Kannada NewsKarnataka NewsLatest

ಟ್ರಾಫಿಕ್ ಪೊಲೀಸರ ವಿರುದ್ಧ ಶಾಸಕ ಅಭಯ ಪಾಟೀಲ ಗರಂ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಟ್ರಾಫಿಕ್ ಪೊಲೀಸರು ಬೆಳಗಾವಿಗೆ ಬರುವ ಹೊರ ರಾಜ್ಯದ ಪ್ರವಾಸಿಗರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಶಾಸಕ ಅಭಯ ಪಾಟೀಲ, ತಕ್ಷಣ ನಿಲ್ಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಮೊದಲೇ ಬೆಳಗಾವಿಯಲ್ಲಿ ಕೊರೊನಾ, ಪ್ರವಾಹಗಳಿಂದಾಗಿ ವ್ಯಾಪಾರ ವಹಿವಾಟು ಬಂದ್ ಆಗಿದೆ. ಈಗ ಗೋವಾ ಸೇರಿದಂತೆ ಹೊರ ರಾಜ್ಯಗಳಿಂದ ಇಲ್ಲಿಗೆ ಪ್ರವಾಸಿಗರು ಬರುವುದಕ್ಕೂ ಅಡ್ಡಿ ಪಡಿಸಿದರೆ ಪರಿಣಾಮ ಗಂಭೀರವಾಗಲಿದೆ. ಹಾಗಾಗಿ ತಕ್ಷಣ ಕಿರುಕುಳ ನಿಲ್ಲಿಸಬೇಕು ಎಂದು ಅವರು ಹೇಳಿದರು.

ವಾಹನ ತಪಾಸಣೆ ನೆಪದಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ದೂರು ಜನಸಾಮಾನ್ಯರಿಂದ, ವ್ಯಾಪಾರಸ್ಥರಿಂದ ಹಾಗೂ ಗೋವಾದ ಸಚಿವರಿಂದ ಕೂಡ ಬಂದಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ. ತಪಾಸಣೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕಿರುಕುಳ ನೀಡಿದರೆ ಪ್ರವಾಸಿಗರು ಬರುವುದನ್ನೇ ನಿಲ್ಲಿಸುತ್ತಾರೆ. ಇದರಿಂದ ಇಲ್ಲಿನ ವ್ಯಾಪಾರ ವಹಿವಾಟಿಗೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ಅಭಯ ಪಾಟೀಲ ಹೇಳಿದರು.

ಕರ್ನಾಟಕದ ವಾಹನಗಳಿಗೆ ಮಹಾರಾಷ್ಟ್ರ ಮತ್ತು ಗೋವಾ ಗಡಿಯಲ್ಲಿ ಕಿರುಕುಳ ನೀಡುವುದಕ್ಕೂ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಕೂಡ ಮೂರೂ ರಾಜ್ಯಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಕುಳಿತು ಮಾತನಾಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button