ಗೃಹಲಕ್ಷ್ಮೀ ನೋಂದಣಿಗೆ ಲಾಗಿನ್ ದುರ್ಬಳಕೆ -ಹಣ ವಸೂಲಿ ಪ್ರಕರಣ: ಇಬ್ಬರ ವಿರುದ್ಧ ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿಗಾಗಿ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ದರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಬೆಳಗಾವಿ ನಗರದ ಚವಾಟಗಲ್ಲಿಯಲ್ಲಿ ಜನತಾ ಆನ್ ಲೈನ್ ಸೆಂಟರ್ ನಡೆಸುತ್ತಿರುವ ಅದೃಶ್ ಆರ್.ಟಿ. ಹಾಗೂ
ಮುತಗಾ ಗ್ರಾಮ ಒನ್ ಕೇಂದ್ರದ ಕಿರಣ ಚೌಗಲಾ ಎಂಬುವರ ವಿರುದ್ಧ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಚವಾಟಗಲ್ಲಿಯ ಜನತಾ ಆನ್ ಲೈನ್ ಕೇಂದ್ರದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿಗೆ ಹಣ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಇಂದು ಅಧಿಕಾರಿಗಳ ತಂಡವು ದಾಳಿ ನಡೆಸಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ್, ಬೆಳಗಾವಿ ತಹಶಿಲ್ದಾರ ಸಿದ್ದರಾಯ ಬೋಸಗಿ ಹಾಗೂ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಜಂತ್ರಿ ಅವರು ಜನತಾ ಆನ್ ಲೈನ್ ಕೇಂದ್ರದ ಮೇಲೆ ದಾಳಿ ನಡೆಸಿ ಅಕ್ರಮವನ್ನು ಪತ್ತೆ ಮಾಡಿದ್ದರು.
ಇದಾದ ಬಳಿಕ ಸದರಿ ಕೇಂದ್ರಕ್ಕೆ ಬೀಗ ಜಡಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ಮುತಗಾ ಗ್ರಾಮ ಒನ್ ಕೇಂದ್ರದ ಪರವಾನಿಗೆಯನ್ನು ಕೂಡ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ