಿ, ವ್ಯವಸ್ಥಾಪಕ ಪ್ರಕಾಶ ಹೊಸಮನಿ ಸೇರಿದಂತೆ ಜಿಲ್ಲೆಯ ಬಿಇಒಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಣ ಸಂಯೋಜಕರು ಭಾಗವಹಿಸಿದ್ದರು. ಸಭೆಯ ಬಳಿಕ ಸಚಿವರು ಕೋವಿಡ್ ನಂತರದ ಶಾಲಾ ಚಟುವಟಿಕೆಗಳಲ್ಲಿ ಶಿಕ್ಷಕರು ಎದುರಿಸುವ ಕುಂದುಕೊರತೆಗಳನ್ನು ಆಲಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button