ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದೆಯೇ? ಹೀಗೊಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ ಕಾಂಗ್ರೆಸ್ ಶಾಸಕರುಗಳ ಮಾತು.
ಸಂಪುಟ ಬದಲಾವಣೆಯಾಗಲಿದೆ ಎಂದು ಶಾಸಕ ಅಶೋಕ್ ಪಟ್ಟಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ, ಎರಡೂವರೆ ವರ್ಷದ ಬಳಿಕ ಸಂಪುಟ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ. ನಾನು ಹಿರಿಯ ಶಾಸಕ, ಮಂತ್ರಿಯಾಗಬೇಕಿತ್ತು. ಆದರೆ ಆಗಿಲ್ಲ. ಎರಡೂವರೆ ವರ್ಷದ ಬಳಿಕ ಮಂತ್ರಿ ಮಾಡೋದಾಗಿ ಹೇಳಿದ್ದಾರೆ ಎಂದರು.
ಅನುಭವ ನೋಡಿ ಮಂತ್ರಿ ಮಾಡಿ ಎಂದು ನಾನು ಮನವಿ ಮಾಡಿದ್ದೇನೆ. ಅವರು ಜಾತಿ ನೋಡಿ ಮಂತ್ರಿ ಮಾಡಿದ್ದಾರೆ. ಹೀಗಾಗಿ ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಎರಡುವರೆ ವರ್ಷದ ಬಳಿಕ ಸಚಿವ ಸ್ಥಾನ ಕೊಡ್ತಾರೆ ಎಂಬ ನಂಬಿಕೆ ಇದೆ. ಸಂಪುಟ ಪುನಾರಚನೆ ಮಾಡ್ತಾರೋ ಅಥವಾ ನಾಲ್ಕೈದು ಸ್ಥಾನ ಬದಲಾಯಿಸುತ್ತಾರೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಹಿರಿಯರು, ಕಿರಿಯರು ಅಂತ ಇಲ್ಲ. ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೇ ಅದೃಷ್ಟ ಇದ್ದವರು ಮಂತ್ರಿಗಳಾಗ್ತಾರೆ ದುರಾದೃಷ್ಟ ಇದ್ದ ನಮ್ಮಂತವರು ಹೀಗೆ ಮಾತಾಡ್ತಾರೆ. ಎಲ್ಲ ಇದ್ದರೂ ನನ್ನ ಕ್ಷೇತ್ರ ಸರಿಯಿಲ್ಲ ಅಂತ ಕಾಣುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಶಾಸಕ ಹ್ಯಾರಿಸ್ ಕೂಡ ಸಂಪುಟ ಬದಲಾಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ಸರ್ಕಾರ ಒಳ್ಳೆ ಆಡಳಿತ ಕೊಟ್ಟಿದೆ, ಸಂಪುಟ ಬದಲಾಗುವುದರಲ್ಲಿ ತಪ್ಪೇನಿಲ್ಲ, ನಾವು ಕೆಲಸ ಮಾಡಿದ್ದೇವೆ. ಸಚಿವ ಸ್ಥಾನ ಕೊಡಬೇಕು, ಕೊಡ್ತೀವಿ ಎಂದಿದ್ದಾರೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ