Kannada NewsKarnataka News

ತರಕಾರಿ ಖರೀದಿಸಿ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ಆಲಿಸಿದ ಶಾಸಕಿ ಅಂಜಲಿ ನಿಂಬಾಳಕರ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಬುಧವಾರ ತಾಲ್ಲೂಕಿನ ನಂದಗಡ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸಾಮಾನ್ಯ ಜನರಂತೆ ಸುತ್ತಾಡಿ ತರಕಾರಿ ಖರೀದಿಸುವುದರ ಜೊತೆಗೆ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆ ಆಲಿಸಿದರು.
ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ನಂದಗಡಕ್ಕೆ ಭೇಟಿ ನೀಡಿದ್ದ ಅವರು ನಂದಗದ ಸಂತೆಯನ್ನು ಒಂದು ಪೂರ್ಣ ಸುತ್ತು ಹಾಕಿ ಸಂತೆಯಲ್ಲಿ ತಮ್ಮ ಮನೆಬಳಕೆಗೆ ಬೇಕಾದ ಗಜ್ಜರಿ, ಬೀಟರೂಟ್, ಪಾಲಕ್, ಬೀನ್ಸ್ ಸೌತೆಕಾಯಿ ಮತ್ತಿತರ ತರಕಾರಿಗಳನ್ನು ಖರೀದಿಸಿದರು. ಬಳಿಕ ಬೀದಿಬದಿ
ವ್ಯಾಪಾರಸ್ಥರೊಂದಿಗೆ ಸಂವಾದ ನಡೆಸಿ ಕೋವಿಡ್ ನಂತರದ ವ್ಯಾಪಾರ ವಹಿವಾಟಿನ ಬಗ್ಗೆ
ಅವರಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ತರಕಾರಿ ಖರೀದಿಸುವ ಸಲುವಾಗಿ ಸಂತೆಗೆ ಆಗಮಿಸಿದ ಸಾರ್ವಜನಿಕರನ್ನು
ಮಾತನಾಡಿಸಿದ ಶಾಸಕರು, “ಗ್ರಾಹಕರು ರೈತರು ಬೆಳೆದ ಉತ್ಪನ್ನಗಳನ್ನು ಖರೀದಿಸುವ ಮೂಲಕ
ಅವರನ್ನು ಬೆಂಬಲಿಸಬೇಕು. ಸತತ 2 ವರ್ಷಗಳಿಂದ ಸತತವಾಗಿ ಕೋವಿಡ್ ಆತಂಕದಿಂದ
ಸಂಕಷ್ಟದಲ್ಲಿರುವ ಅವರಿಗೆ ಪ್ರೋತ್ಸಾಹ ನೀಡಬೇಕು. ಸ್ಥಳೀಯ ರೈತರು ತಾವು ಬೆಳೆದಿರುವ
ಸಪೋಟ, ಬಾಳೆ ಹಣ್ಣು, ಹಸಿರು ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಈಗ ಮಾರುಕಟ್ಟೆಗೆ
ತರುತ್ತಿದ್ದು, ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರ ನೆರವಿಗೆ ಧಾವಿಸಬೇಕು” ಎಂದು
ಕರೆ ನೀಡಿದರು.
ಈ ಸಂದರ್ಭದಲ್ಲಿ ಅನಿತಾ ದಂಡಗಲ್, ಮಹಾದೇವ ಕೋಳಿ, ಸುರೇಶ ಜಾಧವ ಮತ್ತಿತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button