
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯನ್ನೇ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ನಿಂದಿಸಿ ಕಳುಹಿಸಿದ ಘಟನೆ ಬೆಂಗಳೂರಿನ ವರ್ತೂರು ಬಳಿ ನಡೆದಿದೆ.
ವರ್ತೂರಿ ಕೆರೆ ಕೋಡಿ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ. ಮಹಿಳೆ ರೂತ್ ಮೇರಿ ಎಂಬುವವರು ಮಳೆ ಹಾನಿಯಿಂದ ಆದ ಸಮಸ್ಯೆ ಬಗ್ಗೆ ಹೇಳಿಕೊಂಡು ಮನವಿ ಪತ್ರ ಸಲ್ಲಿಸಲು ಬಂದಿದ್ದರು. ಈ ವೇಳೆ ಮಹಿಳೆಯಿಂದ ಮನವಿ ಪತ್ರ ಕಸಿದುಕೊಂಡ ಶಾಸಕರು, ಸುಮ್ಮನೆ ಇಲ್ಲಿಂದ ಹೋಗು ಬೇರೆ ಭಾಷೆಯಲ್ಲಿ ಮಾತನಾಡಬೇಕಾಗುತ್ತೆ ಎಂದು ಗುಡುಗಿದ್ದಾರೆ.
ಇದಕ್ಕೆ ಮಹಿಳೆ ಮನವಿ ಪತ್ರ ಸಲ್ಲಿಸಲು ಬಂದಿದ್ದೇನೆ ಗೌರವವಾಗಿ ಮಾತನಾಡಿ ಎಂದು ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೋಪಗೊಂಡ ಶಾಸಕರು ನಿನಗೆ ಮಾನ ಮರ್ಯಾದೆ ಇದೆಯಾ? ಗೌರವ ಬೇರೆ ಕೊಡಬೇಕಾ? ನಾಚಿಕೆಯಾಗಲ್ವಾ? ಒದ್ದು ಒಳಗೆ ಹಾಕ್ತೀನಿ ಎಂದು ಗದರಿದ್ದಾರೆ.
ಇದೇ ವೇಳೆ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಗಂಟೆಗಟ್ಟಲೆ ಕೂರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶಾಸಕರು ಮಹಿಳೆಯನ್ನು ಬಾಯಿಗೆ ಬಂದಂತೆ ಬೈದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುರುಘಾಶ್ರೀ ನೀಡಿದ್ದ ಬಸವಶ್ರೀ ಪ್ರಶಸ್ತಿ ವಾಪಸ್ ನೀಡಲು ನಿರ್ಧರಿಸಿದ ಪತ್ರಕರ್ತ