ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಡಿಓಗಳು ರಾಕ್ಷಸರು ಎಂದು ಕರೆದಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ವಸತಿ ಸಚಿವ ವಿ.ಸೋಮಣ್ಣ, ನಾನು ಯಾರ ಬಗ್ಗೆಯಾದರೂ ಅಪಚಾರ ಮಾಡಿದ್ದರೆ ನೇಣು ಹಾಕಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸಬೇಕು. ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಲಿಲ್ಲವೆಂದರೆ ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ ಎಂದರು.
180 ವಿಧಾನಸಭಾ ಕ್ಷೇತ್ರದಲ್ಲಿ 5 ಲಕ್ಷ 40 ಸಾವಿರ ಮನೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸಿಗಲಿದೆ. ಆದರೆ ಅರ್ಹ ಫಲಾನುಭವಿಗಳ ನಡುವೆ ಅನರ್ಹರು ಸಿಕ್ಕಿದ್ದಾರೆ. ಈ ಯೋಜನೆಯನ್ನು ಪಿಡಿಓಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಪಿಡಿಓಗಳು ಹೇಳಿದ್ದು ಎಲ್ಲವೂ ಸರಿ ಇರೋದಿಲ್ಲ. ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಇರ್ತಾರೆ ಎಂದಿದ್ದೇನೆ. ಪಿಡಿಓಗಳೆಲ್ಲರೂ ರಾಕ್ಷಸರು ಎಂದು ಹೇಳಿಲ್ಲ. ಕೆಲವರನ್ನಷ್ಟೇ ರಾಕ್ಷಸರು ಎಂದಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಒಳ್ಳೆಯ ಪಿಡಿಓಗಳಿಗೆ ರಾಕ್ಷಸರು ಅಂತ ಹೇಳುವ ಚಟ ನನಗಿಲ್ಲ ಎಂದು ಹೇಳಿದರು.
ಅರ್ಹ ಫಲಾನುಭವಿಗಳಿಗೆ ಮನೆ ಸಿಗಬೇಕು ಎಂಬುದು ನನ್ನ ಉದ್ದೇಶ. ಕೆಲ ಪಿಡಿಓಗಳು ಅನರ್ಹರಿಗೂ ಮನೆ ನೀಡಿದ್ದಾರೆ. ಕೊಟ್ಟಿಗೆ ಕಟ್ಟಲೂ ಹಣ ನೀಡಿದರೆ ಹೇಗೆ? ಕೆಲವು ಪಿಡಿಓಗಳ ಮೇಲೆ ಎಫ್ ಐಆರ್ ಹಾಕಿದ್ದೇವೆ. ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಅನರ್ಹರಿಗೂ ಮನೆ ಸಿಕ್ಕಿದೆ ಅಂದ್ರೆ ಕೆಲ ಪಿಡಿಓಗಳೇ ನೇರ ಕಾರಣರಾಗಿರುತ್ತಾರೆ. ಅದನ್ನು ಸರ್ಕಾರ ಒಪ್ಪುವುದಿಲ್ಲ. ಹೀಗಾಗಿ ಕೆಲ ಪಿಡಿಓಗಳು ರಾಕ್ಷಸರು ಎಂದು ಬೈದಿರುವುದು ನಿಜ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇದರಿಂದ ಹಲವು ಪಿಡಿಓಗಳಿಗೆ ಬೇಸರವಾಗಿದ್ದರೆ ವಿಷಾದಿಸುತ್ತೇನೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ